

* 10,964 ಬೆಳೆಗಾರರಿಗೆ 25 ಕೋಟಿ ರೂ. ಪಾವತಿ
* ಪ್ರತಿ ಹೆಕ್ಟೇರ್‌ಗೆ ಗರಿಷ್ಠ 80 ಸಾವಿರದವರೆಗೆ ಜಮೆ
ರಾಮನಗರ
ಪ್ರಕೃತಿ ಹಾವು ಏಣಿ ಆಟಕ್ಕೆ ನಲುಗಿದ್ದ ಮಾವು ಬೆಳೆಗಾರರಿಗೆ ಈ ಬಾರಿ ವಿಮೆ ಕೈ ಹಿಡಿದಿದೆ. 2023-24ನೇ ಸಾಲಿನಲ್ಲಿ ಉಂಟಾದ ನಷ್ಟವನ್ನು ವಿಮಾ ಕಂಪನಿ ಕಟ್ಟಿಕೊಟ್ಟಿದ್ದು, ಬರೋಬ್ಬರಿ 25 ಕೋಟಿ ರೂ. ಮಾವು ಬೆಳೆಗಾರರ ಖಾತೆಗೆ ಜಮೆ ಆಗಿದೆ.
ಮಾವು ಬೆಳೆಯಲ್ಲಿ ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿ ಇದ್ದರೂ, ಮೊದಲಿಗೆ ಮಾರುಕಟ್ಟೆ ಬರುವ ಹೆಗ್ಗಳಿಕೆ ಹೊಂದಿರುವ ರಾಮನಗರ ಮಾವಿಗೆ ಸ್ಥಳೀಯವಾಗಿ ಮತ್ತು ವಿದೇಶದಲ್ಲಿಯೂ ಉತ್ತಮ ಬೇಡಿಕೆ ಇದೆ. ಆದರೆ ಹವಾಮಾನ ವೈಪರೀತ್ಯ ಕಳೆದ ಹಲವು ವರ್ಷಗಳಿಂದಲೂ ಕಾಡುತ್ತಿದ್ದು, 2023-24ನೇ ಸಾಲಿನಲ್ಲಿ ವಿಮೆ ಮಾಡಿಸಿದ್ದ 10,964 ಬೆಳೆಗಾರರಿಗೆ 25 ಕೋಟಿ ರೂ. ಪಾವತಿ ಮಾಡಲಾಗಿದೆ. ಇದರಿಂದ ನಷ್ಟದ ಪ್ರಮಾಣ ಕೊಂಚ ತಗ್ಗಿದೆ.
ಮಾವು ಬೆಳೆಗೆ ವಿಮೆ ನೋಂದಣಿಗೆ ರೈತರ ವಂತಿಕೆಯನ್ನು ಹೆಚ್ಚಳ ಮಾಡಲಾಗಿತ್ತು. ಇದು ವಿವಾದ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ರೈತರ ವಂತಿಕೆಯನ್ನು ಶೇ.5ಕ್ಕೆ ನಿಗದಿಪಡಿಸಿ ಆದೇಶ ಹೊರಡಿಸಿತ್ತು. ಇದರಿಂದಾಗಿ ಬೆಳೆಗಾರರು ವಂತಿಗೆಯಾಗಿ ಪ್ರತಿ ಹೆಕ್ಟೇರ್‌ಗೆ ಶೇ.5ರಂತೆ ವಿಮಾ ಕಂಪನಿ ಎಚ್‌ಡಿಎಫ್ ಸಿ ಆರ್‌ಜಿಒಗೆ 4 ಸಾವಿರ ರೂ. ಪಾವತಿಸಿದ್ದಾರೆ. ಕಂಪನಿಗೆ ರೈತರಿಂದ ಒಟ್ಟು 2.49 ಕೋಟಿ ರೂ. ಪ್ರೀಮಿಯಂ ಪಾವತಿಯಾಗಿದೆ.
ಬೆಳೆಗಾರರ ವಿಮೆಗಾಗಿ ರಾಜ್ಯ ಸರ್ಕಾರ ಹೆಕ್ಟೇರ್‌ಗೆ ಶೇ. 17.50ರಂತೆ 14 ಸಾವಿರ ರೂ. ಮತ್ತು ಮತ್ತು ಕೇಂದ್ರ ಸರ್ಕಾರ ಶೇ 12.50ರಂತೆ 10 ಸಾವಿರ ಪ್ರೀಮಿಯಂ ಮೊತ್ತವನ್ನು ವಿಮಾ ಕಂಪನಿಗೆ ಪಾವತಿಸಿವೆ. ಹವಾಮಾನ ವೈಪರೀತ್ಯದಿಂದಾಗಿ ಬೆಳೆ ನಷ್ಟ ಅನು‘ವಿಸಿದ ರೈತರಿಗೆ ಪ್ರತಿ ಹೆಕ್ಟೇರ್‌ಗೆ ಗರಿಷ್ಠ 80 ಸಾವಿರದವರೆಗೆ ವಿಮೆ ಮೊತ್ತ ಪಾವತಿಯಾಗಿದೆ.
