

ಬೇಲೂರು: ತಾಲೂಕಿನ ಉದೇವಾರ ಗ್ರಾಮದ ಗಡಿ ಭಾಗದ ಗುಡ್‌ಬೆಟ್ಟ ಎಸ್ಟೇಟ್-ಬಾಳೇಗದ್ದೆ ವ್ಯಾಪ್ತಿಯ ಕಾಫಿ ತೋಟಗಳಿಗೆ ಕಾಡಾನೆಗಳ ಹಿಂಡು ನುಗ್ಗಿದ್ದರಿಂದ ಅಡಕೆ, ಕಾಫಿ, ಬಾಳೆ ಬೆಳೆ ಸೇರಿದಂತೆ ಇತರ ಬೆಳೆಗಳು ನಷ್ಟವಾಗಿದ್ದು, ಕಾಡಾನೆಗಳನ್ನು ಇಲ್ಲಿಂದ ಓಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಳೆದ ಹದಿನೈದು ದಿನಗಳಿಂದ ಈ ಭಾಗದ ವಿವಿಧ ಗ್ರಾಮಗಳ ಕಾಫಿ ತೋಟ ಮತ್ತು ಸಮೀಪದ ಕಾಡುಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡಿನಿಂದಾಗಿ ಮಲೆನಾಡು ಭಾಗದಲ್ಲಿ ಬೆಳೆಗಾರರು, ರೈತರು ಬೆಳೆ ಕಳೆದು ಕೊಳ್ಳುವಂತಾಗಿದೆ. ತಾಲೂಕಿನ ಗಡಿ ಭಾಗದ ಗ್ರಾಮಗಳಾದ ಉದೇವಾರ ಸಮೀಪದ ಗುಡ್‌ಬೆಟ್ಟ ಎಸ್ಟೇಟ್, ಬಾಳೆಗದ್ದೆ ಎಸ್ಟೇಟ್, ಪಕ್ಕದ ಮುತ್ತಣ್ಣ ಎಂಬುವರ ಜಮೀನಿನ ಬಳಿ ಇರುವ ಕಾಡುಗಳೇ ಆನೆಗಳಿಗೆ ಆಶ್ರಯ ತಾಣವಾಗಿದ್ದು, ಇಲ್ಲಿಂದಲೇ ಕಾಡಾನೆಗಳು ಸಂಚಾರ ಪ್ರಾರಂಭಿಸಿ ಸಮೀಪದ ರೈತರ ಜಮೀನುಗಳಿಗೆ ರಾತ್ರಿ ವೇಳೆ ಹಿಂಡು ಹಿಂಡಾಗಿ ದಾಳಿ ಮಾಡುವುದರಿಂದ ಬೆಳೆ ನಾಶವಾಗುತ್ತಿದೆ. ಆದ್ದರಿಂದ ಈ ಭಾಗದ ಬೆಳೆಗಾರರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕಾಡಾನೆಗಳನ್ನು ಶಾಶ್ವತವಾಗಿ ಓಡಿಸಿ ಮಲೆನಾಡು ಭಾಗದ ರೈತರಿಗೆ, ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ಗಮನ ಹರಿಸಬೇಕಿದೆ ಎಂಬುದು ಮಲೆನಾಡಿಗರ ಆಗ್ರಹವಾಗಿದೆ.
ಬಾಳೆಗದ್ದೆ ಗ್ರಾಮದ ರೈತ ಗಿರೀಶ್ ಮಾತನಾಡಿ, ಕಾಫಿಯೊಂದಿಗೆ ಅಡಕೆ ಗಿಡಗಳನ್ನು ತೋಟದಲ್ಲಿ ನಾಟಿ ಮಾಡಿ ಐದಾರು ವರ್ಷಗಳು ಕಳೆದಿವೆ. ಗಿಡದಲ್ಲಿ ಹೊಂಬಾಳೆ ಮೂಡುತಿದ್ದು, ಇಂತಹ ಸಮಯದಲ್ಲಿ ಕಾಡಾನೆಗಳು 1 ಎಕರೆಯಲ್ಲಿ ಬೆಳೆದ ಕಾಫಿ, ಅಡಕೆ ಗಿಡಗಳನ್ನು ರಾತ್ರೋರಾತ್ರಿ 20ಕ್ಕೂ ಹೆಚ್ಚಿನ ಕಾಡಾನೆಗಳ ಹಿಂಡು ದಾಳಿ ಮಾಡಿ ನಾಶ ಪಡಿಸಿವೆ. ಅಲ್ಲದೆ ಮನೆಯಿಂದ ತೋಟಕ್ಕೆ ಬಂದರೆ ಪುನಃ ಜೀವಂತವಾಗಿ ವಾಪಸ್ ಹೋಗುತ್ತೇವೆ ಎಂಬ ಚಿಂತೆಯಲ್ಲಿ ದಿನ ದೂಡುವಂತಾಗಿದೆ. ಆದ್ದರಿಂದ ಕಾಡಾನೆಗಳ ಸಮಸ್ಯೆಯಿಂದ ಹೊರ ಬರುವುದಕ್ಕೆ ಸರ್ಕಾರ ಸೋಲಾರ್ ಬೇಲಿ ಮಾಡಿಕೊಡಬೇಕು. ಅಥವಾ ಕಾಡಾನೆಗಳನ್ನು ಶಾಶ್ವತವಾಗಿ ಇಲ್ಲಿಂದ ಸ್ಥಳಾಂತರಿಸಬೇಕು ಎಂದರು.