ಡೇರಿ ಎಲೆಕ್ಷನ್​ ವಾಮಮಾರ್ಗದಲ್ಲಿ ಮತದಾನ

de
Published on

ಕನಕಪುರ: ಬೆಂಗಳೂರು ಡೇರಿ ಚುನಾವಣೆಯಲ್ಲ್ಲಿ ಬೇಕಾದವರನ್ನು ಗೆಲ್ಲಿಸಲು ವಾಮಮಾರ್ಗದಲ್ಲಿ ಮತದಾನ ನಡೆಸಲಾಗಿದೆ ಎಂದು ಮಾಜಿ ಶಾಸಕ, ಜೆಡಿಎಸ್​ ಜಿಲ್ಲಾಧ್ಯಕ್ಷ ಎ.ಮಂಜು ಆರೋಪಿಸಿದರು.

ತಾಲೂಕಿನ ಸಾತನೂರು ಹೋಬಳಿ ಕಬ್ಬಾಳಿನಲ್ಲಿ ಬುಧವಾರ ಆಯೋಜಿಸಿದ್ದ ಜೆಡಿಎಸ್​ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿದ ಅವರು, ಎಚ್​.ಡಿ.ದೇವೇಗೌಡ, ಎಚ್​.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್​ ಸರ್ಕಾರ ರೈತರ ಸಾಲ ಮನ್ನಾ, ನೀರಾವರಿ ಯೋಜನೆಗಳಿಂದ ಜನರಿಗೆ ನೆಮ್ಮದಿ ನೀಡಿತ್ತು. ಆದರೆ, ಕಾಂಗ್ರೆಸ್​ ಸರ್ಕಾರ ಜನರಿಗೆ ಗ್ಯಾರಂಟಿ ನೀಡಿ ರಾಜ್ಯದ ಅಭಿವೃದ್ಧಿ ಕಡೆಗಣಿಸುತ್ತಿದೆ. ಅಲ್ಲದೆ ಚುನಾವಣೆಯಲ್ಲ್ಲಿ ನಕಲಿ ಕೂಪನ್​ ಗಿಫ್ಟ್​ ನೀಡಿ ಮಹಿಳೆಯರಿಗೆ ವಂಚಿಸಿತು. ಇದರಿಂದ ಎಚ್ಚೆತ್ತ ಮತದಾರರು ಲೋಕಸಭೆಯಲ್ಲಿ ಕಾಂಗ್ರೆಸ್​ಗೆ ಪಾಠ ಕಲಿಸಿದರು ಎಂದು ವ್ಯಂಗ್ಯವಾಡಿದರು.

ರಾಜ್ಯ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಒಮ್ಮತ ಎಲ್ಲಿದೆ? ಒಬ್ಬೊಬ್ಬ ಸಚಿವರನ್ನೇ ಕೈ ಬಿಡಲಾಗುತ್ತಿದೆ. ಆಡಳಿತ ಕುಸಿದಿದ್ದು, ಹಿರಿಯ ಸಚಿವ ರಾಜಣ್ಣನವರನ್ನು ವಜಾ ಮಾಡಿರುವುದು ಕಾಂಗ್ರೆಸ್​ನ ದಿವಾಳಿಯನ್ನು ತೋರಿಸುತ್ತದೆ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರು ಹಾಗೂ ತಮಿಳುನಾಡಿನ ಜನರನ್ನು ಕರೆತಂದು ಮತ ಹಾಕಿಸಿಕೊಂಡಿದ್ದರಿಂದ ಕನಕಪುರದಲ್ಲಿ ಡಿ.ಕೆ.ಶಿವಕುಮಾರ್​ ಗೆಲುವು ಸಾಧಿಸಿದ್ದರು. ಆದರೆ ಲೋಕಸಭಾ ಚುನಾವಣೆಯಲ್ಲಿ ಅಕ್ರಮಕ್ಕೆ ಅವಕಾಶ ಸಿಗದ ಕಾರಣ ಡಿ.ಕೆ.ಸುರೇಶ್​ ಸೋಲುಂಡರು ಎಂದರು.

ಸೋಲಿನ ಅಪಮಾನ ತಾಳಲಾರದೆ ಕಾಂಗ್ರೆಸ್​ ವರಿಷ್ಠರನ್ನು ಕರೆತಂದು ಮತಗಳ್ಳತನ ಹೇಳಿಕೆ ಕೊಡಿಸಿದ್ದಾರೆ. ಮತಗಳ್ಳತನದ ಮೂಲಸೂತ್ರದಾರರೇ ಡಿ.ಕೆ.ಸಹೋದರರು, ಅಕ್ರಮಗಳ ಪಿತಾಮಹರು. ತಾಲೂಕು ಜೆಡಿಎಸ್​ ಅಧ್ಯಕ್ಷ ಬಿ.ನಾಗರಾಜು ಮಾತನಾಡಿ, ರಾಜ್ಯದಿಂದ ಕಾಂಗ್ರೆಸ್​ ಸರ್ಕಾರವನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಜೆಡಿಎಸ್​ ಕಾರ್ಯಕರ್ತರು ಬೂತಮಟ್ಟದಿಂದ ಪಕ್ಷ ಸಂಟಿಸಬೇಕು ಎಂದರು.

