

ಕೆ.ಆರ್.ನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಿಸುವ ಮೂಲಕ ಸಂವಿಧಾನದ ಮಹತ್ವವನ್ನು ಸಾರುವ ಕೆಲಸವನ್ನು ಯುವಕರು ಮಾಡುತ್ತಿರುವುದು ಉತ್ತಮ ಕಾರ್ಯ ಎಂದು ಡಾ.ಕೆ.ಎಸ್.ರವಿಚಂದ್ರ ಹೇಳಿದರು.
ತಾಲೂಕಿನ ಕೆಗ್ಗೆರೆ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನದರಲ್ಲಿರುವ ಕಾನೂನಿನ ಅರಿವು ಅತ್ಯವಶ್ಯ. ಅದನ್ನು ತಿಳಿಸುವ ಕಾರ್ಯ ವಿದ್ಯಾವಂತ ಯುವ ಸಮುದಾಯದಿಂದ ಆಗಬೇಕಿದೆ ಎಂದರು.
ಬಾಬಾ ಸಾಹೇಬರು ಹೇಳಿದಂತೆ ಪ್ರತಿಯೊಬ್ಬರೂ ಶಿಕ್ಷಣ ಪಡೆದು ಸಂಘಟನೆ ಮೂಲಕ ಹೋರಾಟ ಮಾಡಬೇಕು. ಆಗ ಮಾತ್ರ ಸಮಸ್ಯೆ ಎದುರಿಸಬಹುದಾಗಿದೆ. ಶಿಕ್ಷಣದ ಬಗ್ಗೆ ನಿರ್ಲಕ್ಷೃ ಮಾಡದೆ ವಿದ್ಯಾವಂತರಾಗುವ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಕಾರಣೀಭೂತರಾಗಬೇಕು ಎಂದರು.
ಜಯಂತಿ ಆಚರಣೆ ಅಂಗವಾಗಿ ಬಾಬಾ ಸಾಹೇಬರ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮುಖಂಡರಾದ ಕೆಎಸ್ಆರ್ಟಿಸಿ ಎಲ್.ದೇವರಾಜು, ಕೆ.ಪಿ.ಮನು, ಕೆ.ಟಿ.ಚೇತನ್, ಶಿಲ್ಪಾ ಶಾಂತರಾಮ್, ಕೆ.ಬಿ.ಚೇತನ್, ದರ್ಶನ್ ಇತರರು ಇದ್ದರು.