ಸರ್ಕಾರಕ್ಕೆ ಲೇಡಿ ಟೋಪಿ!; ಆರ್​ಟಿಒ ಲಾಗಿನ್ ಐಡಿ ಬಳಸಿ ಕೋಟಿ ಕೋಟಿ ಡೀಲ್

Front 1
Published on

| ಕೀರ್ತಿನಾರಾಯಣ ಸಿ. ಬೆಂಗಳೂರು

ಸರ್ಕಾರಿ ಕಚೇರಿಯ ಲಾಗಿನ್ ಐಡಿ ನಕಲು ಮಾಡಿದ ಚಾಲಾಕಿ ಯೊಬ್ಬಳು ಬರೋಬ್ಬರಿ 2 ವರ್ಷ 4 ತಿಂಗಳು ಸರ್ಕಾರಿ ಅಧಿಕಾರಿಗಳ ಹೆಸರಲ್ಲೇ ಸಾರಿಗೆ ಇಲಾಖೆಯ ವ್ಯಾವಹಾರಿಕ ದಾಖಲಾತಿಗಳನ್ನು ಅಕ್ರಮವಾಗಿ ತಯಾರಿಸಿಕೊಟ್ಟಿರುವ ಆಘಾತಕಾರಿ ಸಂಗತಿ ಬಯಲಾಗಿದೆ. ಅಧಿಕಾರಿಗಳಿಗೆ ‘ಟೋಪಿ’ ಹಾಕುವ ಜತೆಯಲ್ಲೇ ಈಕೆ ಸರ್ಕಾರದ ಖಜಾನೆಗೆ ಸೇರಬೇಕಾದ ಕೋಟ್ಯಂತರ ರೂ. ನುಂಗಿದ್ದಾಳೆ. ಎಲೆಕ್ಟ್ರಾನಿಕ್ಸ್ ಸಿಟಿ ಆರ್​ಟಿಒ ಕಚೇರಿಯಲ್ಲಿ ತಾಂತ್ರಿಕ ಸಹಾಯಕ (ಗುತ್ತಿಗೆ) ಸಿಬ್ಬಂದಿಯಾಗಿದ್ದ ಸಿಂಧೂರ ಲಕ್ಷಿ್ಮೕ ಈ ವಂಚನೆ ಜಾಲದ ಕಿಂಗ್​ಪಿನ್. ಸಾರಿಗೆ ಇಲಾಖೆ ಇತಿಹಾಸದಲ್ಲೇ ಮೊದಲ ಬಾರಿಗೆ ಇಂಥದ್ದೊಂದು ಬೃಹತ್ ವಂಚನೆ ಪ್ರಕರಣ ವರದಿಯಾಗಿದೆ. ಈ ಪ್ರಕರಣದಿಂದ ಸರ್ಕಾರಿ ಕಚೇರಿಗಳಲ್ಲಿ ಅತಿಸೂಕ್ಷ್ಮ ಜವಾಬ್ದಾರಿಯ ಹುದ್ದೆಗಳಿಗೆ ಗುತ್ತಿಗೆ ಸಿಬ್ಬಂದಿ ನೇಮಕಾತಿ ಬಗ್ಗೆಯೇ ಅಪಸ್ವರವೆದ್ದಿರುವ ಜತೆಗೆ ಕೆಲ ಅಧಿಕಾರಿಗಳೂ ಕೈಜೋಡಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ದಾಖಲೆಗಳಿಗೆ ನಕಲಿ ಸಹಿ: ಮಧುಗಿರಿ ಆರ್​ಟಿಒ ಕಚೇರಿಯ ಯೂಸರ್ ನೇಮ್ ಓಅ64 ಲಾಗಿನ್ ಐಡಿ: ಚ್ಟಠಿಟಞಛಜಯನ್ನು ಅನಧಿಕೃತವಾಗಿ ಸೃಷ್ಟಿಸಿಕೊಂಡು ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯ ಖಾಸಗಿ ಕಚೇರಿಯಲ್ಲಿ ಕುಳಿತು ರಾಜ್ಯದ ಬೇರೆಬೇರೆ ಆರ್​ಟಿಒಗಳು ಹಾಗೂ ಪ್ರಧಾನ ಕಚೇರಿಯ ವ್ಯವಹಾರ ಮಾಡಿದ್ದಾಳೆ. 2019ರ ಮಾ.2ರಿಂದ 2021ರ ಆ.8ರವರೆಗೆ ಬರೋಬ್ಬರಿ 386 ರೀತಿಯ ವ್ಯವಹಾರಗಳನ್ನು ಸಾರಿಗೆ ಇಲಾಖೆಯ ಹೆಸರಿನ ಐಡಿಯಲ್ಲಿ ನಡೆಸಿರುವುದು ಆಂತರಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಲಾಗಿನ್ ಐಡಿಯಿಂದ ತೆಗೆಯುತ್ತಿದ್ದ ದಾಖಲಾತಿ ಗಳಿಗೆ ಈಕೆ ಅಧೀಕ್ಷಕರ ನಕಲಿ ಸಹಿಯನ್ನು ಮಾಡುತ್ತಿದ್ದಳು.

