

ತುಮಕೂರು: ಜಿಲ್ಲೆಯಲ್ಲಿ ಪ್ರತಿ ವರ್ಷ ಸರಾಸರಿ 8000 ಅಪರಾಧ ಪ್ರಕರಣಗಳು ದಾಖಲಾಗುತ್ತಿದ್ದರೆ, ಅದರಲ್ಲಿ 800 ಸೈಬರ್ ಅಪರಾಧಗಳು ನಡೆಯುತ್ತಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಹೇಳಿದರು.
ನಗರ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಮತ್ತು ತುಮಕೂರು ಸ್ಮಾರ್ಟ್ಸಿಟಿ ಲಿಮಿಟೆಡ್ ಸಹಯೋಗದಲ್ಲಿ ಬುಧವಾರ ಪೊಲೀಸರಿಗೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸೈಬರ್ ಸುರಕ್ಷತಾ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ನಡೆಯಲಿರುವ ಅಪರಾಧಗಳಲ್ಲಿ ಶೇ.50ಕ್ಕು ಹೆಚ್ಚು ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳೇ ದಾಖಲಾಗಲಿವೆ ಎಂದರು.
ಸೈಬರ್ ಕೃತ್ಯಗಳಿಗೆ ನಗರ, ಹಳ್ಳಿ ಎಂಬ ಗಡಿಯಿಲ್ಲ. ಗ್ರಾಮೀಣ ಭಾಗದಲ್ಲೂ ಸೈಬರ್ ಕ್ರೈಂಗಳೇ ಹೆಚ್ಚು ದಾಖಲಾಗುತ್ತಿವೆ. ಹಾಗಾಗಿ, ಪ್ರತಿಯೊಬ್ಬ ಪೊಲೀಸರು ಇಲಾಖೆಗೆ ಸವಾಲೆನಿಸಿರುವ ಸೈಬರ್ ಕ್ರೈಂ ಬಗ್ಗೆ ಅರಿವು ಹೊಂದಿರಬೇಕು. ಕಾರ್ಯಗಾರದಲ್ಲಿ ಕಲಿಯುವುದರ ಜತೆಗೆ ಈ ಬಗ್ಗೆ ಕುತೂಹಲ ಹೊಂದುವ ಮೂಲಕ ಖುದ್ದು ಆಸಕ್ತಿಯಿಂದ, ಕಂಪ್ಯೂಟರ್ ಬಗ್ಗೆ ಜ್ಞಾನವುಳ್ಳವರಿಂದ ತಿಳಿದು ಕೇಳಿ ಕಲಿಯಬೇಕು. ಆಗ ಉತ್ತಮ ಸೇವೆ ಸಲ್ಲಿಸಲು, ಸೈಬರ್ ಅಪರಾಧಗಳನ್ನು ಬೇಧಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಸಾಫ್ಟ್ವೇರ್ ಮಾತ್ರವಲ್ಲದೆ ಹಾರ್ಡ್ವೇರ್ ಮೂಲಕ ಕೂಡ ವಂಚನೆ ನಡೆಯುತ್ತಿದ್ದು ಸೈಬರ್ ಸುರಕ್ಷತೆ ಹೊಸ ಭಾಷೆಯನ್ನು ಕಲಿಯಬೇಕು. ಎಟಿಎಂ ಸ್ಕಿಮ್ಮಿಂಗ್ ಪ್ರಕರಣಗಳು ದಾಖಲಾಗುತ್ತಿದ್ದು ಸೈಬರ್ ಸುರಕ್ಷತೆಗೆ ಸಂಬಂಧಿಸಿದಂತೆ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಭಾಷೆಗಳನ್ನು ಎಲ್ಲರು ಕಲಿಯಬೇಕಿದೆ. ಈ ನಿಟ್ಟಿನಲ್ಲಿ ಸೈಬರ್ ಸುರಕ್ಷತಾ ಕ್ರಮಗಳು ಹಾಗೂ ಬೇಧಿಸುವ ರೀತಿ ಬಗ್ಗೆ ಪ್ರತಿಯೊಬ್ಬ ಪೊಲೀಸರು ಅರಿತಿರುವಂತೆ ಸಲಹೆ ನೀಡಿದರು.
ಸೈಬರ್ ಜಗತ್ತಿನ ಪರಿಧಿಯೇ ಬೇರೆ. ಅದು ಭೂಮಿಯಲ್ಲಿಲ್ಲ. ಸೈಬರ್ ವಂಚಕರು ಚಾಪೆ ಕೆಳಗೆ ನುಸುಳಿದರೆ ಪೊಲೀಸರು ರಂಗೋಲಿ ಕೆಳಗೆ ನುಸುಳುವ ತಂತ್ರಜ್ಞಾನ ಹೊಂದಿರಬೇಕು. ಅಪರಾಧ ಕೃತ್ಯಗಳ ಪತ್ತೆಗೆ ಹೊರರಾಜ್ಯಗಳಿಗೆ ತೆರಳಿ ಆರೋಪಿಗಳನ್ನು ಪತ್ತೆ ಮಾಡುವ ವೇಳೆ ನಮ್ಮ ಪೊಲೀಸರು ಅಲ್ಲಿನ ಭಾಷೆ, ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಸೈಬರ್ ಅಪರಾಧಗಳನ್ನೂ ಬೇಧಿಸಲು ಅತ್ಯಗತ್ಯ ಜ್ಞಾನ ಹೊಂದಿರಬೇಕು ಎಂದರು.
ಕಾರ್ಯಾಗಾರದಲ್ಲಿ ಎಎಸ್ಪಿ ವಿ.ಮರಿಯಪ್ಪ, ಸೈಬರ್ ಸುರಕ್ಷತಾ ಪರಿಣಿತ ಕಾರ್ತಿಕ್ ರಾವ್ಬೊಪ್ಪನಾಡು ಉಪಸ್ಥಿತರಿದ್ದರು.