ಆಧುನಿಕ ಜೀವನ ಶೈಲಿಗೆ ಸಂಸ್ಕೃತಿ ಮರೆ

IMG-20240527-WA0301
Published on

ಅರಸೀಕೆರೆ ಗ್ರಾಮಾಂತರ: ಆಧುನಿಕ ಜೀವನವನ್ನು ಒಪ್ಪಿಕೊಳ್ಳುವ ಭರದಲ್ಲಿ ಸಂಸ್ಕಾರ, ಸಂಸ್ಕೃತಿಗಳನ್ನು ಕಡೆಗಣಿಸಿ ಕಲ್ಪನಾ ಲೋಕದಲ್ಲಿ ಮುಳುಗಿದ್ದೇವೆ ಎಂದು ಗೋಣಿಬೀಡು ಶೀಲ ಸಂಪಾದನ ಸುಕ್ಷೇತ್ರ ಶಿವಯೋಗಾಶ್ರಮದ ಡಾ.ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.


ತಾಲೂಕಿನ ಸುಪ್ರಸಿದ್ಧ ಶ್ರೀ ಕ್ಷೇತ್ರ ಹಾರನಹಳ್ಳಿ ಕೋಡಿ ಮಠದಲ್ಲಿ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಶ್ರೀ ಶಿವಲಿಂಗ ಸ್ವಾಮೀಜಿ ಅವರ 137ನೇ ಸಂಸ್ಮರಾಣ ಆರಾಧನೆ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಬೆಳ್ಳಿ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.


ಮನುಷ್ಯ ಕೀರ್ತಿ ಸಂಪಾದಿಸಲು ತನ್ನನ್ನು ತಾನು ಅರಿಯಲು ಮುಂದಾಗಬೇಕು. ಜೀವನದ ಮೌಲ್ಯ ಅರಿವಾಗಬೇಕಾದರೆ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು. ಅಲ್ಲಿ ಅಂತ್ಯದ ದಿನಗಳನ್ನು ನೋಡುತ್ತಿರುವ ವ್ಯಕ್ತಿಗಳನ್ನು ಕಂಡಾಗ ಭೋಗದ ವಸ್ತುಗಳು ಯಾವುದು ಶಾಶ್ವತವಲ್ಲ ಎಂಬ ಅರಿವಾಗುತ್ತದೆ. ಆಧುನಿಕ ಜೀವನ ಒಪ್ಪಿಕೊಳ್ಳುವ ಭರದಲ್ಲಿ ನಮ್ಮ ಸಂಸ್ಕಾರ, ಸಂಸ್ಕೃತಿಗಳನ್ನು ಕಡೆಗಣಿಸಿ ಭ್ರಮೆಯ ಲೋಕದಲ್ಲಿ ಮುಳುಗಿದ್ದೇವೆ ಎಂದರು.


ಶ್ರೀ ಕ್ಷೇತ್ರ ಕೋಡಿ ಮಠವು ಧಾರ್ಮಿಕ ಕ್ಷೇತ್ರಕ್ಕೆ ತನ್ನದೆ ಸೇವೆ ನೀಡುತ್ತಾ ಬರುತ್ತಿದೆ. ವಿದ್ಯಾಭ್ಯಾಸ, ಅನ್ನ ದಾಸೋಹದೊಂದಿಗೆ ಸಂಸ್ಕಾರ, ಸಂಸ್ಕೃತಿಗಳನ್ನು ನೀಡುತ್ತಾ ಬಂದಿದೆ. ಶ್ರೀ ಶಿವಲಿಂಗ ಸ್ವಾಮೀಜಿ ಅವರ ಶಕ್ತಿಯು ಕ್ಷೇತ್ರದಲ್ಲಿದೆ. ಈ ಎಲ್ಲ ಬೆಳವಣಿಗೆಗಳ ಹಿಂದೆ ಪ್ರಸ್ತುತ ಪೀಠಾಧ್ಯಕ್ಷರಾದ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರ ಪ್ರಮುಖ ಪಾತ್ರವಿದೆ ಎಂದರು.


