ಬೆಳೆ ಸಮೀಕ್ಷೆ ಪ್ರಾರಂಭ : ಮುಂಗಾರು ಹಂಗಾಮಿನಲ್ಲಿ ಕಾರ್ಯ : ಸ್ವಯಂ ರೈತರಿಂದಲೇ ಸರ್ವೇ

New Project (3)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಬೆಳೆ ಸಾಲ, ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆ ಮತ್ತು ಬೆಳೆ ಪರಿಹಾರ ಹಾಗೂ ಸರ್ಕಾರದ ನಾನಾ ಯೋಜನೆಗಳ ಸವಲತ್ತುಗಳನ್ನು ಪಡೆಯಲು ಅಗತ್ಯವಾಗಿರುವ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಆರಂಭವಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ರೈತರು ಬೆಳೆ ಸಮೀಕ್ಷೆ ಕಾರ್ಯದಲ್ಲಿ ಸ್ವತಃ ತೊಡಗಿಸಿಕೊಳ್ಳಬಹುದು. ಜಮೀನಿನ ಬೆಳೆಯ ವಿವರಗಳನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.

ಅಪ್‌ಲೋಡ್ ಮಾಡುವುದು ಹೇಗೆ?

ಪ್ಲೇ ಸ್ಟೋರ್‌ನಲ್ಲಿ ರೈತರ ಬೆಳೆ ಸಮೀಕ್ಷೆ 2025-26 ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ಆರ್ಥಿಕ ವರ್ಷ ಮತ್ತು ಋತು ದಾಖಲಿಸಬೇಕು. ರೈತರ ಹೆಸರು, ಮೊಬೈಲ್ ಸಂಖ್ಯೆ ನಮೂದಿಸಿ ಸಕ್ರಿಯಗೊಳಿಸುವುದು. ನಂತರ ನಮೂದಿಸಿದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಆ ಒಟಿಪಿಯನ್ನು ದಾಖಲಿಸಿ ಬೆಳೆ ವಿವರ, ಪಹಣಿ ಮತ್ತು ಮಾಲೀಕರ ವಿವರ ಮೊದಲಾದವುಗಳ ಮಾಹಿತಿ ನೀಡಿ ಬೆಳೆ ಸರ್ವೆ ಪ್ರಾರಂಭ ಕ್ಲಿಕ್ ಮಾಡುವುದು. ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿ, ಸರ್ವೇ ನಂಬರ್ ನಮೂದಿಸಿ, ಹಿಸ್ಸಾ ಇದ್ದರೆ ಅದನ್ನೂ ಆಯ್ಕೆ ಮಾಡುವುದು. ಮಾಲೀಕರ ಹೆಸರು ಆಯ್ಕೆ ಮಾಡಿ ಹಾಗೂ ಕ್ಷೇತ್ರವನ್ನು ನಮೂದಿಸಿ. ಮಾಲೀಕರ ಪರ ಇನ್ನೊಬ್ಬರು ಬೆಳೆ ದಾಖಲೆ ಮಾಡುತ್ತಿದ್ದರೆ, ರೈತರ ಪರವಾಗಿ ಬೆಳೆ ಮಾಹಿತಿ ದಾಖಲಿಸುತ್ತಿದ್ದೇನೆಂದು ಆಯ್ಕೆ ಮಾಡಬೇಕು. ರೈತರ ಮೊಬೈಲ್ ನಂಬರ್ ದಾಖಲಿಸಿ ಮಾಹಿತಿಯನ್ನು ಡೌನ್‌ಲೋಡ್ ಮಾಡಿ, ರೈತರ ಕಷಿ ಭೂಮಿಗೆ ಹೋಗಿ ಸರ್ವೇ ನಂಬರ್, ಗಡಿ ರೇಖೆಯೊಳಗೆ ನಿಂತು ವಿವರ ದಾಖಲಿಸಿ, ಫೋಟೋ ತೆಗೆದು ಮಾಹಿತಿಯನ್ನು ಸೇರಿಸಬೇಕು.

