

ಸಿಂಧನೂರು: ಮಕ್ಕಳಿಗೆ ಹಾಗೂ ಯುವಕರಿಗೆ ರಾಷ್ಟ್ರಧ್ವಜದ ಬಗ್ಗೆ ಸಮಗ್ರ ತಿಳುವಳಿಕೆ ಮೂಡಿಸಿ ಅವರಲ್ಲಿ ದೇಶಾಭಿಮಾನ ಮೂಡಿಸಲು ಶಿಕ್ಷಕರು ಪ್ರೇರೇಪಿಸಬೇಕು ಎಂದು ಭಾರತ ಸೇವಾದಳ ಜಿಲ್ಲಾ ಉಪಾಧ್ಯಕ್ಷ ಜಿ.ಎಸ್. ಹಿರೇಮಠ ಹೇಳಿದರು.
ನಗರದ ಪಿಡಬ್ಲ್ಯುಡಿಕ್ಯಾಂಪ್ ಬಾಲಕರ ಸರ್ಕಾರಿ ಪ್ರೌಢಶಾಲೆ ಸಭಾಂಗಣದಲ್ಲಿ ಶುಕ್ರವಾರ ಭಾರತ ಸೇವಾದಳ ಮತ್ತು ಶಾಲಾ ಶಿಕ್ಷಣ ಇಲಾಖೆ ರಾಯಚೂರು ಆಶ್ರಯದಲ್ಲಿ ಭಾರತ್ ಸೇವಾದಳ ತರಬೇತಿ ಪಡೆದ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಇದನ್ನು ಓದಿ: ಎನ್ಸಿಸಿಯಿಂದ ಮಕ್ಕಳಲ್ಲಿ ಉದಾತ್ತ ಮೌಲ್ಯಗಳು ಹೆಚ್ಚಳ
ಪ್ರತಿ ಶಾಲೆಯಲ್ಲಿ ಸೇವಾದಳ ತರಬೇತಿ ಪಡೆದ ಒಬ್ಬ ಶಿಕ್ಷಕರು ಇರಬೇಕು. ಮಕ್ಕಳಲ್ಲಿ ಉದಾತ್ತ ಮೌಲ್ಯಗಳು ಬೆಳೆಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು ಎಂದರು.
ಶಿಕ್ಷಣ ಸಂಯೋಜಕ ಅಂಬರೀಶ ಮಾತನಾಡಿ, ಭಾರತ ಸೇವಾದಳ ತರಬೇತಿ ಪ್ರತಿಯೊಬ್ಬರಿಗೂ ಅತೀ ಅವಶ್ಯವಾಗಿದ್ದು ಈ ನಿಟ್ಟಿನಲ್ಲಿ ನೇಮಕವಾದ ಶಿಕ್ಷಕರಿಗೆ ಮುಂದಿನ ದಿನಗಳಲ್ಲಿ ರಾಷ್ಟ್ರ ಧ್ವಜ ಕಟ್ಟುವ ತರಬೇತಿ ನೀಡಬೇಕು ಎಂದರು.
ಮುಖ್ಯಶಿಕ್ಷಕ ಸಮತ ಶರ್ಮಾ ಮಾತನಾಡಿ, ಸೇವೆಗಾಗಿ ಬಾಳು ಎಂಬ ಉದ್ದೇಶ ಮನೆಯಿಂದಲೇ ಪ್ರಾರಂಭಿಸಬೇಕು. ಪ್ರತಿಯೊಬ್ಬರೂ ಸೇವಾ ಮನೋಭಾವನೆ ಮೂಡಿಸುವ ಕೆಲಸ ಮಾಡುತ್ತಿರುವ ಭಾರತ ಸೇವಾದಳ ಸಂಸ್ಥೆ ನಮ್ಮ ಭಾರತೀಯ ಹೆಮ್ಮೆಯ ಸಂಸ್ಥೆ ಎಂದರು. ಇತ್ತೀಚೆಗೆ ನಿವೃತ್ತಿ ಹೊಂದಿದ ಶಿಕ್ಷಕರಾದ ಸಿದ್ದೇಶ್ವರಿ ಮತ್ತು ವಿಜಯಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು.