ವಿದ್ಯಾರ್ಥಿಗಳಿಗೆ ಶಾಪವಾದ ಸರ್ಕಾರಿ ಶಾಲೆ?

FotoJet
Published on

ಶೌಚಗೃಹವಿಲ್ಲದೆ ಮಕ್ಕಳ ಪರದಾಟ | ಸಮಸ್ಯೆ ಅರಿವಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳು

 ಗೌರಿಬಿದನೂರು : ಹಲವು ಕಾರಣಗಳಿಂದ ಸರ್ಕಾರಿ ಶಾಲೆ ಎಂದರೆ ಮೂಗುಮುರಿಯುವವರೇ ಹೆಚ್ಚಾಗಿದ್ದಾರೆ. ಆದರೆ, ನಗರದ ಸರ್ಕಾರಿ ಶಾಲೆಯಲ್ಲಿ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ದಾಖಲಾಗಿದ್ದು, ಅವರಿಗೆ ಸೂಕ್ತ ಸೌಲಭ್ಯ ಕಲ್ಪಿಸಬೇಕಿದ್ದ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ಯಾಕಾದರೂ ಈ ಶಾಲೆಗೆ ಸೇರಿದೆವೋ ಎಂದು ಪರಿತಪಿಸುವಂತಾಗಿದೆ.
ನಗರದ ಕೋಟೆ ಪ್ರದೇಶದ ಒಂದೇ ಸಮುಚ್ಚಯದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬಾಲಕಿಯರ ಪ್ರೌಢಶಾಲೆಯಲ್ಲಿ ಬರೋಬ್ಬರಿ 1310 ವಿದ್ಯಾರ್ಥಿಗಳಿದ್ದಾರೆ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ 320 ಬಾಲಕರು, 420 ಬಾಲಕಿಯರು ಸೇರಿ 740 ವಿದ್ಯಾರ್ಥಿಗಳಿದ್ದರೆ, ಬಾಲಕಿಯರ ಪ್ರೌಢಶಾಲೆಯಲ್ಲಿ 570 ವಿದ್ಯಾರ್ಥಿನಿಯರಿದ್ದಾರೆ. ಬಾಲಕರಿಗೆ 3 ಶೌಚಗೃಹ ಹಾಗೂ 7 ಮೂತ್ರಖಾನೆ ಹಾಗೂ ಬಾಲಕಿಯರಿಗೆ 8 ಶೌಚಗೃಹ ಹಾಗೂ 6 ಮೂತ್ರಖಾನೆಗಳಿವೆ. ಸಹಸ್ರಾರು ಸಂಖ್ಯೆಯಲ್ಲಿರುವ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಅಗತ್ಯ ಸೌಕರ್ಯವಿರಲಿ ಕನಿಷ್ಠ ಶೌಚಗೃಹ ಹಾಗೂ ಮೂತ್ರಖಾನೆ ಒದಗಿಸಿಲ್ಲ.

ವಿದ್ಯಾರ್ಥಿಗಳಿಗೆ ಕಿರಿಕಿರಿ
ಸೂಕ್ತ ಶೌಚವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಜಲಬಾಧೆ ಹಾಗೂ ಮಲಬಾಧೆ ತೀರಿಸಿಕೊಳ್ಳಲು ಪರದಾಡುವಂತಾಗಿದೆ. ಅನೇಕ ವಿದ್ಯಾರ್ಥಿಗಳು ಬೆಳಗ್ಗೆ ಶಾಲೆಗೆ ಬಂದರೆ ಸಂಜೆ ಶಾಲೆ ಬಿಡುವವರೆಗೆ ಶೌಚಕ್ಕೆ ಹೋಗದೆ ಪರಿತಪಿಸುವಂತಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ಅನೇಕ ಹೆಣ್ಣು ಮಕ್ಕಳು ಸಮೀಪದ ಮನೆಗಳನ್ನು ಹುಡುಕಿಕೊಂಡು ಹೋಗುವುದು ಸಾಮಾನ್ಯವಾಗಿದೆ.