ರಾಜ್ಯ ಯುವ ಜೆಡಿಎಸ್​ ಉಪಾಧ್ಯಕ್ಷ ಚಿನ್ನಸ್ವಾಮಿ ಮಾತನಾಡಿ, ಮತದಾನದ ಅಕ್ರಮಗಳಲ್ಲಿ ಸಿಂಹಪಾಲು ಕಾಂಗ್ರೆಸ್​ನದ್ದೇ ಎಂದು ದೂರಿದರಲ್ಲದೇ ಡಿಜಿಟಲ್​ ಹಾಗೂ ರಸೀದಿ ನೋಂದಣಿ ಮೂಲಕ ತಾಲೂಕಿನಲ್ಲಿ 25 ಸಾವಿರ ಸದಸ್ಯರ ಸೇರ್ಪಡೆಗೆ ಕರೆ ನೀಡಿದರು.

ಮುಖಂಡರಾದ ಗೇರಹಳ್ಳಿ ಸಣ್ಣಪ್ಪ, ಶಿವಸಂಭೇಗೌಡ, ಸಿದ್ದಮರಿಗೌಡ, ಕುರುಬಳ್ಳಿ ರಾಜೇಶ್​, ತಾಪಂ ಮಾಜಿ ಸದಸ್ಯ ಯೋಗೇಶ್​ಗೌಡ, ಧನಂಜಯ್ಯ, ರಾಜಗೋಪಾಲ್​, ಕುರಿಗೌಡನದೊಡ್ಡಿ ಕುಮಾರ್​, ರಾಜೇಂದ್ರ, ಅಪ್ಪಾಜಿ, ರಮ್ಯಾ ಗೌಡ, ದಿಶಾ ಸಮಿತಿ ಸದಸ್ಯ ರಾಜೇಶ್​ ಇದ್ದರು.

ಕಾಂಗ್ರೆಸ್​ನಲ್ಲಿ ಸತ್ಯನಿಷ್ಠರಿಗೆ ಬಿಡಿಗಾಸೂ ಬೆಲೆ ಇಲ್ಲ

ಸತ್ಯ ಹೇಳಿದಕ್ಕಾಗಿ ಸಿಎಂ ಆಪ್ತ, ಕಾಂಗ್ರೆಸ್​ ಹಿರಿಯ ಸಚಿವ ಕೆ.ಎನ್​.ರಾಜಣ್ಣ ಅವರನ್ನು ಮಂತ್ರಿಗಿರಿಯಿಂದ ವಜಾ ಮಾಡಲಾಗಿದೆ. ಯಾವುದೇ ನೋಟಿಸ್​ ನೀಡದೆ, ಟನೆಗೆ ಸಂಬಂಧಿಸಿದ ವಿವರವನ್ನೂ ಪಡೆಯದೆ, ಸರ್ವಾಧಿಕಾರ ಧೋರಣೆಯಲ್ಲಿ ಮಂತ್ರಿಗಿರಿ ಕಸಿದುಕೊಳ್ಳಲಾಗಿದ್ದು, ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಕಾಂಗ್ರೆಸ್​ನಲ್ಲಿ ಧಮಕಿ ಹಾಕಿ ದಲಿತರಿಗೆ, ಹಿಂದುಳಿದ ನಾಯಕರನ್ನು ಮೂಲೆ ಗುಂಪು ಮಾಡಲಾಗುತ್ತಿದೆ ಎಂದು ಎ.ಮಂಜು ಅಸಮಾಧಾನ ವ್ಯಕ್ತಪಡಿಸಿದರು.

ದೇವೇಗೌಡರ ಗರಡಿ...

ಮುಖ್ಯಮಂತ್ರಿ ಸಿದ್ದರಾಮಯ್ಯನವರಾದಿಯಾಗಿ ಕಾಂಗ್ರೆಸ್​ ಬಹಳಷ್ಟು ಮಂದಿ ದೇವೇಗೌಡರ ಗರಡಿಯಲ್ಲಿ ಪಳಗಿರುವವರೇ. ದೇಶದಲ್ಲೇ ಕಾಂಗ್ರೆಸ್​ ಧೂಳಿಪಟವಾಗುವ ಕಾಲ ದೂರವಿಲ್ಲ. ತಾಲೂಕಿನ ಜೆಡಿಎಸ್​ ಕಾರ್ಯಕರ್ತರ ಬಲ ಏನೆಂದು ಲೋಕಸಭೆ ಚುನಾವಣೆ ಮೂಲಕ ತೋರಿಸಲಾಗಿದ್ದು, ಡಿ.ಕೆ.ಶಿವಕುಮಾರ್​ ಅವರ ಸರ್ವಾಧಿಕಾರಕ್ಕೆ ಅಂತ್ಯ ಹಾಡುವ ಕಾಲ ಸಮೀಪಿಸುತ್ತಿದೆ. ಹಾಗಾಗಿ ಜೆಡಿಎಸ್​ಗೆ ಹೆಚ್ಚಿನ ಸದಸ್ಯರು ಸೇರ್ಪಡೆಗೊಳ್ಳುವಂತೆ ಕಾರ್ಯಕರ್ತರು ಕ್ರಮವಹಿಸಿ, ತಾಲೂಕಿನಲ್ಲಿ ಹೊಸ ಶಾಖೆ ಪ್ರಾರಂಭಿಸಬೇಕು ಎಂದು ಎ.ಮಂಜು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net