

ಗೌರಿಬಿದನೂರು: ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿದರೆ ದೇಶದ ಪ್ರಗತಿಗೆ ಪೂರಕವಾಗಲಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ ಹೇಳಿದರು.
ನಗರದ ಉಡಮಲೋಡು ಬಳಿ ಇರುವ ಬಿಜಿಎಸ್ ಪಬ್ಲಿಕ್ ಶಾಲೆ ಮತ್ತು ಪದವಿಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾತೃ ಭೋಜನ ಸಂಭ್ರಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಆಧುನಿಕ ಜಗತ್ತು ಎಷ್ಟೇ ವೇಗವಾಗಿ ಸಾಗುತ್ತಿದ್ದರೂ ದೇಶವು ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಮಾದರಿಯಾಗಿ ಸಾಗುತ್ತಿದೆ. ತಾಯಿಯ ಕೈತುತ್ತು ಮಕ್ಕಳ ಸರ್ವಾಂಗಿಣ ಪ್ರಗತಿಯ ಸಂಕೇತವಾಗಿದೆ. ಮಾತೃ ಭೋಜನ ಸನಾತನ ಸಂಸ್ಕೃತಿಯ ವಿಶಿಷ್ಟ ಕಾರ್ಯಕ್ರಮವಾಗಿದೆ ಎಂದರು.
ಪ್ರಾಂಶುಪಾಲ ಎಂ.ವಿ. ಚಿಕ್ಕಜ್ಜಪ್ಪ ಮಾತನಾಡಿ, ಗ್ರಾಮೀಣ ಭಾಗದ ಮತ್ತು ಎಲ್ಲ ವರ್ಗದವರಿಗೆ ಉತ್ತಮ ಶಿಕ್ಷಣ ನೀಡುವುದು ಪರಮ ಪೂಜ್ಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಕನಸಾಗಿತ್ತು. ಶ್ರೀಗಳ ಕನಸನ್ನು ಪೂಜ್ಯ ಡಾ. ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ನನಸು ಮಾಡುತ್ತಿದ್ದಾರೆ. ಈ ದಿನದ ಮಾತೃಭೋಜನದ ಮಹತ್ವವನ್ನು ಪ್ರಸ್ತಾಪಿಸುತ್ತಾ, 1000 ಮಾತೆಯರು ಇಂದು 3 ಸಾವಿರ ವಿದ್ಯಾರ್ಥಿಗಳಿಗೆ ಊಟ ಬಡಿಸಿದ್ದಾರೆ. ಜಾತಿ, ಧರ್ಮಗಳ ಭೇದಗಳನ್ನು ಮೀರಿ, ಮಕ್ಕಳು ಪರಸ್ಪರ ಸ್ನೇಹಭಾವ ಮತ್ತು ಭಾವೈಕ್ಯತೆಗೆ ಪ್ರೋತ್ಸಾಹ ನೀಡುವ ಕಾರ್ಯವೇ ಇಂತಹ ಕಾರ್ಯಕ್ರಮಗಳ ಉದ್ದೇಶವಾಗಿದೆ. ಸರ್ವ ಜನಾಂಗದ ಶಾಂತಿಯ ತೋಟ ಎಂಬ ಪದದ ಅರ್ಥವನ್ನು ಇಲ್ಲಿ ಕಾಣಬಹುದಾಗಿದೆ ಎಂದು ವಿವರಿಸಿದರು.
ಮುಖ್ಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ ಮಾತನಾಡಿ, ಶಿಕ್ಷಕರೊಂದಿಗೆ ಪಾಲಕರೂ ಸ್ಫೂರ್ತಿ ನೀಡಿದಾಗ ಮಕ್ಕಳಿಗೆ ಉತ್ತಮ ಜೀವನ ರೂಪಿಸಬಹುದಾಗಿದೆ. ಪಾಲಕರು ಪೂರಕವಾಗಿ ಗಮನಿಸಿಲ್ಲ ಎಂದರೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಶ್ರೀನಿವಾಸಮೂರ್ತಿ ಮಾತನಾಡಿದರು. ಮನೆಗಳಲ್ಲಿ ವಿಶೇಷ ಭಕ್ಷ್ಯಗಳನ್ನು ತಯಾರಿಸಿಕೊಂಡು ಬಂದಿದ್ದ ತಾಯಂದಿರು ಮಕ್ಕಳ ಜತೆಗೆ ಇತರ ಮಕ್ಕಳಿಗೂ ಕೈತುತ್ತು ನೀಡಿ ಮಾತೃವಾತ್ಸಲ್ಯ ಮೆರೆದರು.
ತಾಲೂಕು ಕಸಾಪ ಅಧ್ಯಕ್ಷ ಜನಾರ್ದನಮೂರ್ತಿ, ನಗರಸಭೆ ಸದಸ್ಯೆ ಪುಣ್ಯವತಿ ಜಯಣ್ಣ, ಶ್ರೀನಿವಾಸಗೌಡ, ವೆಂಕಟರಾಮರೆಡ್ಡಿ ಮತ್ತಿತರರು ಭಾಗವಹಿಸಿದ್ದರು.
ಭಾವೈಕ್ಯತೆಯ ಸಂದೇಶ ಸಾರಿ
ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಮಾತನಾಡಿ, ಜಾತಿ ಧರ್ಮ ಮೀರಿ ಪ್ರೇರಣೆಯಾಗುವ ಕಾರ್ಯಕ್ರಮ ಇದಾಗಿದೆ. ಶಾಲೆಯ ಎಲ್ಲ ಮಕ್ಕಳಲ್ಲಿ ಸಮಾನತೆಯ ಭಾವನೆ ಮೂಡಿಸಲಿದೆ. ನಾವೆಲ್ಲರೂ ಒಂದೇ, ನಾಡಿನ ಮಕ್ಕಳು ನಮಗೆಲ್ಲರಿಗೂ ಮಾತೆ ಒಬ್ಬಳೇ. ಅದು ಭಾರತ ಮಾತೇ ಎಂಬ ಅಂಶಗಳನ್ನು ತಿಳಿಸಲು ಇಂತಹ ಒಳ್ಳೆಯ ಕಾರ್ಯಕ್ರಮಗಳು ಎಲ್ಲೆಡೆ ನಡೆಯಬೇಕು. ಮಕ್ಕಳ ಮನಸ್ಸಿಗೆ ಭಾವೈಕ್ಯತೆಯ ಸಂದೇಶ ಸಾರಬೇಕು ಎಂದು ತಿಳಿಸಿದರು.