ಸ್ಥಗಿತಗೊಂಡ ನಂಬರ್​ಗೆ ಹೊಸ ದಾಖಲೆ!: ಕರ್ನಾಟಕ ಆರ್​ಟಿಒದಲ್ಲಿ ನೋಂದಣಿಯಾದ ವಾಹನ ಗುಜರಾತ್, ಬೇರೆ ರಾಜ್ಯಕ್ಕೆ ವರ್ಗಾವಣೆಯಾದರೆ ಆ ರಾಜ್ಯದ ಹೊಸ ನಂಬರ್ ನೋಂದಣಿಯಾಗಿ ಇಲ್ಲಿನ ನಂಬರ್ ಸ್ಥಗಿತವಾಗುತ್ತದೆ. ಅಂತಹ ಇನ್ ಆಕ್ಟೀವ್ ನಂಬರ್​ಗಳನ್ನು ಆರ್​ಟಿಒ ಕಚೇರಿಗಳಿಂದ ಸಂಗ್ರಹಿಸಿ, ಅದೇ ನಂಬರ್​ಗೆ ಇನ್ನೊಂದು ವಾಹನ ನೋಂದಾಯಿಸಿ ದಾಖಲೆ ಸೃಷ್ಟಿಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ತೆರಿಗೆ ವಂಚನೆ, ಕಳ್ಳತನದಂತಹ ವಾಹನಗಳಿಗೆ ಈ ನಂಬರ್​ನಲ್ಲಿ ನೋಂದಣಿ ಮಾಡಿ ಆರ್​ಸಿ ಕಾರ್ಡ್​ಗಳನ್ನು ಕೊಡುತ್ತಿದ್ದರು ಎನ್ನಲಾಗಿದೆ.

ಬಸ್​ಗಳಿಗೆ 5 ವರ್ಷ ಟ್ಯಾಕ್ಸ್ ವಿನಾಯಿತಿ: ಬಸ್​ಗಳಿಗೆ 3 ತಿಂಗಳಿಗೊಮ್ಮೆ ತೆರಿಗೆ ಪಾವತಿಸಬೇಕು. ಆರೋಪಿ ಮಹಿಳೆ, ಹಲವು ಬಸ್​ಗಳಿಗೆ 5 ವರ್ಷದವರೆಗೆ ತೆರಿಗೆ ವಿನಾಯಿತಿ ಕೊಟ್ಟಿರುವಂತೆ ದಾಖಲೆ ಸೃಷ್ಟಿಸಿದ್ದಾಳೆ. ಅಲ್ಲದೇ ಹಲವು ವಾಹನಗಳಿಗೆ ತೆರಿಗೆ ಪಾವತಿಸಿರುವುದಾಗಿಯೂ ದಾಖಲೆ ಕೊಟ್ಟು, ಅವರಿಂದ ಹಣ ವಸೂಲಿ ಮಾಡಿದ್ದಾಳೆ.

