

ಮಂಗಳೂರು: ಮಂಗಳೂರು ನಗರದಲ್ಲಿ ಭಾನುವಾರ ಬೆಳಕು ಹರಿಯುತ್ತಿದ್ದಂತೆ ರಸ್ತೆ ಮಧ್ಯೆ ಟ್ರಿಣ್ ಟ್ರಿಣ್ ಸದ್ದು ಮಾಡುತ್ತ ಸಂಚರಿಸಿದ ಸಾವಿರಾರು ಸೈಕಲ್ಗಳಲ್ಲಿದ್ದ ಪುಟಾಣಿ ಮಕ್ಕಳು ‘ಪ್ರಕೃತಿ ರಕ್ಷಿಸಿ, ಜೀವ ಉಳಿಸಿ’ ಧ್ಯೇಯವಾಕ್ಯದೊಂದಿಗೆ ಸಂದೇಶ ಸಾರುತ್ತ ಸಾಗಿದರು. ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹ್ಮಮಿೊಂಡಿದ್ದ ಸೈಕಲ್ ರ್ಯಾಲಿಯಲ್ಲಿ 2000ಕ್ಕೂ ಅಧಿಕ ಮಂದಿ ಪಾಲ್ಗೊಂಡು 13 ಕಿ.ಮೀ. ದೂರ ಸಾಗಿಬಂದರು.
ಶಿಸ್ತುಬದ್ಧ ಸೈಕ್ಲಿಂಗ್: ವಿಜಯವಾಣಿ ಹಮ್ಮಿಕೊಂಡ ಸೈಕಲ್ ರ‍್ಯಾಲಿ ಪ್ರತಿವರ್ಷದಂತೆ ಈ ಬಾರಿಯೂ ಅಚ್ಚುಕಟ್ಟಾಗಿ ನಡೆದು, ಹೆತ್ತವರ, ಪಾಲಕರ ಶ್ಲಾಘನೆಗೆ ಪಾತ್ರವಾಯಿತು. ಮಾರ್ಗದುದ್ದಕ್ಕೂ ಕುಡಿಯುವ ನೀರು, ಅಗತ್ಯ ತುರ್ತು ಚಿಕಿತ್ಸೆಗೆ ವೈದ್ಯರೊಂದಿಗೆ, ಆಂಬುಲೆನ್ಸ್ ಕೂಡ ರ್ಯಾಲಿಯ ಜತೆ ಸಾಗಿತು. ರಸ್ತೆ ದಾಟಿಸುವ ಸಂದರ್ಭ ಮಕ್ಕಳ ಬಗ್ಗೆ ಪೊಲೀಸರು, ಸಾರ್ವಜನಿಕರು ಜಾಗರೂಕತೆ ವಹಿಸಿದ್ದರು.
ರಾಮಕೃಷ್ಣ ಮಠದಲ್ಲಿ ಸಮಾರೋಪ: ಬೆಳಗ್ಗೆ ಸೈಕಲ್ ರ್ಯಾಲಿಗೆ ಚಾಲನೆ ನೀಡುವ ಸಂದರ್ಭ ಹಾಗೂ ಸಮಾರೋಪದಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಂಗಳೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಆಯುಕ್ತ ಬಿ.ಪಿ.ದಿನೇಶ್ ಕುಮಾರ್, ಬಿಂದು ಎಸ್ಜಿ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕಿ ರಂಜಿತಾ ಸತ್ಯಶಂಕರ ಭಟ್, ಕರ್ಣಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್ಗಳಾದ ರವಿಚಂದ್ರ, ನಿರ್ಮಲ್ ಕುಮಾರ್, ವಿಆರ್ಎಲ್ ಮೀಡಿಯಾ ಪ್ರೖೆವೇಟ್ ಲಿಮಿಟೆಡ್ನ ಉಪಾಧ್ಯಕ್ಷ ಅರುಣ್ ಕೆ.ಆರ್., ರಾಮಕೃಷ್ಣ ಮಠದ ರಂಜನ್ ಬೆಳ್ಳರ್ಪಾಡಿ ಮೊದಲಾದವರು ಉಪಸ್ಥಿತರಿದ್ದರು. ವಿಜಯವಾಣಿ ಹಿರಿಯ ವರದಿಗಾರ ಪಿ.ಬಿ.ಹರೀಶ್ ರೈ ಮತ್ತು ಚೇತನ್ ಪಿಲಿಕುಳ ಕಾರ್ಯಕ್ರಮ ನಿರೂಪಿಸಿದರು.
