ದೇಗುಲಗಳಿಗೆ ಹರಿದುಬಂದ ಭಕ್ತರ ದಂಡು

oppo_2
oppo_2
Published on

ಹನೂರು: ಪಟ್ಟಣದ ಶ್ರೀಬೆಟ್ಟಳ್ಳಿ ಮಾರಮ್ಮ ದೇಗುಲ ಸೇರಿದಂತೆ ತಾಲೂಕಿನ ವಿವಿಧ ದೇಗುಲಗಳಿಗೆ ಭಾನುವಾರ ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ದಂಪತಿಗಳು ಸೇರಿದಂತೆ ಭಕ್ತರ ದಂಡೇ ಹರಿದು ಬಂತು.

ಹನೂರಿನ ಶ್ರೀ ಬೆಟ್ಟಳ್ಳಿ ಮಾರಮ್ಮ, ಆರ್.ಎಸ್.ದೊಡ್ಡಿಯ ಮಹದೇಶ್ವರಸ್ವಾಮಿ, ದಿಂಬಾಳೇಶ್ವರ, ಮಂಗಲದ ಕೋಣನ ಮಾರಮ್ಮ, ವೈಶಂಪಾಳ್ಯದ ಶಿವಲಂಕಾರೇಶ್ವರ, ಸಿಂಗಾನಲ್ಲೂರು ಕಟ್ಟೆಬಸವೇಶ್ವರ, ಲೊಕ್ಕನಹಳ್ಳಿಯ ಸಂಪಿಗೇಶ್ವರ, ಬಂಡಳ್ಳಿಯ ಈಶ್ವರ ದೇಗುಲ, ಕಾಮಗೆರೆಯ ಮಹದೇಶ್ವರ, ದೊಡ್ಡಿಂದುವಾಡಿಯ ಗುಡ್ಡದಮಾರಮ್ಮ ದೇಗುಲ ಸೇರಿದಂತೆ ತಾಲೂಕಿನ ಇನ್ನಿತರ ದೇಗುಲಗಳಲ್ಲಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಸಾಮಾನ್ಯವಾಗಿ ಎಲ್ಲ ದೇಗುಲಗಳಲ್ಲಿ ತಳೀರು, ತೋರಣ ಹಾಗೂ ವಿವಿಧ ಪುಷ್ಪಗಳಿಂದ ಸಿಂಗಾರ ಮಾಡಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪತಿಯೊಂದಿಗೆ ಆಗಮಿಸಿ ಪೂಜೆ ಸಲ್ಲಿಸಿದರು. ಇದರಿಂದ ದೇಗುಲಗಳು ಬೆಳಗ್ಗೆಯಿಂದ ಸಂಜೆಯ ತನಕ ಭಕ್ತಗಣದಿಂದ ತುಂಬಿ ತುಳುಕುತ್ತಿದ್ದವು. ಕೆಲವು ದೇಗುಲಗಳಲ್ಲಿ ಪ್ರಸಾದ, ಅನ್ನ ಸಂತರ್ಪಣೆ ವಿನಿಯೋಗಿಸಲಾಯಿತು. ಆಗಮಿಸಿದ ಭಕ್ತರು ಹಣ್ಣು, ಕಾಯಿ ನೀಡಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.

ಶ್ರೀಬೆಟ್ಟಳ್ಳಿ ಮಾರಮ್ಮ: ಪಟ್ಟಣದ ಶ್ರೀಬೆಟ್ಟಳ್ಳಿ ಮಾರಮ್ಮನ ದೇಗುಲವನ್ನು ವಿವಿಧ ಪುಷ್ಪಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು. ಬೆಳಗ್ಗೆ 5.30ರಲ್ಲಿ ದೇವಿಗೆ ಪನ್ನೀರು, ಎಳನೀರು, ಅರಿಶಿಣ, ಕುಂಕುಮ, ಜೇನುತುಪ್ಪ, ಹಾಲು, ಮೊಸರು ಹಾಗೂ ಗಂಧದ ಅಭಿಷೇಕವನ್ನು ನೆರವೇರಿಸಲಾಯಿತು. ಬಳಿಕ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ವಿಶೇಷ ದೀಪ, ಧೂಪದಾರತಿ ನೆರವೇರಿಸಿ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಬೆಳಗಿಸಲಾಯಿತು. ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಪಟ್ಟಣ ಸೇರಿದಂತೆ ಮಂಗಲ, ಭೈರನತ್ತ, ಉದ್ದನೂರು, ಬೆಳತ್ತೂರು, ಅಜ್ಜೀಪುರ, ಮಾಲಾಪುರ, ಚಿಂಚಳ್ಳಿ, ಮಣಗಳ್ಳಿ, ಬಂಡಳ್ಳಿ, ಆರ್.ಎಸ್.ದೊಡ್ಡಿ ಹಾಗೂ ಇನ್ನಿತರ ಗ್ರಾಮಗಳಿಂದ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ತೆರಳಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ದೇಗುಲ ಮುಂಭಾಗ ಉಪ್ಪು ಸುರಿದು ನಮಿಸಿದರು. ಕೆಲ ಭಕ್ತರು ಬೂದು ಕುಂಬಳಕಾಯಿ ಹಾಗೂ ನಿಂಬೆಹಣ್ಣಿನ ಆರತಿ ಸೇವೆ ನೆರವೇರಿಸಿದರು. ಅರ್ಚಕರಾದ ರಾಜೋಜಿರಾವ್ ಸಿಂಧ್ಯೆ, ಅರಣ್‌ರಾವ್ ಸಿಂಧ್ಯೆ, ಜಯಂತ್‌ರಾವ್ ಸಿಂಧ್ಯೆ ಪೂಜಾ ಕೈಂಕರ್ಯ ನೆರವೇರಿಸಿದರು.

ದಿಂಬಾದಳೇಶ್ವರ ದೇಗುಲ: ಆರ್.ಎಸ್.ದೊಡ್ಡಿ ಬಳಿಯ ದಿಂಬಾದಳೇಶ್ವರ ದೇಗುಲದಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಬೆಳಗಿನ ಜಾವ ಸ್ವಾಮಿಗೆ ಪಂಚಾಮೃತ ಅಭಿಷೇಕ ನೆರವೇರಿಸಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ದಾನಿಗಳಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಆಗಮಿಸಿದ ಭಕ್ತರು ಹಣ್ಣು, ಕಾಯಿ ನೀಡಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net