ಅನುದಾನ ಕೊರತೆಯಿಂದ ಮುಚ್ಚುವ ಭೀತಿಯಲ್ಲಿ ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆ?

devaraja
Published on

ಬೆಂಗಳೂರು:ಅನುದಾನ ಕೊರತೆಯಿಂದ ನಲುಗಿರುವ ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆಗೆ ಮುಚ್ಚುವ ಭೀತಿ ಎದುರಾಗಿದೆ.

ಜನಪರ ನಾಯಕ, ಸಾಮಾಜಿಕ ನ್ಯಾಯದ ಹರಿಕಾರ ಮತ್ತು ಸಮಸಮಾಜ ನಿರ್ಮಾಣ ರೂವರಿ ಎಂದು ಖ್ಯಾತಿ ಹೊಂದಿರುವ ಮಾಜಿ ಸಿಎಂ ಡಿ.ದೇವರಾಜ ಅರಸು ಹೆಸರಿನಲ್ಲಿ 1992ರ ಆ.31 ರಂದು ಸಂಸ್ಥೆಯನ್ನು ಆರಂಭಿಸಲು ಆದೇಶಿಸಲಾಗಿತ್ತು. 1993ರ ಆ.20ರಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ವ್ಯಾಪ್ತಿಗೆ ಬರುತ್ತದೆ. ಹಿಂದುಳಿದ ವರ್ಗಗಳ ಅಧ್ಯಯನ, ಕೈಗೊಂಡಿರುವ ಯೋಜನೆಗಳ ಬಗ್ಗೆ ಪ್ಲಾನ್​ ಮಾನಿಟರಿಂಗ್​, ಸಮಸ್ಯೆಗಳಿಗೆ ಪರಿಹಾರ, ಕುಲಶಾಸ್ತ್ರ ಅಧ್ಯಯನ, ಕಾರ್ಯಾಗಾರ, ಮೌಲ್ಯಮಾಪನ ಮುಂತಾದ ಕಾರ್ಯಕ್ರಮಗಳನ್ನು ನಡೆಸುವುದು ಹಾಗೂ ಹಿಂದುಳಿದ ವರ್ಗಗಳ ಆಯೋಗಗಳ ವರದಿಗಳ ತುಲನಾತ್ಮಕ ಅಧ್ಯಯನ ನಡೆಸುವುದು ಸಂಸ್ಥೆಯ ಧ್ಯೇಯೋದ್ದೇಶ.

ಅಲೆಮಾರಿ, ಅರೆ ಅಲೆಮಾರಿ, ಬುಡಕಟ್ಟು ಜನಾಂಗಗಳ ಸಮಸ್ಯೆಗಳ ಕುರಿತು ವಿಶೇಷ ಅಧ್ಯಯನ ಸಂಶೋಧನೆ ಕೈಗೊಂಡು ಪರಿಹಾರ ಒದಗಿಸುತ್ತಿದೆ. ಜನಾಂಗಗಳ ವೃತ್ತಿ-ಪ್ರವೃತ್ತಿ, ಆಚಾರ-ವಿಚಾರ, ಸಂಸ್ಕೃತಿ-ಸಂಪ್ರದಾಯದ ಕುರಿತು ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಕಾರ್ಯಾಗಾರ ಹಾಗೂ ಸಮ್ಮೇಳನ ಆಯೋಜಿಸುತ್ತಿದೆ. ವಿಶೇಷವಾಗಿ ಹಿಂದುಳಿದ ವರ್ಗದ ಮಹಿಳೆಯರ ಆರ್ಥಿಕ ಸ್ಥಿತಿ, ಸಾಮಾಜಿಕ ಸ್ಥಾನ, ಶೈಣಿಕ ಸೌಲಭ್ಯ ಹಾಗೂ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತಿದೆ. ಅಧ್ಯಯನ, ಸಂಶೋಧನಾ ವರದಿ ದಾಖಲಿಸುವುದು, ಪ್ರಕಟಣೆ ಮಾಡುವುದು ಮತ್ತು ಸ್ಯಾ ಚಿತ್ರಗಳ ನಿರ್ಮಾಣ ಮಾಡುವ ಕೆಲಸ ಮಾಡುತ್ತಿದೆ.

