

ಎನ್.ವಿ.ವೆಂಕಟೇಶ್, ಗುಡಿಬಂಡೆ
ಕಳೆದ ವರ್ಷದಂತೆ ಈ ವರ್ಷವೂ ಮಳೆರಾಯ ಮುನಿಸಿಕೊಂಡಿದ್ದು, ಅನ್ನದಾತ ಇಟ್ಟಿರುವ ಬೆಳೆಗಳು ಮಳೆ ಇಲ್ಲದೆ ಒಣಗುತ್ತಿವೆ.
ಹೌದು, ತಾಲೂಕಿನಲ್ಲಿ ಶೇ.94 ಬಿತ್ತನೆ ಕಾರ್ಯ ಆಗಿದೆ. ಅತಿಹೆಚ್ಚು ಮುಸುಕಿನ ಜೋಳ ಮತ್ತು ರಾಗಿ ಬಿತ್ತನೆ ಮಾಡಲಾಗಿದೆ. ಸೆಪ್ಟೆಂಬರ್‌ನಲ್ಲಿ ವಾಡಿಕೆ ಸರಾಸರಿ 63.7 ಮಿಮೀ ಮಳೆ ಆಗಬೇಕಾಗಿತ್ತು. ಬದಲಾಗಿ 4.3 ಮಿಮೀ ಮಳೆಯಾಗಿದೆ. ಶೇ.93 ಕೊರತೆಯಾಗಿದೆ. ಇದರಿಂದಾಗಿ ಶೇ.50 ಬೆಳೆಗಳು ಮಳೆಯಿಲ್ಲದೆ ಒಣಗುವಂತಾಗಿದೆ.
ಕೆಲ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿ ಮನೆಗಳು ಬಿದ್ದು, ಬೆಳೆ ನಷ್ಟವಾಗಿ ಜನರು ಆತಂಕಕ್ಕೆ ಸಿಲುಕಿದ್ದರೆ, ಚಿಕ್ಕಬಳ್ಳಾಪುರ ಭಾಗದಲ್ಲಿ ಸಮರ್ಪಕ ಮಳೆ ಇಲ್ಲದೆ ತೇವಾಂಶದ ಕೊರತೆಯಿಂದಾಗಿ ಬೆಳೆಗಳು ಒಣಗುತ್ತಿವೆ. ಮಳೆ ಬರುವ ವಾತಾವರಣ ಸೃಷ್ಟಿಯಾಗುತ್ತದೆಯಾದರೂ, ನಂತರ ಗಾಳಿ ಹೆಚ್ಚಾಗಿ ಮಳೆ ಮಾಯವಾಗುತ್ತಿದೆ.
ಕೈಕೊಟ್ಟ ಮಳೆ
ಆಗಸ್ಟ್‌ನಲ್ಲಿ ಸರಾಸರಿ 111.7 ಮಿಮೀಗೆ ಬದಲಾಗಿ 164.4 ಮಿಮೀ ಮಳೆಯಾಗಿದೆ. ಇದು ವಾಡಿಕೆಗಿಂತ ಹೆಚ್ಚು. ಆದರೆ, ಸೆಪ್ಟೆಂಬರ್‌ನಲ್ಲಿ ವಾಡಿಕೆ ಮಳೆ ಸರಾಸರಿ 63.7 ಮಿಮೀಗೆ ಬದಲಾಗಿ ಕೇವಲ 4.3 ಮಿಮೀ ಮಳೆಯಾಗಿದೆ. ಹುಬ್ಬಾ, ಉತ್ತರ, ಹಸ್ತ ಮಳೆಗಳು ಕೈಕೊಟ್ಟಿದ್ದು, ಚಿತ್ತ, ಸ್ವಾತಿ, ವಿಶಾಖ ಮಳೆಗಳು ಕೈಕೊಟ್ಟರೆ ಇಟ್ಟಿರುವ ಬೆಳೆಗಳು ಸಂಪೂರ್ಣವಾಗಿ ಒಣಗಿ ರೈತರು ಕಂಗಾಲಾಗುವುದು ನಿಶ್ಚಿತ.
