ಶಕ್ತಿದೇವತೆ ದರ್ಶನಕ್ಕೆ ಶಕ್ತಿ ಫಲಾನುಭವಿಗಳ ದಂಡು !

Crowd of Shakti beneficiaries to see Shaktidevata!
ಉಚಿತ ಬಸ್ ಪ್ರಯಾಣ ಹಾಗೂ ವೀಕೆಂಡ್ ಹಿನ್ನೆಲೆಯಲ್ಲಿ ಬಾದಾಮಿ ತಾಲೂಕಿನ ಶಕ್ತಿ ಪೀಠಗಳಲ್ಲಿ ಒಂದಾದ ಬನಶಂಕರಿ ದೇವಸ್ಥಾನದ ಆವರಣ ಭಾನುವಾರ ಮಹಿಳೆಯರಿಂದ ತುಂಬಿ ತುಳುಕುತ್ತಿತ್ತು.
Published on

ಬಾಗಲಕೋಟೆ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಈಗಾಗಲೇ ಶಕ್ತಿ ಯೋಜನೆಯನ್ನು ನಾರಿಯರು ಶಕ್ತಿ ಮೀರಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರ ಪರಿಣಾಮ ರಜೆ ದಿನಗಳಲ್ಲಿ ಪ್ರವಾಸಿ ತಾಣಗಳು ಮಹಿಳೆಯರಿಂದ ತುಂಬಿ ತುಳಕುತ್ತಿವೆ.

ಫ್ರೀ ಬಸ್ ಹಾಗೂ ವೀಕೆಂಡ್ ಹಿನ್ನೆಲೆಯಲ್ಲಿ ಶಕ್ತಿ ಪೀಠಗಳಲ್ಲಿ ಒಂದಾಗಿರುವ ಬಾದಾಮಿಯ ಬನಶಂಕರಿ ದೇವಸ್ಥಾನಕ್ಕೆ ಭಾನುವಾರ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ದಂಡು ದಂಡಾಗಿ ಭೇಟಿ ನೀಡಿ ದರ್ಶನ ಪಡೆದುಕೊಂಡರು. ಬೆಳಗ್ಗೆಯಿಂದಲೇ ದೇಗುಲ ಸಂಪೂರ್ಣ ಮಹಿಳಾಮಯ ಆಗಿತ್ತು.

ಜಿಲ್ಲೆ ಮಾತ್ರವಲ್ಲದೆ, ವಿಜಯಪುರ, ಧಾರವಾಡ, ಬೆಳಗಾವಿ, ಕೊಪ್ಪಳ, ಗದಗ, ಕಲಬುರಗಿ, ರಾಯಚೂರು ಸೇರಿ ರಾಜ್ಯದ ಮೂಲೆ ಮೂಲೆಗಳಿಂದ ಮಹಿಳೆಯರು ಬನಶಂಕರಿ ಹಾಗೂ ಪ್ರವಾಸಿ ತಾಣಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಮಹಾಕೂಟ ಹೀಗೆ ವಿವಿಧೆಡೆ ಪ್ರವಾಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇದರಿಂದ ಬಾದಾಮಿಗೆ ಬರುತ್ತಿದ್ದ ಎಲ್ಲ ಬಸ್ ಗಳು ಹೌಸ್‌ಫುಲ್ ಆಗಿ ಬರುತ್ತಿದ್ದವು.

ಬನಶಂಕರಿ ದೇವಸ್ಥಾನಕ್ಕೆ ಸಾಮನ್ಯವಾಗಿ ಪ್ರತಿ ದಿನ ಎರಡರಿಂದ ಎರಡೂವರೆ ಸಾವಿರ ಭಕ್ತರು ಬರುತ್ತಾರೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ಭಕ್ತರ ಸಂಖ್ಯೆ ಎಂಟತ್ತು ಸಾವಿರ ಆಗುತ್ತಿದೆ.

ಇದರಲ್ಲಿ ಶೇ.75 ರಿಂದ 80 ರಷ್ಟು ಮಹಿಳಾ ಭಕ್ತರು ಎನ್ನುವುದು ಗಮನಾರ್ಹ. ಈ ಭಾನುವಾರ ಸಹ ದೇಗುಲಕ್ಕೆ ಎಂಟತ್ತು ಸಾವಿರ ಭಕ್ತರು ಭೇಟಿ ನೀಡಿದ್ದರು. ದೇವಿ ದರ್ಶನ ಹಾಗೂ ಉಚಿತ ಪ್ರಸಾದಕ್ಕೆ ಹೆಚ್ಚಿನ ಭಕ್ತರು ದಂಡು ದಂಡಾಗಿ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಉಚಿತ ದಾಸೋಹಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ದೇವಸ್ಥಾನದ ಟ್ರಸ್ಟ್ ನವರು ಸಹ ಇದೀಗ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ಎಂಟತ್ತು ಸಾವಿರ ಜನರಿಗೆ ಪ್ರಸಾದ ವ್ಯವಸ್ಥೆ ಮಾಡುತ್ತಿದ್ದಾರೆ.