ರಾಜ್ಯ ವಲಯ ಯೋಜನೆಗೆ ಸಂಸ್ಥೆ ಸೇರ್ಪಡೆಯಾಗಿದೆ. ಬೆಂಗಳೂರಿನ ವಸಂತನಗರದಲ್ಲಿರುವ ದೇವರಾಜು ಅರಸು ಭವನದಲ್ಲಿ ಪ್ರಧಾನ ಕಚೇರಿ ಇದೆ. ಜಿಲ್ಲಾ ಮಟ್ಟದಲ್ಲಿ ಕಚೇರಿಗಳಿಲ್ಲ. ಆದರೆ, ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಅಧಿಕಾರಿಗಳ ಮುಖೇನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಸಂಸ್ಥೆ ಮುಖ್ಯಸ್ಥರಾಗಿ ನಿರ್ದೇಶಕರು ಕಾರ್ಯ ನಿರ್ವಹಿಸುತ್ತಾರೆ. ಆದರೆ, ಈ ಸಂಸ್ಥೆಗೆ ಸ್ವತಂತ್ರ ನಿರ್ದೇಶಕರಿಲ್ಲದೆ ಪ್ರಭಾರದಲ್ಲಿ ಡಾ. ಸಿ.ಕೆ. ಜಗದೀಶ್​ ಕುಮಾರ್​ ಕಾರ್ಯನಿರ್ವಹಿಸುತ್ತಿದ್ದಾರೆ. ಉಪ ನಿರ್ದೇಶಕರು, ಆಡಳಿತಾಧಿಕಾರಿ ಮತ್ತು ಸಹಾಯಕ ನಿರ್ದೇಶಕರು ಸೇರಿ ಸಿಬ್ಬಂದಿ ವರ್ಗದವರು ಕಚೇರಿ ಕೆಲಸ, ಕಾರ್ಯಕ್ರಮಗಳ ಅನುಷ್ಠಾನ ಮಾಡುತ್ತಿದ್ದಾರೆ.

ಪಟ್ಟಭದ್ರ ಹಿತಾಸಕ್ತಿಗಳಿಂದ ಅನುದಾನ ಸಿಗುತ್ತಿಲ್ಲ: 

ಪ್ರತಿ ವರ್ಷ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಲೆಕ್ಕ ಶೀರ್ಷಿಕ ಅಡಿ ಆಯವ್ಯಯದಲ್ಲಿ ಸಂಸ್ಥೆಗೆ ಹಣಕಾಸಿನ ವ್ಯವಸ್ಥೆ ಒದಗಿಸಲಾಗುತ್ತಿದೆ. ಕಳೆದ ಸಾಲಿನ ಬಜೆಟ್​ನಲ್ಲಿ ಸಿಎಂ ಸಿದ್ದರಾಮಯ್ಯ, 2 ಕೋಟಿ ರೂ.ಅನುದಾನ ನೀಡಿದ್ದರು. ಆದರೆ, 1992ರಿಂದ ಈವರೆಗೆ ದೊರೆತ ಅನುದಾನಗಳಲ್ಲಿ 2 ಕೋಟಿ ರೂ.ಹೆಚ್ಚು ಅನುದಾನವಾಗಿದೆ. ಆದರೆ, ಪ್ರತಿ ವರ್ಷ ಬರೀ ಬಿಡುಗಾಸು ಅನುದಾನ ನೀಡಲಾಗುತ್ತಿದೆ. ಇದರಿಂದ ಸಂಸ್ಥೆಯು ಬಾಗಿಲು ಹಾಕುವ ಹಂತಕ್ಕೆ ತಲುಪಿದೆ. ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಸ್ವಾಯತ್ತತೆ ಸಂಸ್ಥೆಯನ್ನಾಗಿ ಮಾಡುವ ದೃಷ್ಟಿಯಿಂದ 2018ರ ಆ.21ರಂದು ಸ್ವಾಯತ್ತತೆ ಸಂಸ್ಥೆಯನ್ನು ನೋಂದಾಯಿಸಿ ಹಿಂದುಳಿದ ವರ್ಗಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. 7 ಮಂದಿಯನ್ನು ಸಂಸ್ಥೆಯ ನಿರ್ದೇಶಕರ ಸದಸ್ಯ ಕಾರ್ಯದರ್ಶಿಯನ್ನಾಗಿ ಆಡಳಿತ ಮಂಡಳಿ ರಚಿಸಲಾಗಿತ್ತು. ಆದರೆ, ಸ್ವಾಯತ್ತತೆ ಸಂಸ್ಥೆಯ ಅಸ್ತಿತ್ವಕ್ಕೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡುವಂತೆ 2019ರ ಮಾ.25ರಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಪಟ್ಟಭದ್ರ ಹಿತಾಸಕ್ತಿಗಳ ಸಂಚಿನಿಂದ ಹಣಕಾಸು ಇಲಾಖೆ ಅನುದಾನ ಬಿಡುಗಡೆಗೆ ನಿರಾಕರಿಸಿತ್ತು. ಇದರಿಂದ ಸ್ವಾಯತ್ತ ಸಂಸ್ಥೆಯನ್ನಾಗಿ ಪರಿವರ್ತನೆಯಾಗದೆ 1992ರ ಆದೇಶ ಅನ್ವಯವೇ ಈವರೆಗೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net