ಪ್ರಾಯೋಜಕರು: ಸೈಕಲ್ ರ್ಯಾಲಿಯ ಪ್ರಧಾನ ಪ್ರಾಯೋಜಕರು ‘ಬಿಂದು’ ಎಸ್.ಜಿ. ಸಮೂಹ ಸಂಸ್ಥೆ, ಸಹ ಪ್ರಾಯೋಜಕರು: ಎಸ್.ಸಿ.ಎಸ್ ಸಮೂಹ ಶಿಕ್ಷಣ ಸಂಸ್ಥೆ ಮಂಗಳೂರು, ಕರ್ಣಾಟಕ ಬ್ಯಾಂಕ್, ಎಸ್ಸಿಡಿಸಿಸಿ ಬ್ಯಾಂಕ್, ಸಹಕಾರ: ಎಂಆರ್ಪಿಎಲ್, ಎನ್ಎಂಪಿಎ, ಶ್ರೀ ರಾಮಕೃಷ್ಣ ಮಠ, ತರ್ಜನಿ ಕಮ್ಯುನಿಕೇಷನ್ಸ್, ನಮ್ಮ ಟಿವಿ, ಮಂಗಳೂರು ಸೈಕಲ್ ಕಂ., ವಿಜಯಾನಂದ ಟ್ರಾವೆಲ್ಸ್ .
ಸೈಕಲ್ ಲಕ್ಕಿ ಡ್ರಾ: ಭಾಗವಹಿಸಿದ್ದ ಅಷ್ಟೂ ಜನರಿಗೆ ನೀಡಲಾಗಿದ್ದ ಕೂಪನ್ನ ಅದೃಷ್ಟ ಸಂಖ್ಯೆಯಲ್ಲಿ ಐದು ಮಂದಿ ಅದೃಷ್ಟಶಾಲಿಗಳನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿ ಅವರಿಗೆ ಸೈಕಲ್ ಬಹುಮಾನ ನೀಡಲಾಯಿತು. ಜತೆಗೆ 10 ಮಂದಿಗೆ ಅದೃಷ್ಟ ಬಹುಮಾನ ನೀಡಲಾಯಿತು.
ದೈಹಿಕ ಕ್ಷಮತೆ ದೃಷ್ಟಿಯಿಂದ ಸೈಕ್ಲಿಂಗ್ ಅತ್ಯುತ್ತಮ ಕ್ರೀಡಾ ಚಟುವಟಿಕೆ. ರಜಾದಿನ ಭಾನುವಾರ ಮುಂಜಾನೆ 5.30- 6 ಗಂಟೆಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಸೈಕಲು ತುಳಿದುಕೊಂಡು ಇಷ್ಟು ದೂರ ತಲುಪುತ್ತಾರೆ ಎನ್ನುವುದು ಒಳ್ಳೆಯ ಬೆಳವಣಿಗೆ. ಇಂಥ ಚಟುವಟಿಕೆಗಳು ಪ್ರಕೃತಿಗೆ ನಾವು ನೀಡುವ ದೊಡ್ಡ ಕೊಡುಗೆ. ವಿದೇಶಗಳಲ್ಲಿ ಇಂಧನಗಳ ಮೂಲಕ ಚಲಾಯಿಸುವ ವಾಹನಗಳ ಬಳಕೆ ಕಡಿತಗೊಳಿಸಿ ಸೈಕ್ಲಿಂಗ್ ಪ್ರೀತಿ ಹೆಚ್ಚುತ್ತಿರುವ ಗಮನಿಸಬೇಕಾದ ಅಂಶ.
| ರಂಜಿತಾ ಸತ್ಯಶಂಕರ ಭಟ್ ಬಿಂದು ಎಸ್ಜಿ ಸಮೂಹ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ
ಚಿಕ್ಕ ಮಕ್ಕಳು ಮತ್ತು ಸೈಕ್ಲಿಸ್ಟ್ಗಳ ಉತ್ಸಾಹ ಕಂಡು ಅಚ್ಚರಿ, ಸಂತೋಷ, ಭಯ ಎಲ್ಲವೂ ಆಯಿತು. ಸೈಕಲ್ ಸವಾರಿ ಒಳ್ಳೆಯ ಹವ್ಯಾಸ. ಆದರೆ ರಸ್ತೆ ನಿಯಮ ಪಾಲನೆ ಯಾವತ್ತೂ ಮರೆಯಬಾರದು. ಪೊಲೀಸರ ಕಣ್ತಪ್ಪಿಸಿ ನಿಯಮ ಉಲ್ಲಂಘಿಸುವವರನ್ನು ಪತ್ತೆ ಮಾಡಲೆಂದೇ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 100ಕ್ಕೂ ಅಧಿಕ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ. ತಪ್ಪು ಮಾಡುವವರ ಮನೆಗೆ ನೋಟಿಸ್ ಬರಬಹುದು.
| ಬಿ.ಪಿ.ದಿನೇಶ್ ಕುಮಾರ್ ಉಪ ಪೊಲೀಸ್ ಆಯುಕ್ತ (ಅಪರಾಧ ಮತ್ತು ಸಂಚಾರ ವಿಭಾಗ)