

ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದ ಪತಿ, ಏಕಾಂತದ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರಿಕರಿಸಿಕೊಂಡು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಕೆ.ಆರ್.ಪುರದ ದೇವಸಂದ್ರ ನಿವಾಸಿ 29 ವರ್ಷದ ಮಹಿಳೆ ಕೊಟ್ಟ ದೂರಿನ ಮೇರೆಗೆ ಹೊಂಗಸಂದ್ರ ನಿವಾಸಿ ಹರಿಕೃಷ್ಣ ಎಂಬಾತನ ವಿರುದ್ಧ ವೈಟ್‌ಫೀಲ್ಡ್ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂತ್ರಸ್ತ ಮಹಿಳೆ 10 ವರ್ಷಗಳ ಹಿಂದೆ ಮದುವೆಯಾಗಿದ್ದು, 2015ರಲ್ಲಿ ವಿಚ್ಛೇದನ ಪಡೆದಿದ್ದರು. ಬಳಿಕ ಭಟ್ಟರಹಳ್ಳಿಯ ಖಾಸಗಿ ಕಂಪನಿಯೊಂದರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಸಹೋದ್ಯೋಗಿ ಹರಿಕೃಷ್ಣನ ಪರಿಚಯವಾಗಿತ್ತು. ಪರಸ್ಪರ ಒಪ್ಪಿಗೆಯಿಂದ 2019ರಲ್ಲಿ ಮದುವೆಯಾಗಿದ್ದರು. ಮೊದಲನೇ ಪತಿ ಜತೆ ಸಂಬಂಧ ಮುಂದುವರಿಸಿದ್ದೀಯ ಎಂದು ಪತ್ನಿಯ ಶೀಲ ಶಂಕಿಸಿ ಹರಿಕೃಷ್ಣ ಗಲಾಟೆ ಮಾಡುತ್ತಿದ್ದ. ಇದರಿಂದ ಬೇಸತ್ತ ಮಹಿಳೆ ಪತಿಯ ವಿರುದ್ಧ ಫೆಬ್ರವರಿಯಲ್ಲಿ ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಈ ಕುರಿತು ಎನ್‌ಸಿಆರ್ ದಾಖಲಿಸಿಕೊಂಡಿದ್ದ ಪೊಲೀಸರು, ಇಬ್ಬರಿಗೂ ತಿಳಿಹೇಳಿ ಕಳುಹಿಸಿದ್ದರು.
ಇತ್ತೀಚೆಗೆ ಏಕಾಂತದಲ್ಲಿದ್ದಾಗ ಅರಿವಿಗೆ ಬಾರದಂತೆ, ಪತಿ ಹರಿಕೃಷ್ಣ ತನ್ನ ಮೊಬೈಲ್‌ನಲ್ಲಿ ಖಾಸಗಿ ದೃಶ್ಯಗಳನ್ನು ಚಿತ್ರಿಸಿಕೊಂಡಿದ್ದಾನೆ. ಅದನ್ನು ವ್ಯಾಟ್ಸ್‌ಆ್ಯಪ್ ಮೂಲಕ ಸ್ನೇಹಿತರಿಗೆ ರವಾನಿಸಿದ್ದಾನೆ. ಅಲ್ಲದೆ, ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಖಾಸಗಿ ದೃಶ್ಯಗಳನ್ನು ಅಪ್‌ಲೋಡ್ ಮಾಡಿದ್ದಾನೆ ಎಂದು ಆರೋಪಿಸಿ ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.