ಸದನದಲ್ಲಿ ವಿದ್ಯುತ್ ಕೊರತೆ ದರ್ಶನ ಮಾಡಿಸಿದ ಶರಣಬಸಪ್ಪ ಗೌಡ ದರ್ಶನಾಪುರ್

fhs
Published on

ಬೆಂಗಳೂರು: ನನ್ನ ಕ್ಷೇತ್ರವೂ ಸೇರಿ ರಾಜ್ಯದಲ್ಲಿ ಎಲ್ಲೂ ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ನಗರ ಪ್ರದೇಶದಲ್ಲಷ್ಟೇ ವಿದ್ಯುತ್ ವಿತರಣೆ ಸರಿ ಇದೆ, ಗ್ರಾಮೀಣ ಭಾಗದಲ್ಲಿ ಸಮಸ್ಯೆ ಇದೆ ಎಂದು ಕಾಂಗ್ರೆಸ್​ನ ಶರಣಬಸಪ್ಪ ಗೌಡ ದರ್ಶನಾಪುರ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ವಿಧಾನಸಭೆಯಲ್ಲಿ ಸರ್ಕಾರ ನೀಡಿದ ಲಿಖಿತ ಉತ್ತರಕ್ಕೆ ಇದು ಸುಳ್ಳುತ್ತರ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಎಲ್ಲ ಶಾಸಕರಿಗೂ ಈ ಸಮಸ್ಯೆ ಅರಿವಿದೆ ಎಂದರು. ಇದಕ್ಕೆ ದನಿಗೂಡಿಸಿದ ಶಿವಾನಂದ್ ಪಾಟೀಲ್, ರಾತ್ರಿ ವೇಳೆ ವಿದ್ಯುತ್ ನೀಡಿದರೆ ರೈತರು ಏನು ಮಾಡಬೇಕು. ಒಟ್ಟಿಗೆ 4 ತಾಸು ಮೂರು ಫೇಸ್ ವಿದ್ಯುತ್ ನೀಡಬೇಕೆಂದರು. ನಿರಂತರ ಜ್ಯೋತಿ ಅನುಷ್ಠಾನಗೊಂಡಿರದ ಗ್ರಾಮೀಣ ಪ್ರದೇಶಗಳಿಗೆ 7 ತಾಸು 3 ಫೇಸ್ ಮತ್ತು 9 ತಾಸು ಸಿಂಗಲ್ ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ತಾಂತ್ರಿಕ ಸಾಧ್ಯತೆ ಇರುವ ಕಡೆ ಹಗಲಿನ ವೇಳೆಯಲ್ಲಿಯೇ ನಿರಂತರ 7 ತಾಸು ಮೂರು ಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂಬ ಉತ್ತರಕ್ಕೆ ಪ್ರತಿಪಕ್ಷ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಸಮಸ್ಯೆ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net