ಬೆಳೆ ಉಳಿಸಿ ಮನೆ ಬೀಳಿಸಿದ ಮಳೆ

143
Published on

ಜಗಳೂರು: ತಾಲೂಕಿನಾದ್ಯಂತ ಮಂಗಳವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ರೈತರ ಪಾಲಿಗೆ ವರದಾನವಾಗಿ ಪರಿಣಮಿಸಿದ್ದರೆ, ಮತ್ತೊಂದೆಡೆ ಮನೆ, ಬೆಳೆ, ತೋಟಗಳಲ್ಲಿ ಅಪಾರ ಹಾನಿ ಮಾಡಿದೆ.

ಪಟ್ಟಣದ ಸೇರಿದಂತೆ ತಾಲೂಕಿನ ಗ್ರಾಮಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದ ಹಿನ್ನೆಲೆಯಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಪಾದಚಾರಿಗಳು ಪರದಾಡುವಂತಾಯಿತು.

ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸಿದರು. ರಸ್ತೆಯ ತಗ್ಗು ಪ್ರದೇಶದಲ್ಲಿ ಮಳೆ ನೀರು ನಿಂತಿತ್ತು. ಪಟ್ಟಣದ ಕೊಳಚೆ ಪ್ರದೇಶಗಳಲ್ಲಿ ನೀರು ನುಗ್ಗಿದ್ದರಿಂದ ನಿವಾಸಿಗಳು ಪರದಾಡಿದರು.

ಕಳೆದೊಂದು ವಾರದಿಂದ ಮಳೆ ಇಲ್ಲದೆ ಬೆಳೆಗಳೆಲ್ಲ ಬಾಡುತ್ತಿದ್ದವು. ಮಳೆಯಿಲ್ಲದೆ ಕಂಗಾಲಾಗಿದ್ದ ರೈತರಿಗೆ ಆಶ್ಲೇಷ ಮಳೆ ಒಂದೇ ರಾತ್ರಿ ಅಂದಾಜು 10.7 ಮಿ.ಮೀ. ಸುರಿದು ನೆಮ್ಮದಿ ತಂದಿದೆ. ಇದು ಕಳೆದ ಎರಡು ವರ್ಷಗಳಲ್ಲಿ ಸುರಿದ ಅತ್ಯಂತ ದೊಡ್ಡ ಪ್ರಮಾಣದ ಮಳೆ ಎನ್ನಬಹುದು. 2022ರಲ್ಲಿ ಭಾರಿ ಪ್ರಮಾಣದ ಮಳೆಯಾಗಿತ್ತು. ನಂತರದ ದಿನಗಳಲ್ಲಿ ಈ ಪ್ರಮಾಣದ ಮಳೆಯಾಗಿದ್ದು ವಿರಳ. ಈ ಮಳೆಯಿಂದ ಬೆಳೆಗಳಿಗೆ ಅನುಕೂಲವಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಮನೆಗಳಿಗೆ ಭಾಗಶಃ ಹಾನಿ:
ತಾಲೂಕಿನ ಚಿಕ್ಕಮ್ಮನಹಟ್ಟಿ ಸುಮಿತ್ರಮ್ಮ, ಕೆಳಗೋಟೆ ಗ್ರಾಮದ ರಾಧಮ್ಮ, ಚಿಕ್ಕಮ್ಮಲ್ಲನಹೊಳೆ ಶಾರದಮ್ಮ, ಜಗಳೂರು ಗೊಲ್ಲರಹಟ್ಟಿ ಗಿರಿಜಮ್ಮ ಮತ್ತಿತರ ಗ್ರಾಮಗಳಲ್ಲಿ 25ಕ್ಕೂ ಅಧಿಕ ಮನೆಗಳು ಭಾಗಶಃ ಹಾನಿಗೊಂಡಿವೆ. ರಾತ್ರಿ ಇಡೀ ಸುರಿದ ಮಳೆಗೆ ಕುಟುಂಬಸ್ಥರು ಆತಂಕದಲ್ಲಿಯೇ ರಾತ್ರಿ ಕಳೆದಿದ್ದಾರೆ. ಆದರೆ, ಪ್ರಾಣಾಪಾಯ ಸಂಭವಿಸಿಲ್ಲ.