ಮಠದ ಆವರಣದಲ್ಲಿ ಶ್ರೀ ನೀಲಮಜ್ಜಯ್ಯ ಮತ್ತು ಶ್ರೀ ಶಿವಲಿಂಗಜ್ಜಯ್ಯನವರ ಗದ್ದುಗೆಗೆ ಬೆಳಗ್ಗೆಯಿಂದಲೇ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ರಾಜೋಪಚಾರ, ಹೋಮ-ಹವನ ನಡೆದವು. ಐದು ದಿನಗಳ ಕಾಲ ಕ್ಷೇತ್ರದಲ್ಲಿ ನಡೆದ ಪುರಾಣ ಪ್ರವಚನವನ್ನು ಗದಗದ ಎಂ.ಕಲ್ಲಿನಾಥ ಶಾಸ್ತ್ರಿ ನಡೆಸಿಕೊಟ್ಟರು. ವಿವಿಧ ಸಂಘಗಳು, ಮಂಡಳಿಗಳು ಸಾಮೂಹಿಕ ಭಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟವು.
ಶ್ರೀ ಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರು, ಕಡೂರು ಮೂರು ಕಳಸ ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ತೊಗರ್ಸಿ ಮಳೆ ಮಠದ ಮಹಾಂತ ದೇಶಿಕೇಂದ್ರ ಸ್ವಾಮಿಜಿ, ಚನ್ನಗಿರಿ ಹಾಲಸ್ವಾಮಿ ವಿರಕ್ತ ಮಠದ ಡಾ.ಬಸವ ಜಯಚಂದ್ರ ಸ್ವಾಮೀಜಿ, ಕೊಳಗುಂದ ಕೇದಿಗೆ ಮಠದ ಶ್ರೀ ಜಯಚಂದ್ರಶೇಖರ ಸ್ವಾಮಿಜಿ, ಬೆಂಗಳೂರು ಚಾಮುಂಡೇಶ್ವರಿ ಶಕ್ತಿ ಪೀಠದ ಶ್ರೀ ಮನೀನ್ ಗುರೂಜಿ, ಅಕ್ಕಿ ಆಲೂರು ವಿರಕ್ತ ಮಠದ ಶ್ರೀ ಶಿವಬಸವ ಸ್ವಾಮೀಜಿ, ಕೆ.ಬಿದರೆ ದೊಡ್ಡಮಠದ ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಂಡಿದ್ದರು.


ನಿತ್ಯ ದಾಸೋಹ ಸಮಿತಿ ಕಾರ್ಯದರ್ಶಿ ಸಿದ್ದೇಶ್ ನಾಗೇಂದ್ರ, ಮಾಜಿ ಶಾಸಕ ಜಿ.ಎಸ್.ಪರಮೇಶ್ವರಪ್ಪ, ಉದ್ಯಮಿ ಜೆಪಿಎನ್ ಜಯಣ್ಣ, ರೂಪಾ ರಾಜೇಂದ್ರ ದೇಸಾಯಿ, ಮುರುಗೇಂದ್ರಪ್ಪ, ಹಾರನಹಳ್ಳಿ ಗ್ರಾಪಂ ಅಧ್ಯಕ್ಷೆ ಗಂಗಮ್ಮ, ಬಿಕ್ಕೋಡು ಗ್ರಾಪಂ ಮಾಜಿ ಅಧ್ಯಕ್ಷೆ ವನಿತಾ, ಲಯನ್ಸ್ ಸಂಸ್ಥೆ ಅಧ್ಯಕ್ಷ ಲೋಕೇಶ್, ಮಹದೇವಪ್ಪ, ಅಣ್ಣಾಯ್ಕನಹಳ್ಳಿ ಶಶಿಧರ, ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net