ಕೈಕೊಟ್ಟ ಸಿಟಿ ಸ್ಕ್ಯಾನಿಂಗ್ ಯಂತ್ರ

03-12-rama-ct scan
Published on

* ರಾಮನಗರದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಕೆಲ ದಿನಗಳಿಂದ ಸೇವೆ ಸ್ಥಗಿತ

* ಖಾಸಗಿ ಕೇಂದ್ರಗಳತ್ತ ಮುಖ ಮಾಡಬೇಕಾದ ಅನಿವಾರ್ಯತೆ

ಗಂಗಾಧರ್ ಬೈರಾಪಟ್ಟಣ ರಾಮನಗರ

ಬಡ ರೋಗಿಗಳಿಗೆ ಕಡಿಮೆ ಬೆಲೆಗೆ ದೊರೆಯುತ್ತಿದ್ದ ಸಿಟಿ ಸ್ಕ್ಯಾನಿಂಗ್ ಸೇವೆ ಕಳೆದ ಕೆಲವು ದಿನಗಳಿಂದ ಬಂದ್ ಆಗಿದ್ದು, ಸಾರ್ವಜನಿಕರು ತೊಂದರೆ ಪಡುವಂತಾಗಿದೆ. ನಗರದ ಹೈಟೆಕ್ ಜಿಲ್ಲಾಸ್ಪತ್ರೆಯಲ್ಲಿ ಮೂರು ವರ್ಷಗಳ ಹಿಂದೆಯೇ ಸಿಎಸ್‌ಆರ್ ನಿಧಿಯಡಿ ಅಳವಡಿಸಿದ್ದ ಸ್ಕ್ಯಾನಿಂಗ್ ಯಂತ್ರ ವಾರದಿಂದ ಕೆಟ್ಟು ನಿಂತಿದೆ. ಕಡಿಮೆ ಬೆಲೆಗೆ ದೊರೆಯುತ್ತಿದ್ದ ಸ್ಕ್ಯಾನಿಂಗ್ ಗಾಗಿ ಈಗ ರೋಗಿಗಳು ಖಾಸಗಿ ಡಯಾಗ್ನಾಸ್ಟಿಕ್ ಕೇಂದ್ರಗಳನ್ನೇ ಅವಲಂಬಿಸುವಂತೆ ಆಗಿದೆ.

ಶೀಘ್ರವೇ ಸರಿಪಡಿಸಿ:

ಜಿಲ್ಲೆಯಲ್ಲಿ ನೂತನ ಜಿಲ್ಲಾಸ್ಪತ್ರೆ ನಿರ್ಮಾಣ ಆದ ನಂತರ ಇಲ್ಲಿಗೆ ಬರುವ ರೋಗಿಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. ಸಾಮಾನ್ಯವಾಗಿ ಎಕ್ಸ್‌ರೇ, ಸಾಮಾನ್ಯ ಸ್ಕ್ಯಾನಿಂಗ್ ಕಾರ್ಯವನ್ನು ಜಿಲ್ಲಾಸ್ಪತ್ರೆಯಲ್ಲಿ ಮಾಡಲಾಗುತಿತ್ತು. ಇದಕ್ಕೂ ಮೊದಲು ಸಿಟಿ ಸ್ಕ್ಯಾನಿಂಗ್ ಗಾಗಿ ಖಾಸಗಿ ಲ್ಯಾಬ್‌ಗಳ ಮೇಲೆ ಅವಲಂಬಿತವಾಗಬೇಕಿತ್ತು. ಸುಮಾರು 3-4 ಸಾವಿರ ರೂ. ತೆತ್ತು  ಡಯಾಗ್ನಸ್ಟಿಕ್ ಕೇಂದ್ರಗಳಲ್ಲಿ ಸಿಟಿ ಸ್ಕ್ಯಾನಿಂಗ್ ಮಾಡಿಸಬೇಕಿತ್ತು. ಇದನ್ನು ಅರಿತು ಖಾಸಗಿ ಕಂಪನಿ ಸಿಎಸ್‌ಆರ್ ಅನುದಾನದಡಿ ರಾಮನಗರ ಜಿಲ್ಲಾಸ್ಪತ್ರೆಗೆ ಸಿಟಿ ಸ್ಕ್ಯಾನಿಂಗ್  ಯಂತ್ರ ನೀಡಿತ್ತು. ಇದರಿಂದ ಸಾವಿರಾರು ರೋಗಿಗಳಿಗೆ ವರವಾಗಿತ್ತು. ಈಗ ಯಂತ್ರ ಕೆಟ್ಟಿರುವುದರಿಂದ ಬಡ ರೋಗಿಗಳಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

ಬೇಕಿದೆ ಮತ್ತೊಂದು ಯಂತ್ರ

ಲಭ್ಯ ಮಾಹಿತಿ ಪ್ರಕಾರ ಇಲ್ಲಿ ಇರುವ ಯಂತ್ರದ ಮೇಲೆ ಕಾರ್ಯದೊತ್ತಡ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಪ್ರತಿ ದಿನ ನಿಗದಿತ 15-20 ಮಂದಿಗೆ ಇಲ್ಲಿ ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ತುರ್ತು ಸಂದರ್ಭದಲ್ಲಿಯೂ ತಕ್ಷಣವೇ ಸ್ಪಂದಿಸಲು ಸಾಧ್ಯವಾಗದ ಕಾರಣ ಕೆಲವೊಮ್ಮೆ ರೋಗಿಗಳು ಗಂಟೆ ಗಟ್ಟಲೆ ಕಾಯುವ ಅನಿವಾರ್ಯತೆ ಇದೆ.

