ಸೈಕ್ಲೋತ್ಸವ, ಮ್ಯಾರಥಾನ್ ಜ. 3ರಂದು

25-hvr-06 mrm row
Published on

ಹಾವೇರಿ: ನಗರದಲ್ಲಿ ಪ್ರಥಮ ಬಾರಿಗೆ ಹಾವೇರಿ ಫಿಟ್​ನೆಸ್ ಟ್ರಸ್ಟ್​ನ ಸೈಕ್ಲಿಂಗ್ ಕ್ಲಬ್ ವತಿಯಿಂದ ಜ. 3ರಂದು ಬೆಳಗ್ಗೆ 7 ಗಂಟೆಗೆ ಸೈಕ್ಲೋತ್ಸವ-2021 ಹಾಗೂ ಮ್ಯಾರಾಥಾನ್ ಅನ್ನು ಸ್ಥಳೀಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಹಾವೇರಿ ಸೈಕ್ಲಿಂಗ್ ಕ್ಲಬ್ ಅಧ್ಯಕ್ಷ ಎಂಆರ್​ಎಂ ರಾವ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಆರೋಗ್ಯದ ಜಾಗೃತಿ ಮೂಡಿಸುವ ಉದ್ದೇಶದಿಂದ 10 ಕಿಮೀ ಸೈಕ್ಲೋತ್ಸವ ಹಾಗೂ 3 ಕಿಮೀ ಮ್ಯಾರಾಥಾನ್ ಏರ್ಪಡಿಸಲಾಗಿದೆ. ಈಗಾಗಲೇ ಆನ್​ಲೈನ್ ನೋಂದಣಿ ಶುರುವಾಗಿದ್ದು, ಮೊದಲು ನೋಂದಣಿ ಮಾಡಿದ 250 ಜನರಿಗೆ ಟೀ ಶರ್ಟ್ ನೀಡಲಾಗುವುದು. ಯಾವುದೇ ಪ್ರವೇಶ ಫೀ ಇರುವುದಿಲ್ಲ ಎಂದು ತಿಳಿಸಿದರು.

ಸೈಕ್ಲೋತ್ಸವದಲ್ಲಿ ಕರೊನಾ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುವುದು. ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. 10 ವರ್ಷದ ಮೇಲ್ಪಟ್ಟು 60 ವರ್ಷದವರೆಗಿನವರು ಭಾಗವಹಿಸಬಹುದು. ಶಾಸಕ ನೆಹರು ಓಲೇಕಾರ, ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ, ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಪಾಲ್ಗೊಂಡು ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಸೈಕ್ಲಿಂಗ್ ಕ್ಲಬ್ ಕಾರ್ಯದರ್ಶಿ ಡಾ. ಶ್ರವಣ ಪಂಡಿತ ಮಾತನಾಡಿ, ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಿಂದ ಆರಂಭಗೊಳ್ಳುವ ಸೈಕ್ಲಿಂಗ್ ದಾನಮ್ಮದೇವಿ ದೇವಸ್ಥಾನ ರಸ್ತೆ ಮಾರ್ಗವಾಗಿ ಮೇಲಿನಪೇಟೆ, ಎಂಜಿ ರೋಡ್, ಗುತ್ತಲ ರೋಡ್, ಪಿಬಿ ರೋಡ್, ಹೊಸಮನಿ ಸಿದ್ದಪ್ಪ ವೃತ್ತ, ಜಿಎಚ್ ಕಾಲೇಜ್, ವಿನಾಯಕ ನಗರ, ಡಿಸಿ ಆಫೀಸ್, ದುಂಡಿಬಸವೇಶ್ವರ ದೇವಸ್ಥಾನ, ಬಸವೇಶ್ವರ ನಗರ, ಪಿಡಬ್ಲ್ಯುಡಿ ಕ್ರಾಸ್, ಜೆಪಿ ರೋಟರಿ ಶಾಲೆ ಮೂಲಕ ಸಾಗಿ ಮರಳಿ ಮುನ್ಸಿಪಲ್ ಮೈದಾನದಲ್ಲಿ ಮುಕ್ತಾಯವಾಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹಾವೇರಿ ಸೈಕ್ಲಿಂಗ್ ಕ್ಲಬ್ ಸದಸ್ಯರಾದ ಡಾ. ಗಿರೀಶ ಮಲ್ಲಾಡದ, ಎ. ಧರಣೀಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net