

ಮಳವಳ್ಳಿ: ಎಜುಕೇಷನ್ ಟ್ರಸ್ಟ್‌ಗೆ ದೇಣಿಗೆ ಕೊಡುವುದಾಗಿ ತಾಲೂಕಿನ ಶಿಂಷಾಪುರದಲ್ಲಿ ಜ.20ರಂದು ಎಸ್.ಮೇರಿ ಅವರಿಂದ 1 ಕೋಟಿ 10 ಲಕ್ಷ ರೂ. ಪಡೆದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಇದರಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿ ಸ್ವಾಮೀಜಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಆಂಧ್ರಪ್ರದೇಶದ ವೆಲ್ಲೂರು ಜಿಲ್ಲೆ ಕುಪ್ಪಂ ಗ್ರಾಮದ ಸೂರ್ಯ ಬಂಧಿತ ಆರೋಪಿಯಾಗಿದ್ದು, ಆತನಿಂದ 43,88,500 ರೂ.ಗಳನ್ನು ಪೊಲೀಸರು. ವಶಕ್ಕೆ ಪಡೆದಿದ್ದಾರೆ. ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿರುವ ವಿರಕ್ತ ಮಠದ ಪೀಠಾಧ್ಯಕ್ಷ ಶಂಭುಲಿಂಗ ಸ್ವಾಮೀಜಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ.
ಘಟನೆ ವಿವರ: ಶಿಂಷಾ ಗ್ರಾಮದ ಎಸ್.ಮೇರಿ ಅವರು ಶ್ಯಾಮೋಲ್ ಎಜುಕೇಷನ್ ಚಾರಿಟಬಲ್ ಟ್ರಸ್ಟ್ ಎಂಬ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಂಡಿದ್ದು, ಶಂಭುಲಿಂಗ ಸ್ವಾಮೀಜಿ ಕಳೆದ ಮೂರು ತಿಂಗಳ ಹಿಂದೆ ಎಸ್.ಮೇರಿ ಅವರ ಬಳಿಗೆ ಸೂರ್ಯ ಎಂಬ ವ್ಯಕ್ತಿಯನ್ನು ಕರೆದೊಯ್ದು ಇವರು ದೊಡ್ಡ ಉದ್ಯಮಿಯಾಗಿದ್ದು, ನಿಮ್ಮ ಟ್ರಸ್ಟ್ ಅಭಿವೃದ್ಧಿಗೆ ದೇಣಿಗೆ ಕೊಡುತ್ತಾರೆ ಎಂದು ಪರಿಚಯಿಸಿದ್ದಾರೆ. ಅವರ ಭರವಸೆಯ ಮಾತುಗಳನ್ನು ನಂಬಿದ್ದ ಮಹಿಳೆ ತಮ್ಮ ಕಚೇರಿಗೆ ಶಂಭುಲಿಂಗ ಸ್ವಾಮೀಜಿ ಮತ್ತು ಸೂರ್ಯ ಅವರನ್ನು ಆಹ್ವಾನಿಸಿ ಟ್ರಸ್ಟ್ ಅಧ್ಯಕ್ಷ ಮೇರಿನ್ ಪಿಂಟೋ ಅವರ ಜತೆಗೂಡಿ ಅಭಿನಂದಿಸಿದ್ದರು. ಇದೇ ವೇಳೆ ಸೂರ್ಯ ಎಂಬ ನಕಲಿ ಉದ್ಯಮಿ ನಿಮ್ಮ ಟ್ರಸ್ಟ್‌ಗೆ 25 ಕೋಟಿ ರೂ. ದೇಣಿಗೆ ನೀಡುತ್ತೇನೆ. ಬದಲಿಗೆ 1 ಕೋಟಿ 10 ಲಕ್ಷ ರೂ.