ವಿ.ವಿ.ಪುರದಲ್ಲಿ ರಾತ್ರೋ ರಾತ್ರಿ ಸರ್ ಎಂ.ವಿ. ಪುತ್ಥಳಿ ತೆರವು

sir mvv
Published on

ಬೆಂಗಳೂರು: ನಗರದ ವಿಶ್ವೇಶ್ವರಪುರದ ಸಜ್ಜನ್‌ರಾವ್ ವೃತ್ತದ ಬಳಿಯಿದ್ದ ಭಾರತ ರತ್ನ ಸರ್ ಎಂ.ವಿ.ವಿಶ್ವೇಶ್ವರಯ್ಯ ಅವರ ಪುತ್ಥಳಿ ಒಳಗೊಂಡ ಕಟ್ಟೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಸಜ್ಜನ್ ರಾವ್ ವೃತ್ತದ ಫುಡ್ ಸ್ಟ್ರೀಟ್ ಆರಂಭವಾಗುವ ಸ್ಥಳದಲ್ಲಿ ಕನ್ನಡ ಧ್ವಜ ಕಟ್ಟೆ ಜತೆಗೆ ಸರ್ ಎಂ.ವಿ. ಪುತ್ಥಳಿಯನ್ನು ಸ್ಥಾಪಿಸಲಾಗಿತ್ತು. ಇಲ್ಲಿ ಪ್ರತೀ ವರ್ಷ ಸರ್ ಎಂವಿ ಅವರ ಜನ್ಮದಿನವಾದ ಸೆ.15 ಹಾಗೂ ಇತರ ರಾಷ್ಟ್ರೀಯ ಹಬ್ಬಗಳಂದು ಸ್ಥಳೀಯರು ಕಾರ್ಯಕ್ರಮ ನಡೆಸಿ ವಿಶ್ವೇಶ್ವರಯ್ಯನವರ ಸ್ಮರಣೆಗೆ ಅವಕಾಶ ಕಲ್ಪಿಸುತ್ತಿದ್ದರು. ಆದರೆ, ಶನಿವಾರ ರಾತ್ರಿ ಕೆಲವರು ದಿಢೀರ್ ಆಗಿ ಆಗಮಿಸಿ ಇಡೀ ಕಟ್ಟೆಯನ್ನು ಧ್ವಂಸಗೊಳಿಸಿದ್ದಾರೆ. ಕನ್ನಡ ಧ್ವಜಸ್ತಂಭವನ್ನು ಹಾಗೆಯೇ ಬಿಡಲಾಗಿದೆ. ವಿಶ್ವೇಶ್ವರಯ್ಯ ಪುತ್ಥಳಿಯನ್ನು ಸಮೀಪದ ಕಟ್ಟಡಲ್ಲಿ ಜೋಪಾನವಾಗಿ ಇಡಲಾಗಿದೆ.

ಘಟನೆ ಮಾಹಿತಿ ಪಡೆದ ಶಾಸಕ ಉದಯ್ ಗರುಡಾಚಾರ್ ಅವರು ಭಾನುವಾರ ಬೆಳಗ್ಗೆ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಅಹವಾಲು ಆಲಿಸಿದರು. ಪುತ್ಥಳಿ ಬಳಿಯಿರುವ ಭಾರತ್ ಗ್ಯಾಸ್ ಏಜೆನ್ಸಿಯವರು ತಮ್ಮ ಸೈಟ್‌ಗೆ ತೆರಳು ಹೊಸ ದಾರಿ ನಿರ್ಮಿಸುವ ಸಲುವಾಗಿ ಪುತ್ಥಳಿ ತೆರವುಗೊಳಿಸಿದ್ದಾರೆ. ಪಾಲಿಕೆಯ ಅನುಮತಿ ಪಡೆಯದೇ ಉದ್ದೇಶಪೂರ್ವಕವಾಗಿಯೇ ಪುತ್ಥಳಿಯನ್ನು ತೆರವುಗೊಳಿಸಲಾಗಿದೆ ಎಂಬುದಾಗಿ ನಾಗರಿಕರು ಶಾಸಕರ ಬಳಿ ದೂರಿದರು.

2016ರಲ್ಲಿ ಸ್ಥಾಪಿಸಿದ್ದ ಪುತ್ಥಳಿ:

ಸಜ್ಜನ್ ರಾವ್ ವೃತ್ತದ ಬಳಿ 2006ರಲ್ಲಿ ಸ್ಥಳೀಯರು ಹಾಗೂ ಸಮರ್ಪಣಾ ಸಂಘಟನೆ ಸಹಕಾರದಲ್ಲಿ ಸರ್ ಎಂ.ವಿ. ಅವರ ಪುತ್ಥಳಿಯನ್ನು ಸ್ಥಾಪಿಸಲಾಗಿತ್ತು. ಆಗಿನ ರಾಜ್ಯಪಾಲರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪುತ್ಥಳಿ ಸ್ಥಾಪನೆಗೆ ಪಾಲಿಕೆಯಿಂದ ಅನುಮತಿ ಪಡೆಯಲಾಗಿತ್ತು. ಒಂದೂವರೆ ದಶಕದಿಂದಲು ಪ್ರತೀ ವರ್ಷ ವಿಶ್ವೇಶ್ವರಯ್ಯ ಜಯಂತಿ, ರಾಜ್ಯೋತ್ಸವ ಸೇರಿ ಹಲವು ಕಾರ್ಯಕ್ರಮಗಳನ್ನು ಈ ಕಟ್ಟೆಯ ಬಳಿಯೇ ನಡೆಸಲಾಗುತ್ತಿತ್ತು. ಈಗ ಏಕಾಏಕಿ ಪುತ್ಥಳಿ ಸಹಿತ ಇಡೀ ಕಟ್ಟೆಯನ್ನು ಧ್ವಂಸಗೊಳಿಸಿ ಸಾರ್ವಜನಿಕರ ಭಾವನೆಯನ್ನು ಘಾಸಿ ಮಾಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಜತೆಗೆ ಪುತ್ಥಳಿಯನ್ನು ಮರುಸ್ಥಾಪಿಸಬೇಕು ಎಂದು ಸಂಘದ ಅಧ್ಯಕ್ಷ ಎಸ್.ವೆಂಕಟೇಶ್ ಅವರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net