ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ

15-pnp 3
ಪಾಂಡವಪುರ ಪಟ್ಟಣದ ತಾಪಂ ಸಭಾಂಗಣದಲ್ಲಿ ಶಾಸಕ ದರ್ಶನ್‌ಪುಟ್ಟಣ್ಣಯ್ಯ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
Published on

ಪಾಂಡವಪುರ: ತಾಲೂಕಿನಲ್ಲಿ ಗಾಂಜಾ ಮತ್ತು ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದ್ದು, ಪ್ರತಿ ಗ್ರಾಮದ ಪೆಟ್ಟಿ ಅಂಗಡಿಯಲ್ಲೂ ಮದ್ಯ ಸುಲಭವಾಗಿ ಸಿಗುವುದರಿಂದ ಅಪ್ರಾಪ್ತರು ಕುಡಿತಕ್ಕೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲೇಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಬಕಾರಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ (ಕೆಡಿಪಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪೆಟ್ಟಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದೆ ಎಂದು ಖುದ್ದು ಕರೆ ಮಾಡಿ ಹೇಳಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ದಾಳಿಗೂ ಮುನ್ನವೇ ಮದ್ಯ ಮಾರಾಟಗಾರರಿಗೆ ವಿಚಾರ ತಲುಪುತ್ತದೆ ಎಂದರೆ ಅಬಕಾರಿ ಅಧಿಕಾರಿಗಳು ಯಾವ ರೀತಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ಗ್ರಾಮದ ಪೆಟ್ಟಿ ಅಂಗಡಿಗಳಲ್ಲಿ ಮಧ್ಯೆ ಮಾರಾಟವಾಗುತ್ತಿದೆ. ಎಲ್ಲೆಂದರಲ್ಲಿ ಗಾಂಜಾ ಮಾರಾಟವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲವೇಕೆ? ತಾಲೂಕಿನಲ್ಲಿ ಹೊಸ ಮದ್ಯದ ಅಂಗಡಿಗಳ ಮಾಲೀಕರು ಲೈಸೆನ್ಸ್ ಪಡೆಯಲು ಅಗತ್ಯವಿರುವ ಎನ್‌ಒಸಿ ನೀಡಬಾರದು ಎಂದು ಎಚ್ಚರಿಕೆ ನೀಡಿದರು.

ಅನಧಿಕೃತ ಕ್ಲಿನಿಕ್ ಮುಚ್ಚಿಸಿ: ಆರೋಗ್ಯ ಇಲಾಖೆಯಿಂದ ಅನುಮತಿ ಪಡೆಯದೆ ನಡೆಯುತ್ತಿರುವ ಅನಧಿಕೃತ ಕ್ಲಿನಿಕ್‌ಗಳ ಬಾಗಿಲು ಮುಚ್ಚಿಸುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಅವರಿಗೆ ಸೂಚನೆ ನೀಡಿದ ಶಾಸಕರು, ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಒಟ್ಟಾರೆ ಎಷ್ಟು ಕ್ಲಿನಿಕ್‌ಗಳಿವೆ? ಇದರಲ್ಲಿ ಎಷ್ಟು ಕ್ಲಿನಿಕ್‌ಗಳಿಗೆ ಆರೋಗ್ಯ ಇಲಾಖೆ ಅನುಮತಿ ನೀಡಿದೆ? ಅನಧಿಕೃತ ಕ್ಲಿನಿಕ್‌ಗಳು ಎಷ್ಟಿವೆ? ಎಂಬುದನ್ನು ಪಟ್ಟಿ ಮಾಡಿಕೊಡಿ. ಅನಧಿಕೃತ ಕ್ಲಿನಿಕ್‌ಗಳಿಗೆ ಯಾವುದೇ ನೋಟಿಸ್ ಜಾರಿ ಮಾಡದೆ ಇಂದಿನಿಂದಲೇ ಬಾಗಿಲು ಮುಚ್ಚಿಸಬೇಕು. ಇದರಲ್ಲಿ ಯಾವುದೇ ಮುಲಾಜು ತೋರಬಾರದು ಎಂದು ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ.ಸಿ.ಎ.ಅರವಿಂದ್ ಅವರು ತಾಲೂಕಿನಲ್ಲಿ ಒಟ್ಟು 46 ಕ್ಲಿನಿಕ್‌ಗಳಿದ್ದು, ಇದರಲ್ಲಿ 26 ಕ್ಲಿನಿಕ್ ಅನುಮತಿ ಪಡೆದಿವೆ, 10 ಕ್ಲಿನಿಕ್ ಅನುಮತಿಗೆ ಅರ್ಜಿ ಸಲ್ಲಿಸಿವೆ, 10 ಕ್ಲಿನಿಕ್ ಯಾವುದೇ ಅನುಮತಿ ಪಡೆಯದೆ ನಡೆಸುತ್ತಿವೆ ಎಂದು ಮಾಹಿತಿ ನೀಡಿದರು.

ಮೊಟ್ಟೆ ಲೆಕ್ಕ ಬೇಡ, ಮಕ್ಕಳ ಲೆಕ್ಕ ಕೊಡಿ: ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಮಾಹಿತಿ ನೀಡಿದ ಬಿಇಒ ಅವರಿಗೆ ಖಾರವಾಗಿ ಪ್ರಶ್ನಿಸಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು, ನಮಗೆ ನೀವು ತ್ರೈಮಾಸಿಕ ಸಭೆಯಲ್ಲಿ ಕೊಡುವ ಮೊಟ್ಟೆ ಲೆಕ್ಕ ಇತ್ಯಾದಿ ಯಾವುದು ಬೇಡ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಯಾಕೆ ಕಡಿಮೆಯಾಗುತ್ತಿದೆ. ಶಾಲೆ ಬಿಟ್ಟ ಮಕ್ಕಳ ವಿವರ ಹಾಗೂ ಖಾಸಗಿ ಶಾಲೆಗೆ ಸೇರುತ್ತಿರುವ ಮಕ್ಕಳ ವಿವರ ಕೊಡಬೇಕು. ತಾಲೂಕಿನಲ್ಲಿ ಶಿಕ್ಷಕರ ಕೊರತೆ ಇಲ್ಲವೆಂದ ಮೇಲೆ ಮಕ್ಕಳ ಸಂಖ್ಯೆ ಕಡಿಮೆಯಾಗಲು ಕಾರಣವೇನು? ಮಕ್ಕಳ ಸಂಖ್ಯೆ ಹೆಚ್ಚಿಸಲು ಶಿಕ್ಷಕರಿಗೆ ಜವಾಬ್ದಾರಿ ಕೊಡಿ. ಇದಲ್ಲದರ ಮಾಹಿತಿಯನ್ನು ಅದಷ್ಟು ಬೇಗ ಕೊಡಬೇಕು ಎಂದು ತಾಕೀತು ಮಾಡಿದರು.

ಸಭೆಯಲ್ಲಿ ತಾಪಂ ಆಡಳಿತಾಧಿಕಾರಿಯೂ ಆದ ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಅಶೋಕ್, ತಾಪಂ ಇಒ ಲೋಕೇಶ್‌ಮೂರ್ತಿ, ಸುರೇಂದ್ರ ಇತರರು ಇದ್ದರು/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net