ಸ್ವಚ್ಛತೆಗೆ ಎಳ್ಳು -ನೀರು
ಒಂದೆಡೆ ಶೌಚವ್ಯವಸ್ಥೆಯ ಕೊರತೆ ಕಾಡುತ್ತಿದ್ದರೆ, ಮತ್ತೊಂದೆಡೆ ಸ್ವಚ್ಛತೆಗೆ ಎಳ್ಳು- ನೀರು ಬಿಡಲಾಗಿದೆ. ಶಾಲೆಯಲ್ಲಿರುವ ಅಷ್ಟೂ ಶೌಚಗೃಹಗಳ ನಿರ್ವಹಣೆಗೆ ಒಬ್ಬರನ್ನು ಮಾತ್ರ ನಿಯೋಜಿಸಲಾಗಿದೆ. ನೀರಿನ ಕೊರತೆ ಕೂಡ ಇರುವುದರಿಂದ ಸರಿಯಾಗಿ ಸ್ವಚ್ಛತೆ ಮಾಡುವುದು ಕಷ್ಟವಾಗಿದೆ. ಹೆಜ್ಜೆಯಿಡಲು ಸಾಧ್ಯವಾಗದಷ್ಟು ಗಲೀಜು. ಸದಾ ದುರ್ನಾತ. ಮೂಗು ಮುಚ್ಚಿಕೊಂಡೇ ಒಳ ಹೋಗಿ, ಹೊರ ಬರಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಸಾಂಕ್ರಾಮಿಕ ಭೀತಿ ಕಾಡುತ್ತಿದೆ.

ಕಣ್ಣಿಗೆ ಕಾಣದ ಪರಿಸ್ಥಿತಿ
ಶಾಲೆಯ ಹಿಂಭಾಗದಲ್ಲೇ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿದೆ. ಶಾಲೆಯ ಸಮಸ್ಯೆ ಅಧಿಕಾರಿಗಳಿಗೆ ತಿಳಿಯದ್ದೇನೂ ಅಲ್ಲ. ಆದರೆ, ಅಧಿಕಾರಿಗಳು ಕುರುಡರಂತಾಗಿದ್ದಾರೆ. ಶಾಲೆಯ ಸ್ಥಿತಿ ದೀಪದ ಕೆಳಗೆ ಕತ್ತಲು ಎಂಬಂತಾಗಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎಂದು ಭಾಷಣ ಬಿಗಿಯುವ ಜನಪ್ರತಿನಿಧಿಗಳು, ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಈ ಶಾಲೆಗೆ ಭೇಟಿ ನೀಡಿ ಇಲ್ಲಿನ ಶೋಚನೀಯ ಸ್ಥಿತಿ ನಿವಾರಣೆಗೆ ಅಗತ್ಯ ಕ್ರಮ ಜರುಗಿಸಬೇಕಿದೆ.

ಹೆಚ್ಚುವರಿ ಶೌಚಗೃಹ ನಿರ್ಮಿಸಲು ನಗರಸಭೆಗೆ ಬೇಡಿಕೆ ಇರಿಸಲಾಗಿದೆ. ಸ್ವಚ್ಛತೆ ಹಾಗೂ ನಿರ್ವಹಣೆ ಕೆಲಸಕ್ಕೆ ಯಾರೂ ಮುಂದೆಬಾರದ ಕಾರಣ ತೊಂದರೆಯಾಗಿದೆ. ಇರುವ ಸಿಬ್ಬಂದಿಗೆ ಸೂಕ್ತ ನಿರ್ವಹಣೆ ಮಾಡುವಂತೆ ಸೂಚಿಸಲಾಗಿದೆ. ಕಸದ ಡಬ್ಬಿಗಳನ್ನು ಇರಿಸಿದ್ದರೂ ಹೆಣ್ಣುಮಕ್ಕಳು ಸ್ಯಾನಿಟರಿ ಪ್ಯಾಡ್‌ಗಳನ್ನು ಶೌಚಗೃಹದ ಬೇಸಿನ್‌ಗಳಲ್ಲಿ ಹಾಕುತ್ತಿರುವುದರಿಂದ ನೀರು ಬಂದ್ ಆಗುತ್ತಿದೆ. ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ.  - ಶ್ರೀನಿವಾಸ ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net