ಸೈಬರ್ ವಂಚನೆ ಪ್ರಕರಣ ದಾಖಲಿಸಲು ಹಿಂದೇಟು

FotoJet (3)
Published on

ಕಳ್ಳರಿಗೆ ಅನುಕೂಲವಾದ ಪೊಲೀಸರ ನಿರ್ಲಕ್ಷ್ಯ ಧೋರಣೆ ತಪ್ಪಲಿಲ್ಲ ವಂಚನೆಗೊಳಗಾದವರ ಅಲೆದಾಟ

ಚಿಕ್ಕಬಳ್ಳಾಪುರ: ಸಾಮಾಜಿಕ ಜಾಲತಾಣದಲ್ಲಿ ಸೈಬರ್ ಅಪರಾಧಗಳ ಬಗ್ಗೆ ಪ್ರಚಾರ ಕೈಗೊಳ್ಳುತ್ತಿರುವ ಜಿಲ್ಲೆಯ ಪೊಲೀಸರು, ಆನ್‌ಲೈನ್ ವಂಚನೆಯ ಪ್ರಕರಣ ದಾಖಲಿಸಿಕೊಳ್ಳಲು ಮಾತ್ರ ಹಿಂದೇಟು ಹಾಕುತ್ತಿದ್ದಾರೆ.

ಹೌದು! ಠಾಣೆ ವ್ಯಾಪ್ತಿಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿ ಕೆಟ್ಟ ಹೆಸರು ಬರುತ್ತದೆ ಎಂಬ ಭಾವನೆಯಲ್ಲಿ ಠಾಣೆಗೆ ಬರುವ ದೂರುದಾರರನ್ನು ವಾಪಸ್ ಕಳುಹಿಸುತ್ತಿದ್ದು, ಪೊಲೀಸರ ನಿರ್ಲಕ್ಷ್ಯ ಧೋರಣೆಯು ವಂಚಕರಿಗೆ ಅನುಕೂಲವಾಗುತ್ತಿದೆ. ವಂಚನೆಗೊಳಗಾದವರು ಅಲೆದಾಟ, ಅಸಹಾಯಕತೆ, ಗೊಂದಲದಿಂದ ನೋವು ಅನುಭವಿಸುವಂತಾಗಿದೆ.

ದೂರು ದಾಖಲಿಸಲು ಹಿಂದೇಟು

ಶಿಡ್ಲಘಟ್ಟ ತಾಲೂಕಿನ ಬೈಯಪ್ಪನಹಳ್ಳಿಯ ನಿಖಿತಾ ಎಂಬುವರು ಆನ್‌ಲೈನ್‌ನಲ್ಲಿ 81 ಸಾವಿರ ರೂ.ಗಳನ್ನು ಕಳೆದುಕೊಂಡಿದ್ದು, ಈ ಬಗ್ಗೆ ದೂರು ಸಲ್ಲಿಸಲು ಶಿಡ್ಲಘಟ್ಟ ಗ್ರಾಮಾಂತರ ಠಾಣೆಗೆ ಹೋದಾಗ 50 ಸಾವಿರ ರೂ.ಗಳಿಗೂ ಹೆಚ್ಚಿನ ಹಣದ ವಂಚನೆಗೆ ಚಿಕ್ಕಬಳ್ಳಾಪುರಕ್ಕೆ ತೆರಳಲು ತಿಳಿಸಿದ್ದಾರೆ. ಅದರಂತೆ ಚಿಕ್ಕಬಳ್ಳಾಪುರದ ಸೈಬರ್ ಅಪರಾಧ ದಳಕ್ಕೆ ದೂರು ಸಲ್ಲಿಸಲು ಬಂದ ವೇಳೆ 1 ಲಕ್ಷ ರೂ. ಗೂ ಹೆಚ್ಚಿನ ವಂಚನೆಯ ಪ್ರಕರಣ ಮಾತ್ರ ದಾಖಲಿಸಿಕೊಳ್ಳಲಾಗುತ್ತದೆ. ಹಾಗಾಗಿ ಮತ್ತೆ ಶಿಡ್ಲಘಟ್ಟದಲ್ಲೇ ದೂರು ನೀಡುವಂತೆ ಸೂಚಿಸಲಾಗಿದೆ. ಇವರ ಕಣ್ಣಾಮುಚ್ಚಾಲೆಯಾಟಕ್ಕೆ ದೂರುದಾರರು ಹೈರಾಣಾಗುವಂತಾಗಿದೆ.

ಎಸ್ಪಿ ಮಾತಿಗೂ ಬೆಲೆ ಇಲ್ಲ

ವಂಚನೆ ಪ್ರಕರಣದ ದಾಖಲು ಸಂಬಂಧಿಸಿದಂತೆ ಸ್ಥಳೀಯ ಪೊಲೀಸರ ವರ್ತನೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಾಗ ಸಮಸ್ಯೆ ಬಗೆಹರಿಸುವ ಮಾತನ್ನು ಹೇಳಿ, ಸಿಬ್ಬಂದಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಆದರೂ ಪ್ರಕರಣ ದಾಖಲಾಗಲಿಲ್ಲ. ಡಿವೈಎಸ್ಪಿ ಅನುಮತಿ ಬೇಕು ಎಂದು ಪೊಲೀಸರು ರಾಗ ಎಳೆದಿದ್ದಾರೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು. ಕೊನೆಗೆ ಒತ್ತಡ ಹೆಚ್ಚಾದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಿಬ್ಬಂದಿ ದರ್ಪದ ಮಾತು

ವಂಚನೆ ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯನ್ನು ಕೇಳಿದಾಗ ಪೊಲೀಸ್ ಸಿಬ್ಬಂದಿ ದರ್ಪ ಮೆರೆದಿದ್ದಾರೆ. ದೂರುದಾರರು, ಮಾಧ್ಯಮದವರ ಮೇಲೆ ಮುಗಿಬಿದ್ದು ಗಲಾಟೆಗೆ ಬಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪ್ರಕರಣದ ಹಿನ್ನೆಲೆ

ಬೈಯಪ್ಪನಹಳ್ಳಿಯ ನಿಖಿತಾ ಟಿವಿಯ ಕೇಬಲ್ ಸಂಪರ್ಕಕ್ಕೆ ಆನ್‌ಲೈನ್‌ನಲ್ಲಿ ಹಣ ಪಾವತಿಸಿದ್ದು ಆದರೂ ಚಾಲನೆಗೊಂಡಿಲ್ಲ. ಇದಕ್ಕೆ ಕಂಪನಿಯ ಸಹಾಯವಾಣಿಗೆ ಕರೆ ಮಾಡಿದ್ದು ಆಗ ಸಿಬ್ಬಂದಿ ಹೇಳಿದಂತೆ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಪಿನ್ ನಂಬರ್ ಒತ್ತಿದಾಗ ರೀಫಂಡ್ ಬದಲಿಗೆ ಖಾತೆಯಲ್ಲಿದ್ದ 80 ಸಾವಿರ ರೂ.ಗಳೂ ಕಡಿತಗೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net