ಗಳನ್ನು ನಮಗೆ ತೆರಿಗೆ ಕಟ್ಟಲು ನಗದು ರೂಪದಲ್ಲಿ ಹಣ ಕೊಡಬೇಕೆಂದು ನಂಬಿಸಿದ್ದಾರೆ. ಇದನ್ನು ನಂಬಿದ ಮಹಿಳೆ ಹಣವನ್ನು ಹೊಂದಿಸಿಕೊಂಡು ಜ.19ರಂದು ಇಬ್ಬರು ಆರೋಪಿಗಳಿಗೆ ವಿಷಯ ತಿಳಿಸಿದ್ದಾರೆ. ಅದರದಂತೆ ಸೂರ್ಯ ಚೀಲದಲ್ಲಿ ನಕಲಿ ನೋಟುಗಳನ್ನು ತುಂಬಿಸಿಕೊಂಡು ಜ.20 ರಂದು ಕಾರಿನಲ್ಲಿ ಶಿಂಷಾಪುರದ ಮೇರಿ ಅವರ ಮನೆಗೆ ಆಗಮಿಸಿದ್ದು, ಅವರ ಬಳಿ ಇದ್ದ 1.10 ಕೋಟಿ ರೂ.ಗಳನ್ನು ಪಡೆದುಕೊಂಡು ತಾವು ತಂದಿದ್ದ ನಕಲಿ ನೋಟುಗಳಿದ್ದ ಚೀಲವನ್ನು ನೀಡಿದ್ದಾನೆ. ನಂತರ ಔಪಚಾರಿಕ ವಿಚಾರಗಳ ಬಗ್ಗೆ ಮಾತನಾಡುತ್ತ ತಾವೇ ತಂದಿದ್ದ ಜ್ಯೂಸ್ ಅನ್ನು ಟ್ರಸ್ಟ್ ಅಧ್ಯಕ್ಷ ಮೇರಿನ್ ಪಿಂಟೋ ಮತ್ತು ಎಸ್.ಮೇರಿ ಅವರಿಗೆ ಕುಡಿಸಿದ್ದು, ಸ್ವಲ್ಪ ಸಮಯದಲ್ಲಿ ಇಬ್ಬರೂ ಪ್ರಜ್ಞೆ ಕಳೆದುಕೊಂಡ ನಂತರ ಹಣದೊಡನೆ ಆರೋಪಿ ಸೂರ್ಯ ಪರಾರಿಯಾಗಿದ್ದನು.
ಎಚ್ಚರವಾದಾಗ ಕೂಡಲೇ ಮಳವಳ್ಳಿ ಪೊಲೀಸ್ ಠಾಣೆಯ ಡಿವೈಎಸ್‌ಪಿ ಕೃಷ್ಣಪ್ಪ ಅವರಿಗೆ ಮಾಹಿತಿ ನೀಡಿದ್ದರು. ಅವರ ಸಲಹೆಯಂತೆ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ಕೈಗೆತ್ತಿಕೊಂಡಿದ್ದ ಠಾಣಾಧಿಕಾರಿ ಪಿಎಸ್‌ಐ ಅಶೋಕ್ ಜ.27ರಂದು ಆರೋಪಿ ಸೂರ್ಯನನ್ನು ಬಂಧಿಸಿ ಠಾಣೆಗೆ ಕರೆತಂದು ತನಿಖೆ ನಡೆಸಿದಾಗ ಶಂಭುಲಿಂಗ ಸ್ವಾಮೀಜಿಗೆ 25 ಲಕ್ಷ ರೂ. ನೀಡಿರುವುದಾಗಿ ಹೇಳಿಕೆ ನೀಡಿ 43,88,500 ರೂ. ನಗದು, ಆತ ಬಳಸುತ್ತಿದ್ದ ಕಾರು ಮತ್ತು ಸ್ವಾಮೀಜಿ ಬಳಸಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಘಟನೆಯ ನಂತರ ಶಂಭುಲಿಂಗ ಸ್ವಾಮೀಜಿ ತಲೆಮರೆಸಿಕೊಂಡಿದ್ದು, ಆತನ ಬಂಧನದ ನಂತರವಷ್ಟೇ ಉಳಿದ ಹಣದ ಮಾಹಿತಿ ಹೊರ ಬರಬೇಕಿದೆ.