ಕರೊನಾ ಹೆಸರಲ್ಲಿ ಕೋಟ್ಯಂತರ ಲೂಟಿ

3-hvr-03
Published on

ಹಾವೇರಿ: ಕರೊನಾದಿಂದ ವಿಶ್ವವೇ ನಲುಗಿದ್ದರೆ, ರಾಜ್ಯ ಸರ್ಕಾರಕ್ಕೆ ಇದು ಕಲ್ಪವೃಕ್ಷ ಕಾಮಧೇನುವಾಗಿದೆ. ಇದೊಂದು ಅವಕಾಶ ಎಂದು ತಿಳಿದು ಮುಖ್ಯಮಂತ್ರಿಗಳಿಂದ ಹಿಡಿದು ಸಚಿವರು, ಅಧಿಕಾರಿಗಳು ಲೂಟಿಯಲ್ಲಿ ತೊಡಗಿದ್ದಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲ ಗಂಭೀರ ಆರೋಪ ಮಾಡಿದರು.

ನಗರದ ಸಜ್ಜನರ ಫಂಕ್ಷನ್ ಹಾಲ್​ನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರೊನಾದಲ್ಲಿ ಜನರ ಜೀವ ಉಳಿಸಲು, ಜೀವದ ಹಂಗು ತೊರೆದು ಹೋರಾಡುತ್ತಿರುವ ಸೇನಾನಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸುವ ಬದಲು ರಾಜ್ಯ ಬಿಜೆಪಿ ಸರ್ಕಾರ ಲೂಟಿ ಹೊಡೆಯಲು ನಿಂತಿದೆ. ಕರೊನಾದಿಂದ ಸಂಕಷ್ಟದಲ್ಲಿರುವವರಿಗೆ ಎಲ್ಲರೂ ತಮ್ಮಿಂದಾಗುವ ಸಹಾಯ ಮಾಡುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್, ವೆಂಟಿಲೇಟರ್ ಹಾಗೂ ವಿವಿಧ ಸಾಮಗ್ರಿಗಳನ್ನು ದುಬಾರಿ ಬೆಲೆಗೆ ಖರೀದಿಸಿ ಭ್ರಷ್ಟಾಚಾರ ನಡೆಸಿದೆ. ಇದು ಬಿಜೆಪಿ ಸರ್ಕಾರದ ಸಂಸ್ಕಾರ ಎಂದು ಆರೋಪಿಸಿದರು.

ವೆಂಟಿಲೇಟರ್ ಖರೀದಿಯಲ್ಲಂತೂ ಭಾರಿ ಅವ್ಯವಹಾರ ನಡೆದಿದೆ. ಕಳಪೆ ಗುಣಮಟ್ಟದ ವೆಂಟಿಲೇಟರ್​ಗಳನ್ನು ದುಬಾರಿ ಬೆಲೆ ಕೊಟ್ಟು ಖರೀದಿಸಲಾಗಿದೆ. ಅದರ ಮಾದರಿ ಸಂಖ್ಯೆ, ಗುಣಮಟ್ಟ ಪ್ರಮಾಣಪತ್ರ ಯಾವುದೂ ಇಲ್ಲ. ಈ ಕುರಿತು ಅವರ ಪಕ್ಷದ ಡಾ. ಸಾರ್ವಭೌಮ ಬಗಲಿ ಅವರೇ ವೆಂಟಿಲೇಟರ್ ಕಳಪೆಯಾಗಿರುವ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಮಾಸ್ಕ್, ಸ್ಯಾನಿಟೈಸರ್, ಥರ್ಮಲ್​ಸ್ಕ್ಯಾನರ್, ಆಕ್ಸಿಜನ್ ಉಪಕರಣ ಖರೀದಿಯಲ್ಲಿಯೂ ಭ್ರಷ್ಟಾಚಾರ ನಡೆದಿದೆ. ಕಳಪೆ ಪಿಪಿಇ ಕಿಟ್​ಗಳನ್ನು ವೈದ್ಯರು, ಆರೋಗ್ಯ ಸಿಬ್ಬಂದಿಗೆ ನೀಡಲಾಗಿದೆ. ಇದು ಭ್ರಷ್ಟಾಚಾರ ಮಾತ್ರವಲ್ಲ. ಕ್ರಿಮಿನಲ್ ಅಪರಾಧವಾಗಿದೆ ಎಂದರು.

ಯಾವುದೇ ಪೂರ್ವತಯಾರಿಯಿಲ್ಲದೇ ಲಾಕ್​ಡೌನ್ ಘೊಷಣೆ ಮಾಡಿದ್ದರಿಂದ ದೇಶದಲ್ಲಿ ಸೋಂಕಿತರ ಸಂಖ್ಯೆ 18 ಲಕ್ಷಕ್ಕೆ ತಲುಪಿದೆ. ಕರೊನಾ ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.

