ಕೆರೆ ಒಡೆದು ಬೆಳೆ ಹಾನಿ

24blrp2
Published on

ಬೇಲೂರು: ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಾಫಿ ಎಸ್ಟೇಟ್‌ನಲ್ಲಿ ಕಟ್ಟಿಸಿದ್ದ ಕೆರೆ ಒಡೆದು ಸಾಕಷ್ಟು ಬೆಳೆ ನಷ್ಟ ಉಂಟಾಗಿದೆ.


ತಾಲೂಕಿನ ಉತ್ತೊಳಲು ಗ್ರಾಮದಲ್ಲಿ ಕಾಫಿ ಎಸ್ಟೇಟ್‌ನಲ್ಲಿದ್ದ ಕೆರೆಯಲ್ಲಿ ಹೆಚ್ಚು ನೀರು ಸಂಗ್ರಹವಾಗಿದ್ದರಿಂದ, ಬುಧವಾರ ಕೆರೆ ದಿಢೀರ್ ಒಡೆದು ಪ್ರವಾಹದ ರೀತಿ ಬೆಳೆ ಜಮೀನಿನ ಮೇಲೆ ಹರಿದಿದೆ. ಇದರಿಂದ ಸಾಕಷ್ಟು ಬೆಳೆ ನಷ್ಟವಾಗಿದೆ.


ಉತ್ತೊಳಲು ಗ್ರಾಮದ ರೈತ ಈಶ್ವರ್ ಮಾತನಾಡಿ, ಅರೇಹಳ್ಳಿ ಹೋಬಳಿ ತುಂಬುದೇವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉತ್ತೊಳಲು ಗ್ರಾಮದ ಸಮೀಪವಿರುವ ಕಾಫಿ ಎಸ್ಟೇಟ್‌ವೊಂದರಲ್ಲಿ ಅವೈಜ್ಞಾನಿಕವಾಗಿ ನಮ್ಮ ಜಮೀನುಗಳಿಗೆ ಹೊಂದಿಕೊಂಡಂತೆ ಕಟ್ಟಿಸಿರುವ ಕೆರೆ ಒಡೆದು ನೀರೆಲ್ಲ ಜಮೀನುಗಳಿಗೆ ಹರಿದಿದೆ. ಬೆಳೆಗಳು ಹಾಗೂ ಗದ್ದೆಯಲ್ಲಿ ಬಿತ್ತನೆಗಾಗಿ ಮಡಿ ಮಾಡಿದ್ದ ಭತ್ತದ ಸಸಿಗಳೆಲ್ಲ ನೀರಿನಲ್ಲಿ ಕೊಚ್ಚಿ ಹೋಗಿವೆ. ಮರಳು ಮತ್ತು ಕೆಸರು ತುಂಬಿಕೊಂಡಿರುವುದರಿಂದ ಮಂಜಪ್ಪ, ಚಂದ್ರೇಗೌಡ, ಬಸವರಾಜು, ಸೀತಮ್ಮ, ಯು.ಎಂ.ಇಂದಿರಾ, ಯು.ಡಿ ಮಂಜುನಾಥ್ ಅವರ 12 ಎಕರೆ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯದಂತಾಗಿದೆ. ಸಂಬಂಧಿಸಿದ ಕಾಫಿ ಎಸ್ಟೇಟ್ ಮಾಲೀಕರು ನಷ್ಟ ಭರಿಸಬೇಕು ಎಂದು ಒತ್ತಾಯಿಸಿದ್ದಾರೆ.


ರೈತ ಕುಪ್ಪಸ್ವಾಮಿ ಯಾದವ್ ಮಾತನಾಡಿ, ಹಲವಾರು ವರ್ಷಗಳಿಂದ ಜಮೀನನ್ನೇ ನಂಬಿ ಬದುಕುತ್ತಿದ್ದೇವೆ. ಏಕಾಏಕಿ ನೀರೆಲ್ಲ ಜಮೀನುಗಳಿಗೆ ನುಗ್ಗಿದ್ದರಿಂದ ನಾಟಿ ಮಾಡಬೇಕಾಗಿದ್ದ ಭತ್ತದ ಪೈರು ಸಂಪೂರ್ಣವಾಗಿ ಕೆಸರು ಮಣ್ಣಿನಡಿ ಹೂತು ಹೋಗಿವೆ. ಹಾಗಾಗಿ ಬೆಳೆ ಬೆಳೆಯಲು ಸಾಧ್ಯವಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.
ಸೀತಮ್ಮ, ಅಣ್ಣೇಗೌಡ, ಚಂದ್ರಶೇಖರ್, ಗಾಯತ್ರಿ, ಸುಮಾ, ಮಂಜುಳಾ, ಪಾರ್ವತಿ, ರುದ್ರೇಶ್, ರಾಜಪ್ಪ, ದರ್ಶನ್, ಮನೋಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net