ಮಾಹಿತಿ ಕೊರತೆ

ಬೆಳೆ ಸಮೀಕ್ಷೆ ಎಂದ ಕೂಡಲೇ ಹೆಚ್ಚಿನ ರೈತರು ಒತ್ತಡ ಅನುಭವಿಸುತ್ತಾರೆ. ರೈತರೇ ಮಾಡಬಹುದಾದ ಇದಕ್ಕೆ ಮೊಬೈಲ್‌ನ ಬಗ್ಗೆ ಜ್ಞಾನ ಇರಬೇಕು. ಆದರೆ ಗ್ರಾಮೀಣ ಭಾಗದ ರೈತರಲ್ಲಿ ಮೊಬೈಲ್ ಅರಿವು ಕಡಿಮೆ, ಜತೆಗೆ ಸಾಕಷ್ಟು ಮಾಹಿತಿ ಕೊರತೆ, ನೆಟ್‌ವರ್ಕ್ ಸಮಸ್ಯೆ, ಬೆಳೆ ಸಮೀಕ್ಷೆ ವೇಳೆ ಕಣ್ತಪ್ಪಿನಿಂದ ಬೆಳೆ ನಮೂದು ಸರಿಯಾಗಿ ನಡೆಯದಿದ್ದರೆ ಭವಿಷ್ಯದಲ್ಲಿ ಯೋಜನೆಗಳಿಗೆ ಫಲಾನುಭವಿಗಳಾಗಲು ಸಾಧ್ಯವಿಲ್ಲ. ಬೆಳೆ ವಿಮೆ ಕಟ್ಟುವ ವಿಚಾರದಲ್ಲಿ ಬೆಳೆ ಸಮೀಕ್ಷೆ ಸರಿಯಾಗಿ ಆಗದ ಕಾರಣ ಹಲವರು ಇದರಿಂದ ವಂಚಿತರಾಗಿದ್ದಾರೆ. ಇನ್ನು ಇಲಾಖೆಯಿಂದ ತಾತ್ಕಾಲಿಕವಾಗಿ ನೇಮಿಸಲ್ಪಡುವ ಪಿಆರ್ ಒಗಳು ಬಾಕಿ ಇರುವ ಬೆಳೆ ಸಮೀಕ್ಷೆ ನಡೆಸುತ್ತಾರೆ. ಇಲ್ಲೂ ಕೂಡ ಎಡವಟ್ಟುಗಳು ಉಂಟಾಗುವ ಸಾಧ್ಯತೆ ಇದೆ.

ಪ್ರತಿ ಬೆಳೆಗೆ ಕೋಡ್ ನಂಬರ್

ಬೆಳೆ ಸಮೀಕ್ಷೆಗೆ 323 ಬೆಳೆಗಳು ಒಳಪಟ್ಟಿವೆ. ಪ್ರತಿ ಬೆಳೆಗೆ ಕೋಡ್ ನಂಬರ್ ನೀಡಲಾಗಿದೆ. ರೈತರು ಆಯಾ ಸರ್ವೇ ನಂಬರ್‌ನ ಲೊಕೇಶನ್‌ನಲ್ಲಿ ನಿಂತು ಆನ್‌ಲೈನ್ ಮೂಲಕ ಅಗತ್ಯ ವಿವರ ಸಲ್ಲಿಸಬೇಕು. ಪ್ರತಿ ಸರ್ವೇ ನಂಬರ್ ಬೆಳೆ ಸಮೀಕ್ಷೆಗೆ ಒಳಪಡಬೇಕು. ಬೆಳೆ ಸಮೀಕ್ಷೆಗೆ ಆಂಡ್ರಾಯ್ಡಾ ಮೊಬೈಲ್ ಕಡ್ಡಾಯ.

ದೀರ್ಘಾವಧಿ ಬೆಳೆಗಳಿಗೆ ಪ್ರತಿ ವರ್ಷ ಬೆಳೆ ಸಮೀಕ್ಷೆ ನಡೆಸುವ ಪ್ರಕ್ರಿಯೆ ಮಾಡಬಾರದು. ಇಂತಹ ಬೆಳೆಗಳಿಗೆ 10 ವಷರ್ಕ್ಕೊಮ್ಮೆ ಬೆಳೆ ಸಮೀಕ್ಷೆ ನಡೆಸಿದರೆ ಸಾಕು. ಬೆಳೆ ಸಮೀಕ್ಷೆ ಕುರಿತು ರೈತರಿಗೆ ಹೆಚ್ಚಿನ ಮಾಹಿತಿ ನೀಡುವ ಅಗತ್ಯವಿದೆ. ಸುದರ್ಶನ ಕಡಿರುದ್ಯಾವರ ಕೃಷಿಕ ಸರ್ಕಾರ ಈ ವರ್ಷದ ಬೆಳೆ ಸಮೀಕ್ಷೆ ಜಾರಿ ಮಾಡಿದ್ದು, ಇದನ್ನು ರೈತರೇ ನಿರ್ವಹಿಸಬಹುದಾಗಿದೆ. ಬಾಕಿ ಉಳಿಯುವ ಬೆಳೆ ಸಮೀಕ್ಷೆಗೆ ಇಲಾಖೆಯಿಂದ ಪಿಆರ್‌ಒಗಳನ್ನು ನೇಮಿಸುವ ಪ್ರಕ್ರಿಯೆ ನಡೆಯುತ್ತಿದೆ. ವೀರಭದ್ರಪ್ಪ ಎ.ಡಿ. ಬೆಳ್ತಂಗಡಿ ಕೃಷಿ ಇಲಾಖಾ ಸಹಾಯಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net