

ಬಾಗೇಪಲ್ಲಿ: ಕ್ಷೇತ್ರದ ಬಡಜನತೆಗೆ ಸರ್ಕಾರಿ ವೈದ್ಯಕೀಯ ಸೇವೆ ಒದಗಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಆರೋಗ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದು, ತಾಲೂಕಿನ ಬಡ ರೋಗಿಗಳು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವ ದುಸ್ಥಿತಿ ಎದುರಾಗಿದೆ ಎಂದು ಡಿವೈಎಫ್‌ಐ ಜಿಲ್ಲಾ ಮುಖಂಡ ಎ. ಸೋಮಶೇಖರ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಕನಿಷ್ಠ ಮೂಲಸೌಕರ್ಯ ಕಲ್ಪಿಸಿ, ಖಾಲಿ ಇರುವ ವೈದ್ಯ ಹಾಗೂ ಸಿಬ್ಬಂದಿ ಹುದ್ದೆ ಭರ್ತಿ ಮಾಡಿ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸುವಂತೆ ಒತ್ತಾಯಿಸಿ ತಾಲೂಕು ಸಂಘಟನೆಯಿಂದ ಪಟ್ಟಣದ ಮುಖ್ಯರಸ್ತೆಯಲ್ಲಿ ಶುಕ್ರವಾರ ಪ್ರತಿಭಟನಾ ರ‌್ಯಾಲಿ ನಡೆಸಿ ತಾಲೂಕು ಆರೋಗ್ಯಾಧಿಕಾರಿ ಡಾ. ಸಿ.ಎನ್. ಸತ್ಯನಾರಾಯಣರೆಡ್ಡಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿನ ವ್ಯವಸ್ಥೆ ಸುಧಾರಣೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಶಾಸಕರು ವಿಲರಾಗಿದ್ದಾರೆ. ಪರಿಣಾಮ ವೈದ್ಯರ ಕೊರತೆಯಿಂದಾಗಿ ರೋಗಿಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಉಚಿತ ಮಾತ್ರೆ, ಲಸಿಕೆ ಇಲ್ಲದಂತಾಗಿದೆ. ಇದರಿಂದ ಕೂಲಿ ಕಾರ್ಮಿಕರು, ರೈತರು, ಬಡವರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವಂತಾಗಿದೆ ಎಂದರು.
ಪ್ರಧಾನಮಂತ್ರಿ ಜನೌಷಧ ಕೇಂದ್ರಗಳಲ್ಲಿ ಸಮರ್ಪಕ ದಾಸ್ತಾನು ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸದ ಕಾರಣ ಗ್ರಾಮೀಣ ಜನರಿಗೆ ವೈದ್ಯ ಸೇವೆಗಳು ಸಿಗದೆ ತಾಲೂಕು ಆಸ್ಪತ್ರೆಗೆ ಅಲೆದಾಡುತ್ತಿದ್ದರೂ ಕಾಳಜಿ ಇಲ್ಲದ ಸಚಿವರು, ಶಾಸಕರು ಬಡವರ ಬದುಕಿನೊಂದಿಗೆ ಚಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಜಿ. ಸೋಮಶೇಖರ್, ಡಿವೈಎಫ್‌ಐ ಮುಖಂಡರಾದ ಸುರೇಶ್ ಮದಕರಿ, ಎಸ್.ಲಕ್ಷ್ಮಣರೆಡ್ಡಿ, ಶ್ರೀನಿವಾಸ, ನರಸಿಂಹಮೂರ್ತಿ, ಅಶೋಕ, ಇಂದ್ರಾ, ಮುರಳಿ, ಸುನೀಲ್, ಅಮರನಾಥ, ಅಜೇಯ್, ಶ್ರೀನಿವಾಸ್ ಮತ್ತಿತರರು ಇದ್ದರು.
ಅನನುಭವಿಗಳ ನೇಮಕ
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಾಸಕರು ಹಾಗೂ ಅವರ ಬೆಂಬಲಿಗರ ಶಿಾರಸಿನಂತೆ ತರಬೇತಿ ಪಡೆಯದ, ಅನುಭವವಿಲ್ಲದವರನ್ನು ವೈದ್ಯಕೀಯ ಸೇವಾ ಸಿಬ್ಬಂದಿ ಹುದ್ದೆಗಳಿಗೆ ಭರ್ತಿ ಮಾಡಿರುವ ಪರಿಣಾಮ ಆಂಬುಲೆನ್ಸ್‌ನಲ್ಲಿ ಬರುವ ರೋಗಿಗಳಿಗೆ ತುರ್ತು ಚಿಕಿತ್ಸೆ ಹೇಗೆ ನೀಡಬೇಕು ಎಂಬುದೇ ತಿಳಿದಿಲ್ಲ. ಪ್ರಥಮ ಚಿಕಿತ್ಸೆ ನೀಡುವ ವಿಧಾನ ಗೊತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಬರುವ ರೋಗಿಗಳ ಗೋಳು ಕೇಳುವವರೇ ಇಲ್ಲದಂತಾಗಿದೆ. ನುರಿತ ಹಾಗೂ ತರಬೇತಿ ಪಡೆದಿರುವ ಸಿಬ್ಬಂದಿ ನೇಮಕಗೊಳಿಸಿ ಜನರ ಪ್ರಾಣ ಉಳಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕ್ರಮ ವಹಿಸಬೇಕಾಗಿದೆೆ ಎಂದು ಎ. ಸೋಮಶೇಖರ ಹೇಳಿದರು.
27 ಬಿಪಿಎಲ್ ಡಿವೈಎಫ್‌ಐ
ಬಾಗೇಪಲ್ಲಿ ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಡಿವೈಎಫ್‌ಐ ತಾಲೂಕು ಸಮಿತಿ ವತಿಯಿಂದ ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಎಸ್.ಲಕ್ಷ್ಮಣರೆಡ್ಡಿ, ಸುರೇಶ್ ಮದಕರಿ, ಅಶೋಕ ಮತ್ತಿತರರು ಇದ್ದರು.