ಟ್ರ್ಯಾಕ್ಟರ್​ಗಳಿಗೆ ನಂಬರ್: ಕೃಷಿ ಚಟುವಟಿಕೆಗೆ ಬಳಸುವ ಟ್ರ್ಯಾಕ್ಟರ್​ ಇಂಜಿನ್ ಹಾಗೂ ಟ್ರೇಲರ್ ಎರಡನ್ನೂ ಆರ್​ಟಿಒ ಅಧಿಕಾರಿಗಳ ಮುಂದೆ ಹಾಜರುಪಡಿಸಿ ಪ್ರತ್ಯೇಕ ನಂಬರ್ ಪಡೆಯಬೇಕು. ಆದರೆ, ಆರೋಪಿ, ಹಲವು ಟ್ರ್ಯಾಕ್ಟರ್​ ಇಂಜಿನ್ ಹಾಗೂ ಟ್ರೇಲರ್​ಗಳಿಗೆ ಅಕ್ರಮವಾಗಿ ರಿಜಿಸ್ಟ್ರೇಷನ್ ಮಾಡಿಕೊಟ್ಟಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪತಿ ಸೆಕೆಂಡ್ ಹ್ಯಾಂಡ್ ಕಾರು ಡೀಲರ್: ಸಿಂಧೂರ ಲಕ್ಷಿ್ಮೕಯ ಪತಿ ಬೆಂಗಳೂರಿನಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಡೀಲರ್ ಆಗಿದ್ದಾನೆ. ಹೀಗಾಗಿ ವಾಹನಗಳ ನೋಂದಣಿಗೆ ಅನಧಿಕೃತ ಲಾಗಿನ್ ಐಡಿ ಬಳಸಿಕೊಂಡಿದ್ದಾಳೆ. ವಾಹನ ನೋಂದಣಿ, ರಿಜಿಸ್ಟ್ರೇಷನ್ ನಂಬರ್ ಬದಲಾವಣೆ, ತೆರಿಗೆ ಪಾವತಿ, ವಾಹನದ ಆರ್​ಸಿ ಟ್ರಾನ್ಸ್​ಫರ್, ಚಾಸ್ಸಿ ನಂಬರ್ ಬದಲಾವಣೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಧಿಕಾರಿಗಳು ಹೇಳೋದೇನು?

  • ಗುತ್ತಿಗೆ ನೌಕರರ ನೇಮಕಾತಿ ವೇಳೆ ಅವರ ಅಸಲಿ ವೈಯಕ್ತಿಕ ದಾಖಲಾತಿ ಪಡೆಯಬೇಕು. ಸಾಧ್ಯವಾದರೆ ಒಂದಷ್ಟು ಹಣ ಠೇವಣಿ ಇರಿಸಿಕೊಳ್ಳಬೇಕು
  • ಗುತ್ತಿಗೆ ಸಿಬ್ಬಂದಿಯನ್ನು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ರೊಟೇಷನ್ ಪದ್ಧತಿಯಡಿ ವರ್ಗಾವಣೆ ಮಾಡಬೇಕು.
  • ಸಾರಿಗೆ ಇಲಾಖೆಗೆ ಗುತ್ತಿಗೆ ಸಿಬ್ಬಂದಿ ನಿಯೋಜನೆ ಬದಲು ಕಾಯಂ ಸಿಬ್ಬಂದಿ ನೇಮಕವಾಗಲಿ.

ಚಿಕ್ಕಬಳ್ಳಾಪುರ ಕಚೇರೀಲಿ 3 ಲಕ್ಷ ಧೋಖಾ: ಮತ್ತೊಂದು ಪ್ರಕರಣದಲ್ಲಿ ಚಿಕ್ಕಬಳ್ಳಾಪುರ ಆರ್​ಟಿಒದಲ್ಲಿ ಖಜಾನೆ ನಿರ್ವಹಣೆ ಜವಾಬ್ದಾರಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದ ಯುವತಿಗೆ ನೀಡಲಾಗಿತ್ತು. ಸಾರ್ವಜನಿಕರು ಪಾವತಿಸಿದ ಡಿಡಿ ಹಾಗೂ ಚಲನ್​ಗಳನ್ನು ಖಜಾನೆಗೆ ಜಮೆ ಮಾಡದೆ ದುರ್ಬಳಕೆ ಮಾಡಿಕೊಂಡಿದ್ದಳು. 2ರಿಂದ 3 ಲಕ್ಷ ವಂಚಿಸಿ ಪರಾರಿಯಾಗಿದ್ದಾಳೆ.

