

ಬೆಂಗಳೂರು: ಗ್ರಾಹಕರು, ವ್ಯವಹಾರ-ಉದ್ದಿಮೆಗಳು ಹಾಗೂ ಸರ್ಕಾರಗಳಿಗೆ ಸೈಬರ್ ಸುರಕ್ಷತೆ ಹಾಗೂ ದತ್ತಾಂಶ ಸಂರಕ್ಷಣಾ ಸೇವೆಗಳ ಪೂರೈಕೆಯಲ್ಲಿ ಮುಂಚೂಣಿಯಲ್ಲಿರುವ ‘ಕ್ವಿಕ್ಹೀಲ್ ಟೆಕ್ನಾಲಜೀಸ್’ ತನ್ನ ಡಿಜಿಟಲ್ ಗ್ರಾಹಕರಿಗಾಗಿ ನೂತನ ಪೀಳಿಗೆಯ ಸೈಬರ್ ಸುರಕ್ಷತೆಯ ಸೂಟ್ ಬಿಡುಗಡೆ ಮಾಡಿದೆ.
ಗೌಪ್ಯತೆ, ರಕ್ಷಣೆ ಮತ್ತು ಕಾರ್ಯಕ್ಷಮತೆಯಿಂದ ನಡೆಸಲ್ಪಡುವ ಈ ಹೊಸ ಸೂಟ್ ವೈಯಕ್ತಿಕ ಡೇಟಾ ಹಾಗೂ ಡಿಜಿಟಲ್ ಐಡೆಂಟಿಟಿಗಳ ಸಂರಕ್ಷಣೆ ಜತೆಗೆ ಗ್ರಾಹಕರ ಸಾಧನಗಳನ್ನೂ ರಕ್ಷಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ಡಿಜಿಟಲ್ ಹಾಗೂ ಸೈಬರ್ ಕ್ಷೇತ್ರಗಳಲ್ಲಿ ಕಾಲ ಕಾಲಕ್ಕೆ ಎದುರಾಗುವ ಸಮಸ್ಯೆಗಳಿಗೆ ಸಮಗ್ರ ಪರಿಹಾರ ನೀಡಲಿರುವ ಕ್ವಿಕ್ ಹೀಲ್ ಟೆಕ್ನಾಲಜೀಸ್ ಭಾರತದಲ್ಲಿ ಗ್ರಾಹಕರ ಸುರಕ್ಷತೆಯನ್ನು ಮರು ವ್ಯಾಖ್ಯಾನಿಸುತ್ತಿದೆ.
ಕ್ವಿಕ್ಹೀಲ್ ಟೆಕ್ನಾಲಜೀಸ್ ಲಿಮಿಟೆಡ್ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ತಂತ್ರಜ್ಞಾನ ಅಧಿಕಾರಿ ಸಂಜಯ್ ಕಟ್ಕರ್ ಮಾತನಾಡಿ, ಸೈಬರ್ ಸೆಕ್ಯೂರಿಟಿ ವಿಭಾಗದ ನಾವೀನ್ಯತೆಗಳಲ್ಲಿ ಸದಾ ಮುಂಚೂಣಿಯಲ್ಲಿರಲು ಕ್ವಿಕ್ಹೀಲ್ ಟೆಕ್ನಾಲಜೀಸ್ ಪ್ರಯತ್ನಿಸುತ್ತಿದೆ. ಇತ್ತೀಚಿನ ತಾಂತ್ರಿಕ ಪ್ರಗತಿಗಳಿಗೆ ಹೆಚ್ಚು ಒಗ್ಗಿಕೊಳ್ಳುವ ಮೂಲಕ ಬಳಕೆದಾರರಿಗೆ ಉತ್ತಮ ಹಾಗೂ ಅತ್ಯಾಧುನಿಕ ಭದ್ರತಾ ಸೇವೆಗಳನ್ನು ಒದಗಿಸಲು ನಮ್ಮನ್ನು ನಾವು ವಿಕಸನಗೊಳಿಸಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.
ಭಾರತೀಯರೇ ಟಾರ್ಗೆಟ್
ಸೈಬರ್ ಅಪರಾಧ ಪ್ರಕರಣಗಳಲ್ಲಿ ದುಷ್ಕರ್ವಿುಗಳು ಭಾರತೀಯರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಗುರಿಯಾಗಿಸುತ್ತಿದ್ದಾರೆ ಎಂದು ತನ್ನ ವಾರ್ಷಿಕ ಥ್ರೆಟ್ ರಿಪೋರ್ಟ್ನಲ್ಲಿ ತಿಳಿಸಿರುವ ಕ್ವಿಕ್ಹೀಲ್, 2019ರಲ್ಲಿ ಭಾರತೀಯ ಗ್ರಾಹಕರಿಗಾಗಿ ಬಂದ 1 ಬಿಲಿಯನ್ಗೂ ಅಧಿಕ ಸೈಬರ್ ಅಪಾಯಗಳನ್ನು ಪತ್ತೆ ಹಚ್ಚಿ ನಿರ್ಬಂಧಿಸಲಾಗಿದ್ದು, ಪ್ರತಿದಿನ 29 ಲಕ್ಷಕ್ಕೂ ಹೆಚ್ಚು ಸೈಬರ್ ಅಪಾಯಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಹೇಳಿದೆ. ದೇಶದಲ್ಲಿ ಲಾಕ್ಡೌನ್ ಘೋಷಣೆಯಾದ ವೇಳೆ ಕರೊನಾ ವೈರಸ್ ವಿಷಯವನ್ನು ಆಧಾರವಾಗಿಟ್ಟುಕೊಂಡು ಅನೇಕ ಸ್ಪ್ಯಾಮ್ ಹಾಗೂ ಫಿಶಿಂಗ್ ಇ-ಮೇಲ್ಗಳನ್ನು ಕಳುಹಿಸುವ ಮೂಲಕ ಸೈಬರ್ ದಾಳಿಯ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿರುವುದನ್ನು ಕ್ವಿಕ್ ಹೀಲ್ ಸಂಶೋಧಕರು ಗಮನಿಸಿದ್ದಾರೆ. ಹೊಸ ಸೈಬರ್ ಅಪಾಯಗಳು, ವಿಶೇಷವಾಗಿ ಕೋವಿಡ್-19 ಹಿನ್ನೆಲೆಯಲ್ಲಿ ಎದುರಾಗುತ್ತಿರುವ ಅಪಾಯಗಳನ್ನು ತ್ವರಿತಗತಿಯಲ್ಲಿ ಹಿಮ್ಮೆಟ್ಟಿಸುವ ಉದ್ದೇಶದಿಂದ ಸೈಬರ್ ಸೆಕ್ಯೂರಿಟಿ ಸೂಟ್ ಬಿಡುಗಡೆ ಮಾಡಲಾಗಿದೆ ಎನ್ನಲಾಗಿದೆ.