ಸಿಯುಕೆಯಲ್ಲಿ ವಿಶ್ವ ಆತ್ಮಹತ್ಯೆ ನಿಯಂತ್ರಣ ದಿನಾಚರಣೆ

20230912_220710
Published on

ಕಡಗಂಚಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆಯೋಜನೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಹದಿ ಹರೆಯದವರು ಮತ್ತು ಯುವಕರಲ ಆತ್ಮಹತ್ಯೆಯು ಸಾವಿಗೆ ೨ನೇ ಅತಿ ದೊಡ್ಡ ಕಾರಣ ಎಂದು ಸಿಕಂದರಾಬಾದ್‌ನ ಸ್ವೀಕರ್ ಅಕಾಡೆಮಿ ಆಫ್ ರಿಹ್ಯಾಬಿಲಿಟೇಶನ್ ಕ್ಲಿನಿಕಲ್ ಸೈಕಾಲಜಿ ಪ್ರಾಧ್ಯಾಪಕ ಡಾ.ಸರೋಜ್ ಆರ್ಯ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಮನೋವಿಜ್ಞಾನ ವಿಭಾಗ ೧೨ರಂದು ಆಯೋಜಿಸಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಜಾಗೃತಿ ಮೂಡಿಸುವುದು, ಆತ್ಮಹತ್ಯೆ ಕಾರ್ಯಕ್ಕೆ ಪರ್ಯಾಯ ಕ್ರಮ ಉತ್ತೇಜಿಸುವ ಮೂಲಕ ಭರವಸೆ ಹುಟ್ಟುಹಾಕಬಹುದು. ಆತ್ಮಹತ್ಯಾ ಕ್ರಿಯೆ ಅಪಾಯದಲ್ಲಿರುವವರು ಮತ್ತು ಬದುಕುಳಿದವರಿಗೆ ಬೆಂಬಲ ನೀಡಲು ಬೆಳಕಾಗಬಹುದು. ಆತ್ಮಹತ್ಯಾ ಕೃತ್ಯದ ಮೂಲಕ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಕೌನ್ಸೆಲಿಂಗ್ ಮಾಡುವ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿ, ಆತ್ಮಹತ್ಯೆಗೆ ಒಳಗಾಗುವ ಯುವ ವಯಸ್ಕರ ಬಗ್ಗೆ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಜಾಗೃತಿ ಕಾರ್ಯಕ್ರಮ ಆಯೋಜಿಸುವುದು ತುಂಬಾ ಮುಖ್ಯ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು ಇಂತಹ ಘಟನೆಗಳಿಗೆ ಸಾಕ್ಷಿಯಾಗುತ್ತಿರುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಎಲ್ಲಾ ಶಿಕ್ಷಕರು ಮತ್ತು ಮಧ್ಯಸ್ಥಗಾರರ ಕರ್ತವ್ಯ. ಮಾದಕ ವ್ಯಸನ ಮತ್ತು ಮದ್ಯಪಾನದಂತಹ ಅಂಶಗಳು ಇಂತಹ ಕ್ರಮಕ್ಕೆ ಮುಂದಾಗಲು ಪ್ರೇರಣೆ ನೀಡುತ್ತಿರುವುದರಿಂದ ಅದನ್ನು ನಿಯಂತ್ರಿಸುವುದು ಅಗತ್ಯ ಎಂದರು.
ಸಿಯುಕೆಯ ಶೈಕ್ಷಣಿಕ ನಿರ್ದೇಶಕ, ಪ್ರೊ.ಬಸವರಾಜ ಡೋಣೂರ್ ಮಾತನಾಡಿ, ಜನರು ತಮ್ಮನ್ನು ತಾವು ನಿಭಾಯಿಸಲು ಅಸಮರ್ಥರಾಗಿರುವುದರಿಂದ ಅವರಲ್ಲಿ ಜಾಗೃತಿ ಮೂಡಿಸುವುದು ಮುಖ್ಯ. ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಮಾತನಾಡುವವರು ತಪ್ಪಿತಸ್ಥ ಭಾವನೆ, ಖಿನ್ನತೆಯಿಂದ ಬಳಲುತ್ತಾರೆ. ತಮ್ಮನ್ನು ತಾವು ನಿಭಾಯಿಸಲು ಕಷ್ಟಪಡುತ್ತಾರೆ. ಇಂತಹ ಸಂಕಷ್ಟದಲ್ಲಿರುವವರಿಗೆ ಇತರರ ನೆರವು ಅಗತ್ಯ ಎಂದು ಹೇಳಿದರು.
ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ರೊಮೇಟ್ ಜಾನ್ ಮಾತನಾಡಿ, ಮನೋವಿಜ್ಞಾನದ ಹಿನ್ನೆಲೆಯಿಲ್ಲದ ಜನರು ಆತ್ಮಹತ್ಯೆ ತಡೆಗಟ್ಟುವಲ್ಲಿ ಭಾಗವಹಿಸುವುದು ಮತ್ತು ಅವರಲ್ಲಿ ತಿಳಿವಳಿಕೆ ಮೂಡಿಸುವುದು ನಿಜವಾಗಿಯೂ ಪ್ರಶಂಸನೀಯ ಎಂದರು. ಸಂಯೋಜಕಿ ಡಾ.ಕೃತಿ ಶ್ರೀವಾಸ್ತವ ಪ್ರಾಸ್ತಾವಿಕ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net