

ತಿ.ನರಸೀಪುರ: ರೈತ ಕುಟುಂಬಗಳಿಗೆ ಉಪ ಕಸುಬಾಗಿರುವ ಹೈನುಗಾರಿಕೆ ನಿಖರವಾದ ಆದಾಯವನ್ನು ತಂದು ಕೊಡುವುದರಿಂದ ಹಳ್ಳಿಗಾಡಿನ ಜನರಿಗೆ ವರದಾನವಾಗಿದೆ ಎಂದು ಮೈಮುಲ್ ಮಾರ್ಗ ವಿಸ್ತರಣಾಧಿಕಾರಿ ಆರ್.ಪ್ರಮೋದ್ ಹೇಳಿದರು.
ತಾಲೂಕಿನ ಎಂ.ಕೆಬ್ಬೆಹುಂಡಿ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಶನಿವಾರ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ರೈತರು ನಿತ್ಯವೂ ಜಿಲ್ಲಾ ಹಾಲು ಒಕ್ಕೂಟಕ್ಕೆ ಸರಬರಾಜು ಮಾಡುವ ಹಾಲಿಗೆ ಮಾರುಕಟ್ಟೆಯಲ್ಲಿ ಖಚಿತವಾದ ಬೆಲೆ ಸಿಗುವುದರಿಂದ ಗುಣಮಟ್ಟದ ಹಾಲನ್ನು ಉತ್ಪಾದಿಸಲು ಜಾನುವಾರುಗಳಿಗೆ ಖನಿಜಾಂಶ, ಪೋಷಕಾಂಶಗಳಿರುವ ಆಹಾರವನ್ನು ನೀಡಬೇಕೆಂದು ಸಲಹೆ ನೀಡಿದರು.
ಮುಖ್ಯ ಕಾರ್ಯನಿರ್ವಾಹಕ ಎಸ್.ಸಿದ್ದರಾಜು ಮಾತನಾಡಿ, ರಾಜ್ಯದಲ್ಲಿ 2024-25ನೇ ಸಾಲಿನಲ್ಲಿ ಸಂಘ 2.22 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, 2025-26ನೇ ಸಾಲಿಗೂ 7.56 ಲಕ್ಷ ರೂ. ಅಂದಾಜು ಬಜೆಟ್ ರೂಪಿಸಲಾಗಿದೆ. ಉತ್ಪಾದಕರ ಬೋನಸ್ 1,02,764 ರೂ. ಗಳನ್ನು ಕಾಯ್ದಿರಿಸಲಾಗಿದೆ ಎಂದು ಹೇಳಿದರು.
ಸಂಘಕ್ಕೆ ಅಧಿಕ ಪ್ರಮಾಣದಲ್ಲಿ ಗುಣಮಟ್ಟದ ಹಾಲನ್ನು ಸರಬರಾಜು ಮಾಡಿದ ಮುಖ್ಯ ಕಾರ್ಯನಿರ್ವಾಹಕ ಎಸ್. ಸಿದ್ದರಾಜು ಸೇರಿದಂತೆ ನಿಂಗರಾಜು ಹಾಗೂ ಪುಟ್ಟಮಾದಮ್ಮ ಅವರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು. ಮುಂಗಾರು ಹಂಗಾಮು ಕೃಷಿ ಚಟುವಟಿಕೆಗಳಲ್ಲಿ ರೈತರು ನಿರತರಾಗಿರುವುದರಿಂದ ಬಹುತೇಕ ನಿರ್ದೇಶಕರು ಹಾಗೂ ಹಾಲು ಉತ್ಪಾದಕ ಸದಸ್ಯರು ತಡವಾಗಿ ಆಗಮಿಸಿದರು.
ಸಭೆಯಲ್ಲಿ ಸಂಘದ ಅಧ್ಯಕ್ಷ ಕೆ.ಎಸ್.ಬಸಪ್ಪ, ಜಿಲ್ಲಾ ಒಕ್ಕೂಟದ ಮಾರ್ಗ ವಿಸ್ತರಣಾಧಿಕಾರಿ ಸಿ.ಅನಿತಾ, ನಿರ್ದೇಶಕರಾದ ಎನ್.ಮಹೇಶ್, ಎಂ. ಮಹದೇವಸ್ವಾಮಿ, ಮಹೇಶ, ನಾಗಣ್ಣ, ಮಹದೇವಯ್ಯ, ಶಿಶುಕುಮಾರ್, ಜಿ.ಜಯಪ್ಪ, ಸುಂದರಮ್ಮ, ದೊಡ್ಡತಾಯಮ್ಮ, ಕೆ. ಜಯರಾಜು, ಡಿ.ಸೋಮಣ್ಣ, ಮಂಚಯ್ಯ, ಹಾಲು ಪರೀಕ್ಷಕ ಎಂ.ಕಿರಣ್ ಹಾಗೂ ಹಾಲು ಉತ್ಪಾದಕ ಸದಸ್ಯರು ಇದ್ದರು.