ಗಗನಚುಕ್ಕಿ ಜಲಪಾತದಲ್ಲಿ ಪ್ರವಾಸಿಗರ ದಂಡು

18 mlv news file 1
Published on

ಮಳವಳ್ಳಿ: ಕಾವೇರಿ ಜಲಾನಯನ ಪ್ರದೇಶದಲ್ಲಿ ವರ್ಷಧಾರೆ ಅಬ್ಬರದಿಂದ ಕಪಿಲಾ-ಕಾವೇರಿ ನದಿಗಳಲ್ಲಿ ಹರಿವು ಹೆಚ್ಚಾದ ಕಾರಣ ಇದುವರೆಗೂ ಭಣಗುಡುತ್ತಿದ್ದ ಶಿವನಸಮುದ್ರ ಬಳಿಯ ಗಗನಚುಕ್ಕಿ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರು ದಂಡು ಆಗಮಿಸಿ ಅದರ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.


ಕಳೆದ ಕೆಲವು ದಿನಗಳಿಂದ ಕೇರಳ ಮತ್ತು ಕೊಡಗಿನಲ್ಲಿ ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳು ಭರ್ತಿಯಾಗುವ ಹಂತ ತಲುಪಿವೆ. ಎಚ್.ಡಿ.ಕೋಟೆ ಹಾಗೂ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಹರಿದು ಬರುವ ಕಬಿನಿ, ಕಾವೇರಿ ನದಿ ನೀರು ತಿ.ನರಸೀಪುರದಲ್ಲಿ ಸಂಗಮವಾಗುತ್ತದೆ. ಪ್ರಸ್ತುತ ಕಬಿನಿ ಅಣೆಕಟ್ಟೆಯಿಂದ ನೀರು ಬಿಟ್ಟಿರುವುದರಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ತಾಲೂಕಿನ ಗಡಿ ಭಾಗದಲ್ಲಿರುವ ಗಗನಚುಕ್ಕಿ ಜಲಪಾತದಲ್ಲಿ ನೂರಾರು ಅಡಿಗಳ ಎತ್ತರದಿಂದ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದೆ.


ಇಲ್ಲಿನ ಪ್ರಕೃತಿಯ ರಮಣೀಯ ಸೊಬಗನ್ನು ಕಣ್ತುಂಬಿಕೊಳ್ಳಲು ನಗರ ಪ್ರದೇಶಗಳಿಂದ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಅದರಲ್ಲೂ ವೀಕೆಂಡ್ ರಜಾದಿನವನ್ನು ಸಂಭ್ರಮಿಸಲು ಬೆಂಗಳೂರು, ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ತಂಡೋಪತಂಡವಾಗಿ ಕಾರು, ಬೈಕ್‌ಗಳಲ್ಲಿ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದ್ದು, ಯುವಕ, ಯುವತಿಯರು ಮೊಬೈಲ್‌ಗಳಲ್ಲಿ ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿರುವುದು ಕಂಡುಬಂದಿತು.


ಜಲಪಾತದ ಬಳಿ ಸಣ್ಣ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರ: ಪ್ರತಿ ವರ್ಷ ಈ ಸಮಯದಲ್ಲಿ ಜಲಪಾತದ ವೈಭವ ವೀಕ್ಷಣೆಗಾಗಿ ಜಿಟಿ ಜಿಟಿ ಮಳೆಯ ನಡುವೆಯೂ ಸಾವಿರಾರು ಸಂಖ್ಯೆಯಲ್ಲಿ ವಿವಿಧ ಭಾಗಗಳಿಂದ ಬರುತಿದ್ದ ಪ್ರವಾಸಿಗರಿಗೆ ಸ್ಥಳೀಯ ಸಣ್ಣ ಪುಟ್ಟ ವ್ಯಾಪಾರಿಗಳು ಚುರುಮುರಿ, ಸೌತೇಕಾಯಿ ಮಾರಾಟ ಮಾಡುವ ಸಣ್ಣ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net