ಅಲ್ಲದೆ, ಇದು ಲೋವರ್ ಎಂಡ್ ಯಂತ್ರವಾಗಿದ್ದು, ಹೈಯರ್ ಎಂಡ್ ಸಿಟಿ ಸ್ಕ್ಯಾನಿಂಗ್ ಯಂತ್ರದ ಅಗತ್ಯವಿದೆ.

ಶಾಸಕರಿಗೆ ಮನವಿ

ಮಂಗಳವಾರ ಕೋಟಹಳ್ಳಿ ಸಮೀಪ ಆನೆದಾಳಿಗೆ ತುತ್ತಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಚಿಕಿತ್ಸೆಗಾಗಿ ರಾಮನಗರ ಜಿಲ್ಲಾಸ್ಪತ್ರೆಗೆ ಕರೆತಲಾಗಿತ್ತು. ಈ ವೇಳೆ ಗಾಯಾಳು ಬೇಟಿ ಮಾಡಲು ಬಂದ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಸಿಟಿ ಸ್ಕ್ಯಾನಿಂಗ್ ಯಂತ್ರ ಕೆಟ್ಟಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಕೂಡಲೇ ಇರುವ ಸ್ಕ್ಯಾನಿಂಗ್ ಯಂತ್ರ ರಿಪೇರಿ ಮಾಡಿಸುವ ಜತೆಗೆ, ಒತ್ತಡ ಹೆಚ್ಚಿರುವ ಹಿನ್ನೆಲೆಯಲ್ಲಿ ಮತ್ತೊಂದು ಸ್ಕ್ಯಾನಿಂಗ್ ಯಂತ್ರ ಅಳವಡಿಸಿಕೊಡಬೇಕು ಹಾಗೂ ಎಂಆರ್‌ಐ ಯಂತ್ರ ಅಳವಡಿಕೆಗೂ ಕ್ರಮ ಕೈಗೊಳ್ಳಬೇಕು ಎನ್ನುವ ಬೇಡಿಕೆಯನ್ನು ಶಾಸಕರ ಬಳಿ ಸಾರ್ವಜನಿಕರು ಇಟ್ಟಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕಾೃನ್‌ಯಂತ್ರ ಕೆಟ್ಟಿರುವ ಬಗ್ಗೆ ಮಾಹಿತಿ ದೊರೆತಿದೆ. ಕೂಡಲೇ ಇದನ್ನು ದುರಸ್ತಿ ಮಾಡಿಸಿ ಸೇವೆ ಪುನರಾರಂಭಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ. ಮತ್ತೊಂದು ಯಂತ್ರ ಅಳವಡಿಕೆಗೂ ಶೀಘ್ರವೇ ಕ್ರಮವಹಿಸಲಾಗುವುದು.

 ಎಚ್.ಎ.ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ

==

ಬಡವರ ಪಾಲಿಗೆ ಸರ್ಕಾರಿ ಆಸ್ಪತ್ರೆಯೇ ಸಂಜೀವಿನಿ. ಹೊರಗಡೆ ಸಿಟಿ ಸ್ಕ್ಯಾನಿಂಗ್ ಗೆ ಹೆಚ್ಚಿನ ಹಣ ನೀಡಬೇಕು. ಈಗ ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನಿಂಗ್ ಯಂತ್ರ ಕಟ್ಟಿರುವುದರಿಂದ ಬಡ ರೋಗಿಗಳಿಗೆ ತೊಂದರೆ ಆಗುತ್ತಿದೆ. ಕೂಡಲೇ ಇದನ್ನು ದುರಸ್ಥಿ ಮಾಡಿಸಬೇಕು.

 ಗೋವಿಂದರಾಜು, ಸಾಮಾಜಿಕ ಕಾರ್ಯಕರ್ತ

ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಸಿಟಿ ಸ್ಕ್ಯಾನಿಂಗ್ ಕಾರ್ಯನಿರ್ವಹಿಸಿದ್ದು, ತಾಂತ್ರಿಕ ತೊಂದರೆ ಆಗಿದೆ. ಇದನ್ನು ದುರಸ್ಥಿ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ.

 ಡಾ.ಮಂಜುನಾಥ್, ಜಿಲ್ಲಾ ಶಸ್ತ್ರ ಚಿಕಿತ್ಸಕ, ಜಿಲ್ಲಾಸ್ಪತ್ರೆ ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net