ಸ್ವಾವಲಂಬಿ ಜೀವನಕ್ಕೆ ಹೈನುಗಾರಿಕೆ

ha
Published on

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ

ಗ್ರಾಮೀಣ ಭಾಗದ ಜನರ ಜೀವನೋಪಾಯಕ್ಕಾಗಿ ವರದಾನವಾಗಿರುವ ನರೇಗಾ ಯೋಜನೆಯಡಿ ಸಹಾಯಧನ ಪಡೆದು ಹೈನುಗಾರಿಕೆ ಆರಂಭಿಸಿ ಸ್ವಾವಲಂಬಿ ಜೀವನ ಮಾಡಬಹುದು ಎನ್ನುವುದು ಆಲೂರಿನ ಮಹಿಳೆಯೊಬ್ಬರು ನಿರೂಪಿಸಿದ್ದಾರೆ.

ಆಲೂರು ಗ್ರಾಮದ 55 ವರ್ಷ ಪ್ರಾಯದ ಜಲಜಾ ಅವರಿಗೆ ಹೈನುಗಾರಿಕೆಯೇ ಜೀವನಾಧಾರ. ಕೃಷಿ, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಅವರ ಆಸಕ್ತಿಗೆ ಮತ್ತಷ್ಟು ಆಸರೆ ತುಂಬಿದ್ದು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ.

ಜಲಜಾ ಹಲವು ವರ್ಷಗಳಿಂದ ಹೈನುಗಾರಿಕೆ ಮಾಡುತ್ತಿದ್ದರೂ ಜಾನುವಾರುಗಳಿಗೆ ಸರಿಯಾದ ಸೂರು ಇರಲಿಲ್ಲ. ಇದರಿಂದ ಹೆಚ್ಚಿನ ದನ ಸಾಕಲು ಕಷ್ಟವಾಗುತ್ತಿತ್ತು. ಅನಂತರ ಆಲೂರು ಗ್ರಾಪಂ ಸಂಪರ್ಕಿಸಿ ನರೇಗಾ ಯೋಜನೆಯಡಿ ದನ ಸಾಕಣೆ ಶೆಡ್(ಹಟ್ಟಿ), ಗೊಬ್ಬರ ಗುಂಡಿ ನಿರ್ಮಿಸಲು 2023ರಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಯೋಜನೆಯಡಿ ದನದ ಹಟ್ಟಿಗೆ 57 ಸಾವಿರ ರೂ. ಹಾಗೂ ಗೊಬ್ಬರ ಗುಂಡಿ ನಿರ್ಮಾಣಕ್ಕೆ 25 ಸಾವಿರ ರೂ. ಸಹಾಯಧನ ಪಡೆದು ಹೈನುಗಾರಿಕೆ ಮುಂದುವರಿಸಿದ್ದು, ಈಗ ಅದರಲ್ಲಿ ಯಶಸ್ಸು ಕಂಡಿದ್ದಾರೆ.

ಮೊದಲು 4-5 ದನಗಳಷ್ಟೇ ಇದ್ದವು. ನರೇಗಾ ಯೋಜನೆಯಡಿ ಜಾನುವಾರುಗಳಿಗೆ ಹಟ್ಟಿ ನಿರ್ಮಾಣಗೊಂಡಿದ್ದರಿಂದ ಹೆಚ್ಚಿನ ದನಗಳನ್ನು ಖರೀದಿಸಿದರು. ಈಗ ಒಟ್ಟು 14 ದನಗಳನ್ನು ಸಾಕುತ್ತಿದ್ದಾರೆ. ಇದರಲ್ಲಿ 10 ದನಗಳು ಹಾಲು ಕೊಡುತ್ತಿದ್ದು, ದಿನಕ್ಕೆ 58ರಿಂದ 60 ಲೀ. ಹಾಲು ದೊರೆಯುತ್ತಿದೆ. ದಿನಕ್ಕೆ ಸರಾಸರಿ 1,800 ರೂ.ನಿಂದ 2 ಸಾವಿರ ರೂ.ವರೆಗೆ ಆದಾಯ ಗಳಿಸುತ್ತಿದ್ದಾರೆ. ಜತೆಗೆ ಗೊಬ್ಬರ ಗುಂಡಿ ನಿರ್ಮಾಣದಿಂದ ಸಾವಯವ ಗೊಬ್ಬರ ತಯಾರಿಸಿ ತಮಗಿರುವ ಅಲ್ಪ ಕೃಷಿ ಜಮೀನಿಗೆ par ಬಳಸುತ್ತಿದ್ದಾರೆ.

ಸಹಾಯಧನಕ್ಕೆ ಏನು ಮಾಡಬೇಕು?

ನರೇಗಾದಡಿ ಹೈನುಗಾರಿಕೆ ಸಹಿತ ವಿವಿಧ ಸೌಲಭ್ಯ ಪಡೆಯಲು ಎಲ್ಲರಿಗೂ ಅವಕಾಶವಿದೆ. ಅದಕ್ಕಾಗಿ ಆಯಾಯ ಗ್ರಾಪಂಗೆ ಜಾಬ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್, ಭಾವಚಿತ್ರ, ಬ್ಯಾಂಕ್ ಖಾತೆ ವಿವರ, ಪಡಿತರ ಕಾರ್ಡ್ ಪ್ರತಿ ಕೊಡಬೇಕು. ಆ ಬಳಿಕ ಪಂಚಾಯಿತಿಯಿಂದ ಜಾಬ್ ಕಾರ್ಡ್ ಸಿಗುತ್ತದೆ. ನಂತರ ಹೈನುಗಾರಿಕೆ, ಮಲ್ಲಿಗೆ ಕೃಷಿ, ನರ್ಸರಿ ತೋಟ ಸಹಿತ ವಿವಿಧ ಕಾಮಗಾರಿಗೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬಹುದು.

ನರೇಗಾ ಯೋಜನೆಯಡಿ ದನದ ಹಟ್ಟಿ, ಗೊಬ್ಬರಗುಂಡಿ ನಿರ್ಮಿಸಿಕೊಂಡಿದ್ದರಿಂದ ಹೈನುಗಾರಿಕೆ ನಡೆಸಿ ಜೀವನ ಸಾಗಿಸಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಕೋಳಿ ಶೆಡ್ ನಿರ್ಮಿಸಿ, ಕೋಳಿ ಸಾಕಣೆ ಆರಂಭಿಸಬೇಕು ಎಂಬ ಯೋಚನೆಯಿದೆ. ಗ್ರಾಪಂ, ಅಧಿಕಾರಿಗಳ ಸಹಕಾರದಿಂದ ಇದೆಲ್ಲ ಸಾಧ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net