

ರಾವಂದೂರು: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಹಾಗೂ ಸಂಸ್ಕಾರಯುತ ಶಿಕ್ಷಣ ದೊರೆಯುತ್ತದೆ ಎಂದು ವಿಜ್ಞಾನಿ ಇಂದುಶೇಖರ್ ಹೇಳಿದರು.
ಪಿರಿಯಾಪಟ್ಟಣ ತಾಲೂಕು ಸಂಗರಶೆಟ್ಟಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳ ದುಶ್ಚಟಕ್ಕೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದ ಶಾಲೆಗಳಲ್ಲಿ ಗುಣಾತ್ಮಕ, ಸಂಸ್ಕಾರಯುತ ಶಿಕ್ಷಣ ದೊರೆಯುತ್ತಿದೆ. ಇದರಿಂದ ಭವ್ಯ ಭಾರತದ ನಿರ್ಮಾಣಕ್ಕೆ ಗ್ರಾಮೀಣ ವಿದ್ಯಾರ್ಥಿಗಳು ಮತ್ತು ಯುವಕರ ಕೊಡುಗೆ ಅಪಾರ ಎಂದು ತಿಳಿಸಿದರು.
ಆಶ್ರಯ ಸಮಿತಿಯ ಅಧ್ಯಕ್ಷ ನಿತಿನ್ ವೆಂಕಟೇಶ್ ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರವು ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಗ್ರಾಮೀಣ ವಿದ್ಯಾರ್ಥಿಗಳು ಇದನ್ನು ಬಳಸಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ್ ಮಾತನಾಡಿ, ಪಠ್ಯೇತರ ಚಟುವಟಿಕೆ ಆಯೋಜಿಸಿದಾಗ ಮಕ್ಕಳು ಸಂತಸದಿಂದ ಭಾಗವಹಿಸುವ ಜತೆಗೆ ಕಲಿಕೆಯಲ್ಲಿಯೂ ಮುಂದೆ ಬರುತ್ತಾರೆ ಎಂದು ತಿಳಿಸಿದರು.
ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕ್ಷೇತ್ರ ಸಮನ್ವಯ ಅಧಿಕಾರಿ ಶಿವರಾಜ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಸಿ.ಪ್ರಶಾಂತ್, ಪ್ರೌಢಶಾಲಾ ಮುಖ್ಯಶಿಕ್ಷಕ ನಾಗಶೆಟ್ಟಿ, ಶ್ರೀನಿಧಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಚಂದ್ರ, ಮುಖ್ಯಶಿಕ್ಷಕ ರೇವಣ್ಣ, ರಮೇಶ್, ಪುಟ್ಟರಾಜು, ಗುರು ರಾಘವೇಂದ್ರ, ಗ್ರಾಪಂ ಅಧ್ಯಕ್ಷ ಗಂಗಾಧರ್, ಸದಸ್ಯರಾದ ಸುಬ್ರಮಣ್ಯ, ಮಂಜುಳಾ ಸತೀಶ್‌ನಾಯಕ, ಮುರುಳೀಧರ್, ಬಸವರಾಜ್, ಶಶಿಧರ್ ಮತ್ತಿತರರು ಹಾಜರಿದ್ದರು .