

ಬೆಳಗಾವಿ: ಬೈಲಹೊಂಗಲ ತಾಲೂಕಿನ ಗದ್ದಿಕರವಿನಕೊಪ್ಪ ಗ್ರಾಮದ ಬಳಿ ದುಷ್ಕರ್ಮಿಗಳು ವಾಹನ ಅಡ್ಡಗಟ್ಟಿ ಪಿಸ್ತೂಲ್-ಚಾಕು ತೋರಿಸಿ 4.97 ಕೋಟಿ ರೂ. ದರೋಡೆ ಮಾಡಿಕೊಂಡು ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಲಕ್ಷ್ಮೀ ಗೋಲ್ಡ್ ಅಂಗಡಿ ವ್ಯಾಪಾರಿ ವಿಕಾಸ ವಿಲಾಸ ಕದಂ ಎಂಬುವವರ ಹಣ ಕಳೆದುಕೊಂಡಿರುವ ವ್ಯಕ್ತಿ. ಏ.8ರಂದು ಬಂಗಾರದ ಅಂಗಡಿಯಲ್ಲಿ ವ್ಯವಹಾರ ಮಾಡಿದ್ದ 4,97,30,000 ರೂ. ಹಣವನ್ನು ಕೊಲ್ಲಾಪುರದಿಂದ ಉಡುಪಿಗೆ ತೆಗೆದುಕೊಂಡು ಹೂಗುವ ಸಲುವಾಗಿ ರಟ್ಟಿನ ಬಾಕ್ಸ್ ನಲ್ಲಿ 27,30,000 ಮತ್ತು 5 ಗೋಣಿ ಚೀಲದಲ್ಲಿ 4,70,00,000 ಹಾಕಿ ಪ್ಯಾಕ್ ಮಾಡಿಕೊಂಡು ಬೊಲೆರೋ ಪಿಕಪ್ ಗೂಡ್ಸ್ ವಾಹನದಲ್ಲಿ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯ ಬೆಳಗಾವಿ ಮಾರ್ಗವಾಗಿ ಹಿರೇಬಾಗೇವಾಡಿ ಬಂದಿದ್ದಾರೆ.
ಅಲ್ಲಿಂದ ಹೆದ್ದಾರಿ ಬಿಟ್ಟು ಬೈಲಹೊಂಗಲ ರಸ್ತೆ ಮೂಲಕ ಹೋಗುತ್ತಿರುವ ಸಂದರ್ಭದಲ್ಲಿ ಹಿರೇಬಾಗೇವಾಡಿಯ ಹಳ್ಳಿ ಮನೆ ದಾಬಾ ಬಳಿ ಎರ್ಟಿಗಾ ಕಾರಿನಲ್ಲಿದ್ದ ಐವರು ದರೋಡೆಕೋರರು ವಾಹನ ನಿಲ್ಲಿಸುವಂತೆ ಕೇಳಿದ್ದಾರೆ. ಆದರೆ, ಹಣವಿದ್ದ ವಾಹನ ಚಾಲಕ ತಪ್ಪಿಸಿಕೊಂಡು ಗದ್ದಿಕರವಿನಕೊಪ್ಪ- ಎಂ.ಕೆ.ಹುಬ್ಬಳ್ಳಿ ರಸ್ತೆ ಮೂಲಕ ಹೋಗುತ್ತಿರುವ ಸಂದರ್ಭದಲ್ಲಿ ಬೆನ್ನತ್ತಿ ಬಂದ ದರೋಡೆಕೋರರು ವಾಹನ ಅಡ್ಡಗಟ್ಟಿ ನಿಲ್ಲಿಸಿದ್ದಾರೆ.
ಬಳಿಕ ಬೊಲೆರೋ ವಾಹನದಲ್ಲಿದ್ದ ಚಾಲಕ ಸಚಿನ ಭಾನುದಾಸ ಐಹೊಳೆ, ಮಹಾದೇವ ರಾಮಚಂದ್ರ ಬನಸೋಡೆ ಅವರನ್ನು ಹೊಡೆದು ಪಿಸ್ತೂಲ್-ಚಾಕು ತೋರಿಸಿ 4.97 ಕೋಟಿ ರೂ. ದರೋಡೆ ಮಾಡಿಕೊಂಡು ಹೋಗಿದ್ದಾರೆ. ಈ ಕುರಿತು ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಬೈಲಹೊಂಗಲ ಠಾಣೆ ಪಿಐ ಯು.ಎಚ್.ಸಾತೇನಹಳ್ಳಿ ತಿಳಿಸಿದ್ದಾರೆ.