

ಬೆಂಗಳೂರು: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ದುಷ್ಕರ್ಮಿಗಳ ಗುಂಪೊಂದು ವಿಕೃತಿ ಮೆರೆದಿರುವ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ. ಓಲ್ಡ್ ಪೆನ್ಷನ್ ಮೊಹಲ್ಲಾದಲ್ಲಿ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನರ್ಮಾಣವಾಗಿದೆ.
ವಾಸು ಎಂಬುವವರಿಗೆ ಈ ಹಸುಗಳು ಸೇರಿದ್ದು, ಗಾಯಗೊಂಡಿರುವ ಹಸುಗಳನ್ನು ಚಾಮರಾಜಪೇಟೆಯಲ್ಲಿರುವ ಪಶು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ 20ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದ್ದು, ಸಂಸದ ಪಿಸಿ ಮೋಹನ್ ಹಾಗೂ ಹಿಂದೂ ಸಂಘಟನೆಯ ಮುಖಂಡರು ಭೇಟಿ ಕೊಡುತ್ತಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಸಂಸದ ಪಿಸಿ ಮೋಹನ್, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಅದಕ್ಕೆ ಈ ಘಟನೆಯೇ ಜೀವಂತ ಸಾಕ್ಷಿಯಾಗಿದೆ. ಮೂಕಪ್ರಾಣಿಗಳ ಕಾಲಿಗೆ ಮಚ್ಚಿನಿಂದ ಹೊಡೆದಿರುವ ದುರುಳರು ಮೂರು ಹಸುಗಳ ಕೆಚ್ಚಲನ್ನು ಕತ್ತರಿಸಿದ್ಧಾರೆ.
ವಿರೋಧ ಪಕ್ಷದ ನಾಯಕರು ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಮೊದಲು ಇಲ್ಲಿ ಹಸುವಿನ ಆಸ್ಪತ್ರೆಯಿತ್ತು. ಅದನ್ನು ಮುಚ್ಚಲು ಮುಂದಾಗಿದ್ದರು. ಆದರೆ, ಇದನ್ನು ಹಸುವಿನ ಮಾಲೀಕ ಕರ್ಣ ವಿರೋಧಿಸಿದ್ದ. ಅದಕ್ಕೆ ಈ ರೀತಿ ಮಾಡಿದ್ಧಾರೆ ಎಂದು ಸಂಸದ ಪಿಸಿ ಮೋಹನ್ ಆರೋಪಿಸಿದ್ದಾರೆ.