ನಿತ್ಯವೂ ಸಂವಿಧಾನದ ಪ್ರಸ್ತಾವನೆ ಪಠಣ - ಸರ್ಕಾರಿ ಶಾಲೆಯ ಕಾರ್ಯ ಮಾದರಿ

Nilogipura Government School
ನಿಲೋಗಿಪುರ ಸರ್ಕಾರಿ ಶಾಲೆಯ ಹೊರನೋಟ. ಶಾಲೆಯಲ್ಲಿ ಭಾರತ ಸಂವಿಧಾನದ ಪ್ರಸ್ತಾವನೆ ಹಾಕಿರುವುದು.
Published on

ಅಳವಂಡಿ: ರಾಜ್ಯ ಸರ್ಕಾರ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಖಾಸಗಿ, ಅನುದಾನಿತ ಹಾಗೂ ಎಲ್ಲ ಶಾಲಾ ಕಾಲೇಜುಗಳಲ್ಲಿ ಬೆಳಗಿನ ಪ್ರಾರ್ಥನಾ ಸಮಯದಲ್ಲಿ ಸಂವಿಧಾನ ಪ್ರಸ್ತಾವನೆ ಓದುವುದನ್ನು ಕಡ್ಡಾಯಗೊಳಿಸಿ ಆದೇಶಿಸಿದೆ.

ಈ ಆದೇಶಕ್ಕೂ ಮೊದಲೇ ಅಂದರೆ ಕಳೆದ ಮೂರ್ನಾಲ್ಕು ವರ್ಷದಿಂದ ಸಮೀಪದ ನಿಲೋಗಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂವಿಧಾನ ಪೀಠಿಕೆಯ ಪಠಣ ಪ್ರತಿದಿನ ಬೆಳಗಿನ ಪ್ರಾರ್ಥನಾ ಸಮಯದಲ್ಲಿ ಜಾರಿಯಲ್ಲಿದ್ದು ಈ ಕಾರ್ಯ ಮಾದರಿಯಾಗಿದೆ.

ನಿಲೋಗಿಪುರ ಶಾಲೆಯು 1ರಿಂದ 8ನೇ ತರಗತಿವರೆಗೆ ನಡೆಯುತ್ತಿದ್ದು, 224 ಮಕ್ಕಳು ಅಧ್ಯಯನ ಮಾಡುತ್ತಿದ್ದಾರೆ. 10 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿ ಪ್ರತಿದಿನ ಬೆಳಗ್ಗೆ ಪ್ರಾರ್ಥನೆ, ಪಂಚಾಂಗ ಪಠಣದ ಜತೆಗೆ ಸಂವಿಧಾನ ಸಂಕಲ್ಪ ಎಂಬ ಹೆಸರಿನಲ್ಲಿ ಮಕ್ಕಳಿಂದ ಸಂವಿಧಾನ ಪೀಠಿಕೆಯನ್ನು ಓದಿಸುವ ಹಾಗೂ ಮನವರಿಕೆ ಮಾಡಿಸುವ ಕೆಲಸ ನಿರಂತರ ನಡೆದಿದೆ.

ಮಕ್ಕಳಲ್ಲಿ ಸಂವಿಧಾನದ ಮೂಲ ಆಶಯಗಳು ಹಾಗೂ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ 2019-20ನೇ ಸಾಲಿನಿಂದ ಸಂವಿಧಾನ ಪಠಣ ಮಾಡಿಸಲಾಗುತ್ತಿದೆ. ಶಾಲೆ ಆರಂಭಕ್ಕೂ ಮುನ್ನವೇ ಮಕ್ಕಳಲ್ಲಿ ಸಮಾನತೆ, ಭ್ರಾತೃತ್ವ, ಜಾತ್ಯತೀತ, ಸಾಮಾಜಿಕ ನ್ಯಾಯ ಇತರ ಮಾನವೀಯ ಮೌಲ್ಯಗಳನ್ನು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ದೇಶಪ್ರೇಮ, ನಾವೆಲ್ಲರೂ ಭಾರತೀಯರು ಎಂಬ ಭಾವ ಮೂಡಲಿದೆ ಎನ್ನುತ್ತಾರೆ ಶಿಕ್ಷಕರು.

ಸಂವಿಧಾನದ ಪೂರ್ವ ಪೀಠಿಕೆ ಜತೆಗೆ ಮಕ್ಕಳ ಕಲಿಕೆಗೆ ನೆರವಾಗುವ ವಿವಿಧ ಚಟುವಟಿಕೆಗಳನ್ನು ಮಾಡಲಾಗುತ್ತಿದೆ. ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳು, ಸರ್ಕಾರ ರಚನೆ, ಕಾರ್ಯಾಂಗ ರಚನೆ, ನ್ಯಾಯಾಂಗ, ಶಾಸಕಾಂಗ ಇತರ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಈ ಕುರಿತು ಇಂದಿನ ಮಕ್ಕಳು ಹಾಗೂ ಯುವ ಜನತೆಯಲ್ಲಿ ಮಾಹಿತಿ ಕೊರತೆ ಇದೆ. ಸಂವಿಧಾನ ಪೀಠಿಕೆ ಪಠಣ ಸಮಾಜವನ್ನು ಸರಿದಾರಿಗೆ ತರಲು ಸಹಕಾರಿಯಾಗಲಿದೆ ಎಂಬುದು ಶಾಲಾ ಶಿಕ್ಷಕರ ಅಭಿಮತ.

ಶಾಲಾ ಮಕ್ಕಳಲ್ಲಿ ಸಂವಿಧಾನ ಮಹತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನಿತ್ಯ ಪ್ರಾರ್ಥನಾ ಸಮಯದಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣ ಮಾಡಿಸುತ್ತಿದ್ದೇವೆ.| ಗುರುರಾಜ ಪಾಟೀಲ, ಮುಖ್ಯಶಿಕ್ಷಕ, ನಿಲೋಗಿಪುರ ಶಾಲೆಯ ಮಕ್ಕಳಿಗೆ ಸಮಾನತೆ, ಸಂವಿಧಾನದ ಆಶಯ ಹಾಗೂ ಮಾನವೀಯ ಮೌಲ್ಯಗಳನ್ನು ತಿಳಿಸುವ ಉದ್ದೇಶದಿಂದ ನಾಲ್ಕು ವರ್ಷದಿಂದ ಸಂವಿಧಾನದ ಪೂರ್ವ ಪೀಠಿಕೆಯನ್ನು ಮಕ್ಕಳಿಂದಲೇ ಹೇಳಿಸಲಾಗುತ್ತಿದೆ.| ಮುತ್ತು ಎಚ್.ಬನ್ನಿಕೊಪ್ಪ, ಸಮಾಜ ವಿಜ್ಞಾನ ಶಿಕ್ಷಕ, ನಿಲೋಗಿಪುರ ಬೆಳಗಿನ ಪ್ರಾರ್ಥನಾ ಸಮಯದಲ್ಲಿ ಪಂಚಾಂಗ ಪಠಣದ ಜತೆಗೆ ಸಂವಿಧಾನದ ಪ್ರಸ್ತಾವನೆ ಓದುತ್ತೇವೆ. ಇದರಿಂದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಹಾಗೂ ಸಂವಿಧಾನದ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗಿದೆ.| ಬಂಗಾರಿ ಬಿಸನಳ್ಳಿ, 8ನೇ ತರಗತಿ ವಿದ್ಯಾರ್ಥಿನಿ, ನಿಲೋಗಿಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net