ಈ ಮೊದಲೆಲ್ಲ ದೇಗುಲ ಹಾಗೂ ಪ್ರವಾಸಿ ತಾಣಗಳಿಗೆ ತೆರಳಬೇಕಿದ್ದರೆ ಮಕ್ಕಳು ಇಲ್ಲವೆ ಗಂಡನ ಕಡೆಗೆ ದುಡ್ಡು ಪಡೆದುಕೊಂಡು ಬರಬೇಕಿತ್ತು. ಈಗ ಆಧಾರ್ ಕಾರ್ಡ್ ಇದ್ದರೆ ಸಾಕು, ರಾಜ್ಯದ ಯಾವುದೇ ದೇವಸ್ಥಾನ ಹಾಗೂ ಪ್ರವಾಸಿ ತಾಣಗಳಿಗೆ ಹೋಗಿ ಬರಬಹುದು. ಇದು ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ಹೆಚ್ಚು ಅನುಕೂಲ ಆಗಿದೆ. ಇದೊಂದು ಒಳ್ಳೆಯ ಯೋಜನೆ ಎಂದು ಬನಶಂಕರಿ ದೇವಸ್ಥಾನಕ್ಕೆ ಆಗಮಿಸಿದ್ದ ವೃತ್ತಿಯಲ್ಲಿ ವಕೀಲೆಯೂ ಆಗಿರುವ ಬನಹಟ್ಟಿಯ ವಿಜಯಲಕ್ಷ್ಮೀ ಕೊಲ್ಲಾಪುರ ಸಂತಸದಿಂದ ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಅವರ ಸಹೋದರಿ ದಾನಮ್ಮ ಮಾತ್ರ, ಯೋಜನೆ ಒಳ್ಳೆಯದು ಇದೆ. ಆದರೆ, ಬಸ್‌ನಲ್ಲಿ ತುಂಬ ಗದ್ದಲವಿದ್ದು, ಬಸ್ ಸಂಖ್ಯೆ ಹೆಚ್ಚಿಸಬೇಕು ಎಂದು ಹೇಳಿದರು.

