ಹೈನುಗಾರಿಕೆಯಿಂದ ಪ್ರಗತಿ ಸಾಧಿಸಿ

20-pnp 1
Published on

ಪಾಂಡವಪುರ: ಗ್ರಾಮಾಂತರ ಪ್ರದೇಶದ ರೈತರ ಆರ್ಥಿಕ ಚಟುವಟಿಕೆ ಉತ್ತಮವಾಗಿರಲು ಹೈನುಗಾರಿಕೆ ಬಹಳ ಮುಖ್ಯವಾಗಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.


ತಾಲೂಕಿನ ನಾರ್ತ್‌ಬ್ಯಾಂಕ್ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಟ್ಟಡ ಉದ್ಘಾಟನೆ ಹಾಗೂ ಸಂಘದ ವಾರ್ಷಿಕ ಸಾಮಾನ್ಯ ಸಭೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಹೈನುಗಾರಿಕೆಯಿಂದಾಗಿ ಗ್ರಾಮೀಣ ಪ್ರದೇಶದ ಜನರಲ್ಲಿ ನಿತ್ಯವೂ ಹಣ ಚಲಾವಣೆಯಲ್ಲಿರುತ್ತದೆ. ಹಳ್ಳಿಗಳಲ್ಲಿ ಡೇರಿ ಬೆಳವಣಿಗೆ ಅತ್ಯಾವಶ್ಯಕವಾಗಿರುತ್ತದೆ. ಹಣಕಾಸು ವ್ಯವಹಾರದಲ್ಲಿ ಲೋಪವಾಗದಂತೆ ಪ್ರತಿಯೊಬ್ಬರೂ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.


ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಮಾತನಾಡಿ, ಡೇರಿಗಳಿಗೆ ಸ್ವಂತ ನಿವೇಶನ ಮತ್ತು ಕಟ್ಟಡ ಇದ್ದರೆ ಅವು ಉತ್ತಮವಾಗಿ ಬೆಳೆಯುತ್ತವೆೆ. ಹಾಲು ಶೇಖರಣೆ, ಗಣಕ ಯಂತ್ರ, ಹಾಲು ಪರೀಕ್ಷೆ ಸೇರಿದಂತೆ ಎಲ್ಲವನ್ನೂ ವ್ಯವಸ್ಥಿತವಾಗಿ ಜೋಡಣೆ ಮಾಡಿಕೊಳ್ಳಲು ಸ್ವಂತ ಕಟ್ಟಡದ ಅವಶ್ಯಕತೆ ಪ್ರತಿಯೊಂದು ಸಹಕಾರ ಸಂಘಗಳಿಗೂ ಅಗತ್ಯವಾಗಿದೆ ಎಂದರು.


ತಾಲೂಕಿನ ಸಾಕಷ್ಟು ಡೇರಿಗಳಿಗೆ ಸ್ವಂತ ಕಟ್ಟಡ ಇಲ್ಲ. ಅವುಗಳಿಗೆ ನಿವೇಶನ ಒದಗಿಸಿ ಕಟ್ಟಡ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಇದಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಸಹಕಾರ ಅತ್ಯಗತ್ಯ ಎಂದರು.


ತಾಲೂಕಿನಲ್ಲಿ 147 ಡೇರಿ ಇವೆ. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಮಾಡಬಾರದು, ಸಂಘದಲ್ಲಿ ರಾಜಕಾರಣ ಬೆರೆತರೆ ಅಭಿವೃದ್ಧಿ ಹೊಂದುವುದಿಲ್ಲ. ಜಿಲ್ಲೆಯಲ್ಲಿ ಹೈನುಗಾರಿಕೆ ಜೀವಂತವಾಗಿದ್ದು ಕಷ್ಟ ಕಾಲದಲ್ಲಿ ರೈತರ ಕೈಹಿಡಿಯುತ್ತಿದೆ. ಪ್ರತಿನಿತ್ಯ 9.28 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಹಾಲಿನ ಗುಣಮಟ್ಟದಲ್ಲಿ ಪಾಂಡವಪುರ ಎರಡನೇ ಸ್ಥಾನದಲ್ಲಿದೆ ಎಂದರು.


ಮನ್‌ಮುಲ್ ಅಧ್ಯಕ್ಷ ಬೋರೇಗೌಡ, ಡೇರಿ ಅಧ್ಯಕ್ಷೆ ಬಿ.ಎನ್.ನಾಗಮಣಿ, ಉಪಾಧ್ಯಕ್ಷೆ ವರಲಕ್ಷ್ಮೀ, ನಿರ್ದೇಶಕರಾದ ಭಾಗ್ಯಮ್ಮ, ಮಾಲಾಶ್ರೀ, ಪುಟ್ಟಲಕ್ಷ್ಮಮ್ಮ, ರೇಣುಕಾ ನಾಗರಾಜು, ಭಾರತಿ, ಸೌಮ್ಯಾ, ಮನ್‌ಮುಲ್ ವ್ಯವಸ್ಥಾಪಕ ಕೆ.ಪ್ರಭಾಕರ್, ಉಪ ವ್ಯವಸ್ಥಾಪಕ ಆರ್.ಪ್ರಸಾದ್, ಸಹಾಯಕ ವ್ಯವಸ್ಥಾಪಕಿ ನಿವೇದಿತಾ, ಮಾರ್ಗವಿಸ್ತರಣಾಧಿಕಾರಿ ಎಚ್.ಎನ್.ಉಷಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net