ಶಾಸಕಿ ಅಂಜಲಿ ನಿಂಬಾಳ್ಕರ್, ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಮನೋಹರ ತಹಶೀಲ್ದಾರ್, ವಿಪ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಶಾಸಕ ಡಿ.ಆರ್. ಪಾಟೀಲ, ಬಿ.ಎಚ್. ಬನ್ನಿಕೋಡ, ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಜಿಪಂ ಅಧ್ಯಕ್ಷ ಬಸನಗೌಡ ದೇಸಾಯಿ, ಕೆಪಿಸಿಸಿ ಕಾರ್ಯದರ್ಶಿ ಡಾ. ಪ್ರಕಾಶಗೌಡ ಪಾಟೀಲ, ಡಾ. ಆರ್.ಎಂ. ಕುಬೇರಪ್ಪ, ಸಂಜೀವಕುಮಾರ ನೀರಲಗಿ ಇತರಿದ್ದರು.

2 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಅವ್ಯವಹಾರ: ಕಾಂಗ್ರೆಸ್ ಪಕ್ಷ ಅಧಿಕೃತ ಮಾಹಿತಿ, ದಾಖಲೆಗಳನ್ನಿಟ್ಟುಕೊಂಡು ಆರೋಪ ಮಾಡುತ್ತಿದೆ. ಆರೋಗ್ಯ ಇಲಾಖೆ 700 ಕೋಟಿ, ಬಿಬಿಎಂಪಿ ಮತ್ತು ನಗರ ಸ್ಥಳೀಯ ಸಂಸ್ಥೆ 200 ಕೋಟಿ, ವೈದ್ಯಕೀಯ ಶಿಕ್ಷಣ ಇಲಾಖೆ 615 ಕೋಟಿ, ಜಿಲ್ಲಾಡಳಿತಗಳಿಗೆ 742 ಕೋಟಿ, ಕಾರ್ವಿುಕ ಇಲಾಖೆ 1 ಸಾವಿರ ಕೋಟಿ, ಸಮಾಜ ಕಲ್ಯಾಣ, ಶಿಕ್ಷಣ, ಪೊಲೀಸ್ ಇನ್ನಿತರ ಇಲಾಖೆಗಳಿಗೆ 500 ಕೋಟಿ, ಕೋವಿಡ್ ಆರೈಕೆ ಕೇಂದ್ರಕ್ಕೆ ಹಾಸಿಗೆ ದಿಂಬು ಖರೀದಿಗೆ 160 ಕೋಟಿ, ಕೇಂದ್ರ ಸರ್ಕಾರ ಪೂರೈಸಿದ ಉಪಕರಣಗಳಿಗೆ 50 ಕೋಟಿ ರೂ. ಸೇರಿ ಒಟ್ಟು 4,167 ಕೋಟಿ ರೂ. ಖರ್ಚು ಮಾಡಲಾಗಿದೆ. ಇದರಲ್ಲಿ 2 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಅವ್ಯವಹಾರವಾಗಿದೆ. ಕಳಪೆ ಸೆಕೆಂಡ್ ಹ್ಯಾಂಡ್ ಸಾಮಗ್ರಿಗಳನ್ನು ಮೂರ್ನಾಲ್ಕು ಪಟ್ಟು ಅಧಿಕ ಹಣ ಕೊಟ್ಟು ಖರೀದಿಸಲಾಗಿದೆ ಎಂದು ಆರೋಪಿಸಿದರು.

ಬೇಕಿದ್ದರೆ ನನಗೂ ನೋಟಿಸ್ ಕೊಡಲಿ: ದಾಖಲೆ ಇಟ್ಟುಕೊಂಡು ಹೇಳಿದರೂ ಬಿಜೆಪಿಯವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡುತ್ತಾರೆ. ನನಗೂ ಬೇಕಿದ್ದರೆ ನೋಟಿಸ್ ಕೊಡಲಿ, ಉತ್ತರ ಕೊಡುತ್ತೇನೆ. ಕರೊನಾ ಹೆಸರಿನಲ್ಲಿ ಆಗಿರುವ ಭ್ರಷ್ಟಾಚಾರ ಕುರಿತು ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು. ಸರ್ಕಾರ ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ತಪ್ಪು ಮಾಡಿದ ಸಚಿವರು, ಅಧಿಕಾರಿಗಳು ಜೈಲಿಗೆ ಹೋಗಬೇಕು ಎಂದು ಎಂ.ಬಿ. ಪಾಟೀಲ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net