ತಾಲೂಕಿನ ಕಸಬಾ ಹೋಬಳಿಯ ಅರಿಶಿಣಗುಂಡಿ ಗ್ರಾಮದಲ್ಲಿ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಕಟ್ಟಿಗೆಹಳ್ಳಿ, ಬಿದರಕೆರೆ, ಕಲ್ಲೇದೇವರಪುರ, ಹನುಮಂತಾಪುರ, ಲಿಂಗಣ್ಣನಹಳ್ಳಿ, ತೋರಣಗಟ್ಟೆ, ಸೊಕ್ಕೆ ಹೋಬಳಿಯ ಲಕ್ಕಂಪುರ, ಗಡಿಮಾಕುಂಟೆ, ಕ್ಯಾಸೇನಹಳ್ಳಿ, ಬಿಳಿಚೋಡು ಹೋಬಳಿಯ ಗುತ್ತಿದುರ್ಗ, ದೇವಿಕೆರೆ, ಮೆದಗಿನಕೆರೆ, ಪಲ್ಲಾಗಟ್ಟೆ, ದಿದ್ದಿಗೆ, ದೊಣೆಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳು, ಹನುಮಂತಾಪುರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಭಾರಿ ಪ್ರಮಾಣದ ಮಳೆಯಾಗಿದ್ದು, ಕೆರೆ ಕಟ್ಟೆಗಳು ಭರ್ತಿಯಾಗಿವೆ.

ಪಟ್ಟಣದ ತಗ್ಗು ಪ್ರದೇಶಗಳಲ್ಲಿನ ನಿವಾಸಿಗಳಿಗೆ ಸಮಸ್ಯೆ ಉಂಟು ಮಾಡಿದೆ. ತಗ್ಗು ಪ್ರದೇಶಗಳಲ್ಲಿ ಲೇಔಟ್ ನಿರ್ಮಾಣ ಮಾಡಿದ್ದು, ಮನೆ ಕಟ್ಟಿಕೊಂಡವರು ಪರಿತಪಿಸುವಂತಾಗಿದೆ.

ಬಡಾವಣೆಗಳು ಜಲಾವೃತ:
ಪಟ್ಟಣದ ಪ್ರತಿಷ್ಠಿತ ಬಡಾವಣೆಗಳು ಎನಿಸಿಕೊಂಡಿರುವ ಕೃಷ್ಣ ಬಡಾವಣೆ, ದೇವೇಗೌಡ ಬಡಾವಣೆ, ಅಶ್ವಿನಿ ಬಡಾವಣೆ, ಮುದ್ದಣ್ಣ ಲೇಔಟ್, ಜೆಡಿ ಲೇಔಟ್, ಅಬ್ದುಲ್ ಲತೀಫ್ ಸಾಬ್ ಬಡವಾಣೆ, ತುಮಾಟಿ ಲೇಔಟ್‌ಗಳು ತಗ್ಗು ಪ್ರದೇಶದಲ್ಲಿರುವುದರಿಂದ ಜಲಾವೃತಗೊಂಡಿವೆ.

ಕೆರೆಗಳಿಗೆ ಜೀವಕಳೆ
ತಾಲೂಕಿನ ಕೆರೆ, ಕಟ್ಟೆ, ಗುಂಡಿಗಳಲ್ಲಿ ನೀರು ಸಂಗ್ರಹವಾಗಿದ್ದು ಜೀವಕಳೆ ಬಂದಿದೆ. ಗಡಿಮಾಕುಂಟೆ ಕೆರೆ, ಕೆಳಗೋಟೆ ಕೆರೆ, ಜಗಳೂರು ಕೆರೆ, ತಮ್ಮಲೇಹಳ್ಳಿ ಕೆರೆ, ಹೊಸಕೆರೆ, ಕ್ಯಾಸೇನಹಳ್ಳಿ, ಗೌರಿಪುರ ಕೆರೆ, ತುಪ್ಪದಹಳ್ಳಿ, ಲಕ್ಕಂಪುರ, ಬಿಳಿಚೋಡು, ಮುಷ್ಟಿಗರಹಳ್ಳಿ, ಚಿಕ್ಕಅರಕೆರೆ, ದೊಡ್ಡಅರಕೆರೆ, ಚದರಗೊಳ್ಳ ಮತ್ತಿತರ 30 ಕೆರೆಗಳಿಗೆ ಈಗಾಗಲೇ 57 ಕೆರೆ ತುಂಬಿಸುವ ಏತ ಕಾಮಗಾರಿಯಿಂದ ಶೇ. 30ರಷ್ಟು ನೀರು ಹರಿದಿದೆ. ಜತೆಗೆ ರಾತ್ರಿ ಸುರಿದ ಮಳೆಯಿಂದ ಶೇ.50ರಷ್ಟು ಕೆರೆಗಳು ಭರ್ತಿಯಾಗಿದ್ದು ರೈತರಲ್ಲಿ ಸಂತಸ ಮನೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net