ವಿವೇಕವಂತರು, ಪ್ರಜ್ಞಾವಂತರಿಂದ ಪರಿಸರದ ಮೇಲೆ ದೌರ್ಜನ್ಯ

ವಿವೇಕವಂತರು, ಪ್ರಜ್ಞಾವಂತರಿಂದ ಪರಿಸರದ ಮೇಲೆ ದೌರ್ಜನ್ಯ
Published on

ಹಾಸನ: ಪರಿಸರ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಇಲ್ಲಿನ ಎಸ್.ಎಂ.ಕೃಷ್ಣ ನಗರದಲ್ಲಿ ಭಾನುವಾರ ಪರಿಸರಕ್ಕಾಗಿ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಎಸ್.ಎಂ.ಕೃಷ್ಣ ನಗರದ ಮುಖ್ಯ ಪ್ರವೇಶ ದ್ವಾರದಿಂದ ಪ್ರಾರಂಭವಾದ ನಡಿಗೆಯಲ್ಲಿ ಪರಿಸರಕ್ಕಾಗಿ ನಾವು ಸಂಘಟನೆ, ಹಾಸನ ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ರೋಟರಿ ಕ್ಲಬ್ ಆಫ್ ಹಾಸನ್ ಮಿಡ್ ಟೌನ್, ಸ್ಕೌಟ್ ಆ್ಯಂಡ್ ಗೈಡ್ಸ್ ಹಾಗೂ ಇತರ ಸಂಘ ಸಂಸ್ಥೆಗಳು ಭಾಗವಹಿಸಿದ್ದವು. ಬೀದಿಗಳಲ್ಲಿ ಸುತ್ತಾಡಿ ಅಲ್ಲಿನ ನಿವಾಸಿಗಳಿಗೆ ಜಾಗೃತಿ ಮೂಡಿಸಲಾಯಿತು.

ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪರಿಸರಕ್ಕಾಗಿ ನಾವು ಸಂಘಟನೆ ಅಧ್ಯಕ್ಷ ಎ.ಟಿ.ರಾಮಸ್ವಾಮಿ, ಜಾಗತಿಕ ತಾಪಮಾನ ಏರಿಕೆಯಿಂದ ಅನಾಹುತಗಳು ಸಂಭವಿಸುತ್ತಿವೆ. ಇದಕ್ಕೆ ವಿವೇಕವಂತರು, ಪ್ರಜ್ಞಾವಂತರು ಹಾಗೂ ವಿದ್ಯಾವಂತರಾದ ನಾವೇ ಕಾರಣ. ನಮ್ಮ ಮುಂದಿನ ಪೀಳಿಗೆಗೆ ಯೋಗ್ಯವಾದ ಭೂಮಿ ಬಿಟ್ಟುಕೊಡದಿದ್ದರೆ ಅವರು ನಮ್ಮನ್ನು ಕ್ಷಮಿಸುವುದಿಲ್ಲ ಎಂದರು.

ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಶರೀರ ಶಾಶ್ವತವಾದುದಲ್ಲ. ಪ್ರತಿ ದಿನ, ಪ್ರತಿ ಕ್ಷಣ ನಾವುಗಳು ಸಾವಿನ ಹತ್ತಿರ ಹೋಗುತ್ತಿರುತ್ತೇವೆ. ಶತಕೋಟಿ ಜನ್ಮದ ನಂತರ ಈ ಮನುಷ್ಯ ಜನ್ಮ ಸಿಕ್ಕಿದೆ. ಮನುಷ್ಯ ಜನ್ಮಕ್ಕೆ ಜ್ಞಾನ, ವಿವೇಕ ಎಲ್ಲವನ್ನೂ ಭಗವಂತ ನೀಡಿದ್ದಾನೆ. ಒಂದು ಗಿಡ ನೆಟ್ಟರೆ ಜೀವನ ಸಾರ್ಥಕವಾಗಲಿದ್ದು, ತಲೆಗೊಂದು ಗಿಡ ನೆಡಬೇಕೆಂದು ಭೈರವೈಕ್ಯ ಶ್ರೀ ಬಾಲಗಂಗಾದರನಾಥ ಸ್ವಾಮೀಜಿ ಸಂಕಲ್ಪ ಮಾಡುವ ಮೂಲಕ ಪರಿಸರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಪುಷ್ಪಗಿರಿ ಮಠದ ಮಠಾಧೀಶರಾದ ಸೋಮಶೇಖರ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು. ಪರಿಸರಕ್ಕಾಗಿ ನಾವು ಸಂಘಟನೆ ಜಿಲ್ಲಾಧ್ಯಕ್ಷ ಡಾ.ಬಿ.ಈ.ಯೋಗೇಂದ್ರ, ಪ್ರಧಾನ ಕಾರ್ಯದರ್ಶಿ ಆರ್.ಜೆ. ಗಿರೀಶ್, ಹಸಿರುಭೂಮಿ ಪ್ರತಿಷ್ಠಾನದ ಅಧ್ಯಕ್ಷ ವೆಂಕಟೇಗೌಡ, ಬಿ.ಕೆ.ಮಂಜುನಾಥ್, ಹಾಸನ ಲಯನ್ಸ್ ಕ್ಲಬ್ ಕಾರ್ಯದರ್ಶಿ ಸಿ. ಶಿವಸ್ವಾಮಿ, ಜರ್ಸಿ ಎಚ್.ಕೆ. ನಾಗೇಶ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಈ. ಕೃಷ್ಣೇಗೌಡ, ಬೆಂಗಳೂರಿನ ಜಯರಾಂ, ಸ್ಕೌಟ್ ಆಂಡ್ ಗೈಡ್ಸ್ ಹಿರಿಯರಾದ ಕಾಂಚನ ಮಾಲಾ, ಗಿರೀಶ್, ಯೋಗೇಂದ್ರ, ಮಂಜುನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net