ಅಧಿಕಾರಿಗಳ ಸಾಥ್?: ಅಧಿಕಾರಿಗಳ ಸಹಾಯವಿಲ್ಲದೆ ಇಷ್ಟು ದೊಡ್ಡಮಟ್ಟದಲ್ಲಿ ಹಾಗೂ ಎರಡೂವರೆ ವರ್ಷಗಳ ಕಾಲ ಯಾರಿಗೂ ತಿಳಿಯದೆ ಸರ್ಕಾರಿ ಕಚೇರಿ ಹೆಸರಲ್ಲಿ ವ್ಯವಹಾರ ನಡೆಸಲು ಸಾಧ್ಯವಿಲ್ಲ. ಅದರಲ್ಲೂ ಪ್ರಧಾನ ಕಚೇರಿಯ ಕೆಲವರ ನೆರವು ಇರುವ ಅನುಮಾನವಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಈ ಹಿಂದೆ ತಾಂತ್ರಿಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಸಿಂಧೂರ ಲಕ್ಷಿ್ಮೕ, 2 ವರ್ಷದಿಂದ ಆರ್​ಟಿಒ ಕಚೇರಿಯ ಯೂಸರ್ ನೇಮ್ ಹಾಗೂ ಲಾಗಿನ್ ಐಡಿಯನ್ನು ಬಳಸಿ ದಾಖಲಾತಿ ಸೃಷ್ಟಿಸಿರುವುದು ಇತ್ತೀಚೆಗೆ ಗೊತ್ತಾಗಿದೆ. ಈ ವಿಚಾರವನ್ನು ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರ ಸೂಚನೆಯಂತೆ ಸೈಬರ್ ಠಾಣೆಯಲ್ಲೂ ದೂರು ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.

| ವಿವೇಕಾನಂದ ಮಧುಗಿರಿ ಆರ್​ಟಿಒ

ಯೂಸರ್ ನೇಮ್ ಮತ್ತು ಲಾಗಿನ್ ಐಡಿ ಬಳಸಿ ಮೊಬೈಲ್​ಗೇ ಓಟಿಪಿ ಬರುವಂತೆ ಮಾಡಿಕೊಂಡಿದ್ದಾಳೆ. ಎಲ್ಲಿಂದ ಹೇಗೆ? ನಿರ್ವಹಿಸುತ್ತಿದ್ದಳು ಎಂಬುದನ್ನು ತಿಳಿಯಲು ಐಪಿ ವಿಳಾಸ ಪತ್ತೆಹಚ್ಚಲಾಗುತ್ತಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ತನಿಖಾ ಹಂತದಲ್ಲಿರುವುದರಿಂದ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ.

