

ಕಿಕ್ಕೇರಿ: ಯುವಜನರು ಗುರು-ಹಿರಿಯರು, ಮಾತಾಪಿತರನ್ನು ಗೌರವಿಸುವ ಸಂಸ್ಕಾರ ಬೆಳೆಸಿಕೊಳ್ಳಿ ಎಂದು ಹುಣಸೂರಿನ ದೇವರೂರಿನ ಮಾನವ ಧರ್ಮಪೀಠದ ಪೀಠಾಧಿಪತಿ ಮಾದೇಶ್ ಗುರೂಜಿ ಸಲಹೆ ನೀಡಿದರು.
ಸಮೀಪದ ಬೆಡದಹಳ್ಳಿ ಗ್ರಾಮದ ಪಂಚಭೂತೇಶ್ವರ ಕ್ಷೇತ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಮಂತ್ರಾಲಯದ ಶ್ರೀಗುರು ರಾಘವೇಂದ್ರ ಸಾರ್ವಭೌಮ ಯತಿಗಳ 335ನೇ ಆರಾಧನಾ ಮಹೋತ್ಸವದಲ್ಲಿ ಶುಭಾಶೀರ್ವಚನ ನೀಡಿದರು.
ಲೋಕಕಲ್ಯಾಣಕ್ಕೆ ಬದುಕನ್ನೇ ಮುಡಿಪಾಗಿಸಿಕೊಂಡು ಅನಾಥ, ನೊಂದವರ ಬದುಕಿಗೆ ಬೆಳಕಾದವರು ಯತಿವರ್ಯರು. ಭಗವಂತನ ಸಾಕ್ಷಾತ್ಕಾರಕ್ಕೆ ಆಡಂಬರದ ಪೂಜೆ ಬದಲು ಭಕ್ತಿಯ ಪೂಜಾರಾಧನೆ ಬೇಕಿದೆ. ಸತ್ಯ ಸಂದೇಶ ನೀಡಿದ ಗುರು ರಾಯರು ಮಂತ್ರಾಲಯದ ಬೃಂದಾವನದಲ್ಲಿ ಜೀವಂತವಾಗಿ ಐಕ್ಯರಾಗಿ ಭಕ್ತರ ಕಾಮಧೇನುವಾಗಿದ್ದಾರೆ ಎಂದರು.
ಸರಳವಾಗಿ ಎಲ್ಲರೂ ಅರಿಯುವಂತೆ ಮಂತ್ರೋಪದೇಶ ಸಾರುತ್ತ, ಮೂಲ ರಾಮನ ಪೂಜಿಸಿದ ಯತಿಗಳು ಪಂಚಮುಖಿಯಲ್ಲಿ ಶಕ್ತಿಪೀಠವಾಗಿರುವ ಪಂಚಮುಖಿ ಆಂಜನೇಯನ ಮಹಿಮೆಯನ್ನು ನಾಡಿಗೆ ಸಾರಿದರು. ಗುರುರಾಯರ ಸ್ಮರಣೆಯಿಂದ ಮಾನಸಿಕ ಕ್ಲೇಶ ದೂರವಾಗಿ ಸುಖ, ಶಾಂತಿ, ನೆಮ್ಮದಿ ಲಭಿಸಲಿದೆ ಎಂದರು.
ಪಂಚಭೂತೇಶ್ವರ ಪೀಠದ ಶ್ರೀರುದ್ರಮುನಿ ಸ್ವಾಮೀಜಿ ಮಾತನಾಡಿ, ಪರೋಪಕಾರ, ಸೇವಾ ಮನೋಭಾವ, ಜೀವನದ ಮೌಲ್ಯ ಅರಿತು ಬದುಕಲು ಮುಂದಾಗಿ. ಯುವ ಸಂಪತ್ತು ದೇಶದ ಬಲುದೊಡ್ಡ ಆಸ್ತಿಯಾಗಿದ್ದು, ಸುಸಂಸ್ಕೃತ ಬದುಕನ್ನು ಮೈಗೂಢಿಸಿಕೊಳ್ಳಿ. ಉತ್ತಮ ವಿಚಾರಧಾರೆಗಳು ಜಗತ್ತಿನ ದೀವಿಗೆಯಾಗುವಂತೆ ಕಾಪಾಡಿ ಎಂದರು.
ಗುರುರಾಯರ ಆರಾಧನಾ ಮಹೋತ್ಸವದ ಅಂಗವಾಗಿ ವಿಶೇಷ ಪೂಜೆ, ಹೋಮ ಹವನ, ಸತ್ಸಂಗ ಕಾರ್ಯಕ್ರಮ ನಡೆದವು.
ಮಳವಳ್ಳಿಯ ಬೋಸೇಗೌಡನ ದೊಡ್ಡಿಯ ಶ್ರೀಗುರು ಸಿದ್ದರಾಮೇಶ್ವರ ಪೀಠದ ಸಿದ್ಧರಾಮಶ್ರೀ, ಸಮಾಜ ಸೇವಕ ಆಲಂಬಾಡಿಕಾವಲು ಮಲ್ಲಿಕಾರ್ಜುನ, ಕಿಕ್ಕೇರಿ ಇನ್‌ಸ್ಪೆಕ್ಟರ್ ರೇವತಿ, ಕಾರ್ಯದರ್ಶಿ ಕಾಂತರಾಜು, ಸಂಚಾಲಕ ಕಾಡುಮೆಣಸ ಚಂದ್ರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಶಾಂತವ್ವ ಹಾಗೂ ಭಕ್ತರು ಹಾಜರಿದ್ದರು.