

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 2024-25ನೇ ಸಾಲಿನ ಶಾಲಾ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘವನ್ನು ಉದ್ಘಾಟಿಸಲಾಯಿತು.
ಶನಿವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಉದ್ಘಾಟಿಸಿ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕ್ರೀಡೆಗಳು ಮಕ್ಕಳಲ್ಲಿ ಸ್ನೇಹ, ಸೌಹಾರ್ದ, ಸ್ಪರ್ಧೆಯ ಮನೋಭಾವ ಬೆಳೆಸಿ ಮನೋವಿಕಾಸಕ್ಕೆ ಸಹಕಾರಿಯಾಗಲಿವೆ. ಕ್ರೀಡೆ ಕೇವಲ ದೇಹವಲ್ಲದೆ ಮನಸ್ಸಿನ ಆರೋಗ್ಯಕ್ಕೂ ಪ್ರಮುಖವಾಗಿದೆ. ಮಿದುಳು ಮತ್ತು ದೇಹದ ಸಂಬಂಧವನ್ನು ಉತ್ತಮಪಡಿಸುತ್ತದೆ. ಮಕ್ಕಳು ಹೆಚ್ಚು ಹೆಚ್ಚು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲ ಮಹದೇವ ಪ್ರಸಾದ್ ಮಾತನಾಡಿ, ಇತ್ತೀಚಿನ ಸ್ಪರ್ಧಾಯುಗಕ್ಕೆ ಮಕ್ಕಳು ತಯಾರಾಗಲು ಹಾಗೂ ಆತ್ಮವಿಶ್ವಾಸ ಮೂಡಿಸಲು ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳೂ ಸಹಕಾರಿ. ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಶಾಲೆಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಿಕ್ಷಕರಾದ ಮಂಜುನಾಥ್, ನಂಜುಂಡಸ್ವಾಮಿ, ವಿದ್ಯಾರ್ಥಿಗಳು ಇದ್ದರು.