ಅಂತರ್ಜಲಮಟ್ಟ ಕುಸಿತ
ಮಳೆ ಕೊರತೆಯಿಂದಾಗಿ ತಾಪಮಾನದಲ್ಲಿ ಏರಿಕೆಯಾಗುತ್ತಿದೆ. ಅಂತರ್ಜಲಮಟ್ಟ ಕುಸಿಯುತ್ತಿದೆ. ಕೊಳವೆ ಬಾವಿಗಳು ಇಂಗುತ್ತಿವೆ. ಸೆಪ್ಟೆಂಬರ್‌ನಲ್ಲಿ ಮಳೆರಾಯ ಕೃಪೆ ತೋರದಿದ್ದರೆ ತಾಲೂಕಿನಲ್ಲಿರುವ ಶೇ.50 ಕೊಳವೆಬಾವಿಗಳು ಬಂದ್ ಆಗುತ್ತವೆ. ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಲಿದೆ ಎನ್ನುವುದು ರೈತರ ಅಳಲು.
ತಾಲೂಕಿನಲ್ಲಿ ಶೇ.94 ಬಿತ್ತನೆ ಕಾರ್ಯ ಆಗಿದೆ. ಮುಸುಕಿನ ಜೋಳ ಮತ್ತು ರಾಗಿ ಹೆಚ್ಚು ಬಿತ್ತನೆಯಾಗಿದೆ. ಆಗಸ್ಟ್‌ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದು ಬೆಳೆಗಳು ಉತ್ತಮವಾಗಿದ್ದವು. ಆದರೆ, ಈಗ ಬೆಳೆದಿರುವ ಬೆಳೆಗಳಿಗೆ ಮಳೆ ಬೇಕಾಗಿದೆ. ತಾಲೂಕಿನ 9 ಸಾವಿರ ರೈತರ ಪೈಕಿ 6 ಸಾವಿರ ರೈತರು ಮಾತ್ರ ಬೆಳೆ ವಿಮೆ ಮಾಡಿಸಿದ್ದಾರೆ. ಎಲ್ಲರೂ ಬೆಳೆ ವಿಮೆ ಮಾಡಿಸಿದರೆ ಉತ್ತಮ.| ಕೇಶವರೆಡ್ಡಿ, ಸಹಾಯಕ ಕೃಷಿ ನಿರ್ದೇಶಕರು, ಗುಡಿಬಂಡೆ
ಬೆಳೆಗಳಿಗೆ ಸದ್ಯದ ಪರಿಸ್ಥಿತಿಯಲ್ಲಿ ಮಳೆ ಅವಶ್ಯಕತೆ ಇದೆ. ಆದರೆ ಮಳೆ ಬರುತ್ತಿಲ್ಲ. ಈಗಾಗಲೇ ಇಟ್ಟಿರುವ ಬೆಳೆಗಳು ಸಂಪೂರ್ಣವಾಗಿ ಬಾಡಿಹೋಗಿವೆ. ಈ ಕೂಡಲೇ ಕಂದಾಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ಮಾಡಬೇಕು. ಕಳೆದ ವರ್ಷ ಸಹ ಸಂಪೂರ್ಣವಾಗಿ ಬರ ಬಂದಿದ್ದರೂ ಬೆಳೆ ವಿಮೆ ಮಾಡಿಸಿ ಪರಿಹಾರ ಕೊಟ್ಟಿಲ್ಲ. ಕೂಡಲೇ ಪರಿಹಾರ ನೀಡಬೇಕು. | ಚಿಕ್ಕನಾರಾಯಣಪ್ಪ, ರೈತ ಬೆಣ್ಣೆಪರ್ತ