ವಾಪಸ್ ಹೋಗಲು ಇನ್ನಿಲ್ಲದ ಪರದಾಟ: ಬಹಳಷ್ಟು ಮಹಿಳೆಯರು ಬೆಳಗ್ಗೆ ಬನಶಂಕರಿ ದೇವಿ ದರ್ಶನ ಪಡೆದು, ಮಧ್ಯಾಹ್ನದ ವೇಳೆಗೆ ಸುತ್ತಮುತ್ತಲಿನ ಪ್ರವಾಸಿ ತಾಣ ನೋಡಿಕೊಂಡು ಸಂಜೆ ಊರಿಗೆ ವಾಪಸ್ ತೆರಳುವಾಗ ಬಾದಾಮಿ ಬಸ್ ನಿಲ್ದಾಣ ಸಂಪೂರ್ಣ ಮಹಿಳೆಯರಿಂದ ತುಂಬಿತ್ತು. ಯಾವುದೇ ಮಾರ್ಗಕ್ಕೆ ಸಂಚರಿಸುವ ಬಸ್ ಬಂದರೂ ಅದಕ್ಕೆ ಸಾಮರ್ಥ್ಯ ಮೀರಿ ಪ್ರಯಾಣಿಕರು ಹತ್ತುತ್ತಿದ್ದರು. ಅನೇಕರಿಗೆ ಬಸ್‌ನಲ್ಲಿ ನಿಲ್ಲಲು ಜಾಗ ಕೂಡ ಇರಲಿಲ್ಲ. ಬೇರೆ ಬೇರೆ ಜಿಲ್ಲೆಗಳಿಗೆ ಹೋಗುವ ಪ್ರಯಾಣಿಕರು ಇನ್ನಿಲ್ಲದ ತೊಂದರೆ ಅನುಭವಿಸಿದರು. ಚಿಕ್ಕ ಮಕ್ಕಳು, ವೃದ್ಧರು ಬಸ್‌ನಲ್ಲಿ ಕೂಡಲು ಜಾಗ ಸಿಗದೆ ತೀವ್ರ ಪರದಾಡುವಂತಾಗಿತ್ತು. ಧಾರವಾಡದಿಂದ ಬನಶಂಕರಿ ದೇವಸ್ಥಾನಕ್ಕೆ ಆಗಮಿಸಿದ್ದ 18 ಜನ ಮಹಿಳೆಯರಿಗೆ ಬಸ್‌ನಲ್ಲಿ ಜಾಗ ಇಲ್ಲದೆ ನಿಲ್ದಾಣದಲ್ಲಿ ಬೇಸರದಿಂದ ನಿಂತಿದ್ದರು. ಉಚಿತ ಬಸ್ ಪ್ರಯಾಣದಿಂದ ನಮಗೆಲ್ಲ ಅನುಕೂಲವಾಗಿದೆ. ಇವತ್ತು ಭಾನುವಾರ ಎಂದು ಬಾದಾಮಿ ತಾಲೂಕಿನ ಪ್ರವಾಸಿ ತಾಣ, ದೇಗುಲ ನೋಡಲು ಬಂದಿದ್ದೇವು. ಈಗ ಊರಿಗೆ ವಾಪಸ್ ಹೋಗಲು ಬಸ್ ಸಮಸ್ಯೆ ಆಗಿದೆ. ಸರ್ಕಾರ ಬಸ್‌ಗಳ ಸಂಖ್ಯೆ ಹೆಚ್ಚು ಮಾಡಿದರೆ ಇಷ್ಟು ಸಮಸ್ಯೆ ಆಗಲ್ಲ. ಈ ಬಗ್ಗೆ ಗಮನ ಹರಿಸಬೇಕು ಎಂದು ಪವಿತ್ರಾ ಜಾಧವ ಹೇಳಿಕೊಂಡರು.
ಊರಿಗೆ ಹೋಗದೆ ವಾಪಸ್ ಮನೆಗೆ ಹೋದ ವ್ಯಕ್ತಿ: ಬಾದಾಮಿ ಬಸ್ ನಿಲ್ದಾಣದಲ್ಲಿ ತಂಡೋಪತಂಡವಾಗಿ ನಿಂತಿದ್ದ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಬಸ್ ಬರುತ್ತಿದ್ದಂತೆ ಅವುಗಳಿಗೆ ಮುಗಿಬೀಳುತ್ತಿದ್ದ ದೃಶ್ಯ ಕಂಡು ಇಳಕಲ್ಲ ನಗರಕ್ಕೆ ಹೋಗಲು ನಿಲ್ದಾಣಕ್ಕೆ ಬಂದಿದ್ದ ಎಸ್.ಬಿ.ಸಂಗಮ ಎನ್ನುವವರು ಇದರ ಗೊಡವೆಯೇ ಬೇಡ ಎಂದು ವಾಪಸ್ ಮನೆಗೆ ತೆರಳಿದರು. ಸರ್ಕಾರ ಈ ರೀತಿ ಎಲ್ಲ ಮಹಿಳೆಯರಿಗೂ ಉಚಿತ ಮಾಡಿದ್ದು ಸರಿಯಲ್ಲ. ಇದು ಮತ ರಾಜಕಾರಣ. ಇದನ್ನು ಬಿಟ್ಟು 50 ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಲಿ. ಇದೀಗ ಬಸ್ ಬಹಳ ಗದ್ದಲ ಇರುತ್ತವೆ ಎಂದು ಕೆಲವರು ಬರಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರ ಹೆಚ್ಚಿನ ಬಸ್ ವ್ಯವಸ್ಥೆ ಮಾಡಿದರೆ ಮತ್ತಷ್ಟು ಮಹಿಳೆಯರು ಉಚಿತ ಪ್ರಯಾಣಕ್ಕೆ ಮುಂದಾಗುತ್ತಾರೆ. ಅದು ಪರ್ಯಾಯ ಆಗಲ್ಲ. ಬದಲಿಗೆ ಎಲ್ಲರಿಗೂ ಉಚಿತ ಎನ್ನುವುದನ್ನು ಬಿಟ್ಟು ಕೆಲ ನಿರ್ಬಂಧಗಳನ್ನು ಹಾಕಬೇಕು ಎಂದು ಸಂಗಮ ಅವರು ಸರ್ಕಾರಕ್ಕೆ ಮನವಿ ಮಾಡಿದರು.

ಸಿದ್ದರಾಮಯ್ಯ ಫ್ರೀ ಬಸ್ ಮಾಡಿದ್ದಕ್ಕೆ ನಾವು ಗುಡಿಗೆ ಬಂದೇವಿ: ಇನ್ನು ಕುಟುಂಬ ಸದಸ್ಯರ ಜತೆ ಬನಶಂಕರಿಗೆ ಬಂದಿದ್ದ ವಿಜಯಪುರ ಜಿಲ್ಲೆ ಮನಗೂಳಿ ಗ್ರಾಮದ ಅಂದಾಜು 85 ವಯಸ್ಸಿನ ಅಜ್ಜಿಯೊಬ್ಬರಂತೂ ಬನಶಂಕರಿ ದೇವಿ ದರ್ಶನ ಆಗಿದ್ದಕ್ಕೆ ತುಂಬ ಸಂತಸಗೊಂಡಿದ್ದರು. ಇದೆಲ್ಲ ಸಿದ್ದರಾಮಯ್ಯ ಫ್ರೀ ಬಸ್ ಮಾಡಿದ್ದಕ್ಕೆ ನಾವೆಲ್ಲ ಕುಟುಂಬ ಸಮೇತರಾಗಿ ಬರಲು ಕಾರಣವಾಯಿತು. ನಮ್ಮ ಕಡೆಗೆ ಆಧಾರ್ ಕಾರ್ಡ್ ಇದ್ದರೆ ಸಾಕು ನೋಡಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net