ಕೋಟಿ ರೂ. ಸಾಲ ಪಡೆದ ದಂಪತಿ ಎಸ್ಕೇಪ್

webb2
Published on

ಪೇಚಿಗೆ ಸಿಲುಕಿದ ಹಣ ಕೊಟ್ಟವರು
 ಭದ್ರತೆಗಾಗಿ ಬ್ಯಾಂಕ್ ಚೆಕ್, ಹಣ ಸಂದಾಯದ ರಸೀದಿ ನೀಡಿದ್ದ ವಂಚಕರು


 ಬಾಗೇಪಲ್ಲಿ : ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರೂ ಇರುತ್ತಾರೆ ಎಂಬ ಮಾತಿನಂತೆ ಊರಿನ ತುಂಬ ಲಕ್ಷ ಲಕ್ಷ ಸಾಲ ಮಾಡಿದ ದಂಪತಿ ರಾತ್ರೋರಾತ್ರಿ ಗಂಟುಮೂಟೆ ಕಟ್ಟಿಕೊಂಡು ನಾಪತ್ತೆ ಆಗಿರುವ ಪ್ರಕರಣ ಬಾಗೇಪಲ್ಲಿಯಲ್ಲಿ ನಡೆದಿದೆ.
ಪಟ್ಟಣದ ಪುರಸಭೆ 23ನೇ ವಾರ್ಡ್‌ನ ಸಂಧ್ಯಾಕುಮಾರಿ ಹಾಗೂ ಕಿರಣ್ ಕುಮಾರ್ ಲಕ್ಷಾಂತರ ರೂ. ಸಾಲ ಮಾಡಿ ನಾಪತ್ತೆಯಾಗಿರುವ ದಂಪತಿ. ಇದೀಗ, ಹಣ ಕಳೆದುಕೊಂಡವರು, ಇಬ್ಬರನ್ನೂ ಪತ್ತೆಹಚ್ಚಿ ಹಣ ಕೊಡಿಸುವಂತೆ ಬಾಗೇಪಲ್ಲಿ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಪಟ್ಟಣದ ಗಂಗಮ್ಮಗುಡಿ ರಸ್ತೆಯಲ್ಲಿ ದಂಪತಿ ್ಯಾನ್ಸಿ ಸ್ಟೋರ್ಸ್‌ ಹಾಗೂ ಡಿವಿಜಿ ರಸ್ತೆಯಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದರು. ಜನರ ವಿಶ್ವಾಸ ಗಳಿಸಿದ್ದ ದಂಪತಿ 8 ತಿಂಗಳ ಅವಧಿಯಲ್ಲಿ ಪಟ್ಟಣದ ಬಾಲಾಜಿ, ಹರೀಶ್, ನಾಗಾನಂದರೆಡ್ಡಿ ಸೇರಿ ಹಲವರಿಂದ 60 ಲಕ್ಷ ರೂ.ಗಳಿಗೂ ಹೆಚ್ಚು ಹಣ ಪಡೆದು, ಸಾಲದ ಭದ್ರತೆಗಾಗಿ ಬ್ಯಾಂಕ್ ಚೆಕ್ ಮತ್ತು ಹಣ ಸಂದಾಯ ರಸೀದಿಯನ್ನು ಕೊಟ್ಟಿದ್ದಾರೆ. ಹೀಗೆ ಹಲವರಿಂದ ಒಟ್ಟು 1 ಕೋಟಿ ರೂ.ಗಳಿಗೂ ಹೆಚ್ಚು ಸಾಲವಾಗಿ ಪಡೆದು, ಕೆಲವು ದಿನಗಳ ಹಿಂದೆ ರಾತ್ರೋರಾತ್ರಿ ಪಟ್ಟಣದಿಂದ ಗಂಟುಮೂಟೆ ಕಟ್ಟಿಕೊಂಡು ನಾಪತ್ತೆಯಾಗಿದ್ದಾರೆ.

ಮಗ ಎಲ್ಲಿದ್ದಾನೋ ಗೊತ್ತಿಲ್ಲ
ಸಾಲ ನೀಡಿರುವವವರು ಹಣ ಕೇಳಲು ಮನೆ ಬಳಿ ಹೋದಾಗ ಕಿರಣ್‌ಕುಮಾರ್ ತಂದೆ ಸೂರ್ಯನಾರಾಯಣಾಚಾರಿ, ನನ್ನ ಮಗ ಎಲ್ಲಿದ್ದಾನೋ ಗೊತ್ತಿಲ್ಲ. ಸಾಲಕ್ಕೂ ನನಗೂ ಸಂಬಂಧವಿಲ್ಲ ಎಂದಿದ್ದಾರೆ. ಇದರಿಂದ ಬೇಸತ್ತ ಹಣ ಕೊಟ್ಟವರು, ಕಿರಣ್‌ಕುಮಾರ್ ಅವರ ಅಂಗಡಿಗಳಿಗೆ ಬೀಗ ಜಡಿದಿದ್ದಾರೆ. ಆದರೂ, ಸಮಸ್ಯೆಗೆ ಪರಿಹಾರ ಸಿಗದಿದ್ದಾಗ ದಂಪತಿ ವಿರುದ್ಧ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ದಂಪತಿ ವಿರುದ್ಧ ಪ್ರತ್ಯೇಕ 3 ಪ್ರಕರಣಗಳು ದಾಖಲಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net