| ಸೈಬರ್ ಠಾಣೆ ಅಧಿಕಾರಿ

ಲಾಗಿನ್ ಸೃಷ್ಟಿಸಿ ಅಧಿಕಾರ ದುರ್ಬಳಕೆ

ಪ್ರತಿ ಆರ್​ಟಿಒ ಕಚೇರಿಗೂ ಪ್ರತ್ಯೇಕ ಯೂಸರ್ ನೇಮ್ ಮತ್ತು ಲಾಗಿನ್ ಐಡಿ ಕೊಡಲಾಗಿರುತ್ತದೆ. ಅದನ್ನು ಬಳಸಿ ಲಾಗಿನ್ ಆದರಷ್ಟೇ ಕಚೇರಿ ವ್ಯವಹಾರ ನಡೆಸಲು ಸಾಧ್ಯ. 2019ರಲ್ಲಿ ಮಧುಗಿರಿ ಆರ್​ಟಿಒದಲ್ಲಿ ತಾಂತ್ರಿಕ ಸಹಾಯಕಳಾಗಿ ಕೆಲಸ ಮಾಡುತ್ತಿದ್ದ ಸಿಂಧೂರ ಲಕ್ಷಿ್ಮೕ, 2019ರ ಏ.2ರಂದು ಎಲೆಕ್ಟ್ರಾನಿಕ್ಸ್ ಸಿಟಿ ಆರ್​ಟಿಒಗೆ ವರ್ಗಾವಣೆಯಾಗಿದ್ದಳು. ಮಧುಗಿರಿಯಿಂದ ಹೋದ ನಂತರ ಮಧುಗಿರಿ ಆರ್​ಟಿಒ ಯೂಸರ್ ನೇಮ್ ಓಅ64 ಲಾಗಿನ್ ಐಡಿ: ಚ್ಟಠಿಟಞಛಜಯನ್ನು ಅನಧಿಕೃತವಾಗಿ ಸೃಷ್ಟಿಸಿಕೊಂಡು ಆರ್​ಟಿಒ ಅಧಿಕಾರಿಗಳು ಏನೆಲ್ಲ ವ್ಯವಹಾರ ನಡೆಸಬಹುದೋ ಅದನ್ನೆಲ್ಲ ಮಾಡಿದ್ದಾಳೆ. ಆರ್​ಟಿಒ ಕಚೇರಿಯಲ್ಲಿ ಯೂಸರ್ ನೇಮ್ ಮತ್ತು ಲಾಗಿನ್ ಐಡಿ ಸೃಷ್ಟಿಸಿಕೊಡುವ ಅಧಿಕಾರ ಸಿಂಧೂರ ಲಕ್ಷಿ್ಮೕಗೆ ಕೊಟ್ಟಿದ್ದರಿಂದ ಅದನ್ನು ದುರ್ಬಳಕೆ ಮಾಡಿಕೊಂಡಿದ್ದಾಳೆ. ಇತ್ತೀಚೆಗೆ ಮೊಬೈಲ್​ಗೇ ಒಟಿಪಿ ಬರುವಂತೆಯೂ ಮಾಡಿಕೊಂಡಿದ್ದಳು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯಾರು ಈಕೆ?: ಸಿಂಧೂರ ಲಕ್ಷಿ್ಮೕ ವಿರುದ್ಧ ಸೈಬರ್ ಕ್ರೖೆಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 2020ರ ಅಕ್ಟೋಬರ್​ನಲ್ಲಿ ಈಕೆ ಎಲೆಕ್ಟ್ರಾನಿಕ್ಸ್ ಸಿಟಿ ಆರ್​ಟಿಒ ಕಚೇರಿಯ ಕೆಲಸ ಬಿಟ್ಟು ಹೋಗಿದ್ದಾಳೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ನಾಪತ್ತೆಯಾಗಿದ್ದು, ವಂಚನೆಗೆ ಬಳಸಿರುವ ಕಾರ್ಯಶೈಲಿ ಕಂಡು ಸೈಬರ್ ಪೊಲೀಸರೇ ನಿಬ್ಬೆರಗಾಗಿದ್ದಾರೆ.

ಬೆಳಕಿಗೆ ಬಂದಿದ್ದು ಹೇಗೆ?: ಮಧುಗಿರಿ ಆರ್​ಟಿಒದಲ್ಲಿ ನೋಂದಣಿಯಾಗದಿದ್ದರೂ ದಾಖಲೆ ಸೃಷ್ಟಿಯಾಗಿರುವ ಬಗ್ಗೆ ಆ.3ರಂದು ಪ್ರಭಾರ ಅಧೀಕ್ಷಕ ಕೆ.ಕೆ. ಜಯರಾಂ ಅವರಿಗೆ ಗೊತ್ತಾಗಿತ್ತು. ಈ ವಿಚಾರವನ್ನು ಆರ್​ಟಿಒ ವಿವೇಕಾನಂದ ಅವರಿಗೆ ತಿಳಿಸಿದ್ದು, ಅವರು ಬೆಂಗಳೂರಿನ ಪ್ರಧಾನ ಕಚೇರಿಗೆ ತೆರಳಿ ಅರ್ಜಿ ಸಂಖ್ಯೆ, ಸಲ್ಲಿಕೆಯಾದ ದಿನಾಂಕ, ವಾಹನ ನೋಂದಣಿ ಸಂಖ್ಯೆ, ಯೂಸರ್ ಐಡಿ, ಐಪಿ ವಿಳಾಸ ವಿವರ ಪಡೆದುಕೊಂಡಾಗ ಇಂಥ 386 ವ್ಯವಹಾರ ನಡೆದಿರುವುದು ಗೊತ್ತಾಗಿ, ತುಮಕೂರು ಸೈಬರ್ ಠಾಣೆಗೆ ದೂರು ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net