ವರ್ಷದಿಂದ ವರ್ಷಕ್ಕೆ ವಿಮೆ ಮಾಡಿಸುವ ಮಾವು ಬೆಳೆಗಾರರ ಸಂಖ್ಯೆ ಹೆಚ್ಚುತ್ತಲೇ ಇತ್ತು. ಆದರೆ, 2024-25ನೇ ಸಾಲಿನಲ್ಲಿ ಇದರ ಪ್ರಮಾಣ ಗಣನೀಯವಾಗಿ ಕುಸಿತ ಕಂಡಿದೆ. ಈ ಸಾಲಿನಲ್ಲಿ 4927.60 ಹೆಕ್ಟೇರ್ ಪ್ರದೇಶದ 6,591 ರೈತರು ಮಾತ್ರ ನೋಂದಣಿ ಮಾಡಿಸಿದ್ದು, 1.99 ಕೋಟಿ ರೂ. ವಂತಿಗೆ ಪಾವತಿಸಿದ್ದಾರೆ. ಆದರೆ, ಇದು ಆಶಾದಾಯಕ ಬೆಳವಣಿಗೆ ಅಲ್ಲ ಎನ್ನುವ ತೋಟಗಾರಿಕೆ ಅಧಿಕಾರಿಗಳು, ಪ್ರಕೃತಿ ವಿಕೋಪದಿಂದ ಆಗುವ ನಷ್ಟ ತುಂಬಿಕೊಳ್ಳಲು ಬೆಳೆ ವಿಮೆ ತುಂಬ ಅನುಕೂಲರವಾಗಿದೆ. ಈ ಯೋಜನೆಯಿಂದ ಹಿಂದೆ ಸರಿಯಬಾರದು ಎನ್ನುವ ಸಲಹೆ ನೀಡಿದ್ದಾರೆ.
ಜಿಲ್ಲೆಯಲ್ಲಿ 2023ನೇ ಸಾಲಿನಲ್ಲಿ ವಿಮೆ ಮಾಡಿಸಿದ್ದು ಒಟ್ಟು 11,949 ಮಾವು ಬೆಳೆಗಾರರು. ಆದರೆ ಇವರಲ್ಲಿ 10,964 ಮಂದಿಗೆ ಮಾತ್ರ ವಿಮೆ ಮೊತ್ತ ದೊರೆತಿದೆ. ಉಳಿದ 985 ಮಂದಿಗೆ ವಿವಿಧ ಕಾರಣಗಳಿಗಾಗಿ ವಿಮೆ ಸಿಕ್ಕಿಲ್ಲ. ಹವಾಮಾನ ವೈಪರೀತ್ಯದಿಂದಾದ ‘ಭಾರಿ ನಷ್ಟಕ್ಕೆ ವಿಮೆಯು ಆಸರೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ನಿರಾಸೆಯಾಗಿದೆ. ತಾಂತ್ರಿಕ ದೋಷ ಹಾಗೂ ದಾಖಲೆಗಳಲ್ಲಾಗಿರುವ ವ್ಯತ್ಯಾಸದಿಂದಾಗಿ ವಿಮೆ ನೋಂದಣಿ ಮಾಡಿಸಿದ್ದ 985 ರೈತರಿಗೆ ವಿಮೆ ಮೊತ್ತ ಪಾವತಿಯಾಗಿಲ್ಲ. ಆರ್‌ಟಿಸಿಯಲ್ಲಿ ಮಾವು ಬೆಳೆ ಬದಲು ರಾಗಿ ಸೇರಿ ಬೇರೆ ಬೆಳೆಗಳ ಹೆಸರು ಇದ್ದರೂ ವಿಮೆ ಸಿಗುವುದಿಲ್ಲ. ಇಂತಹ ಒಂದೊಂದೇ ಪ್ರಕರಣಗಳನ್ನು ಗುರುತಿಸಿ ಸರಿಪಡಿಸಿ ಅವರಿಗೆ ವಿಮೆ ಮೊತ್ತ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ವಿಮೆ ಮಾಡಿಸಿರುವುದರಿಂದ ಸಂಪೂರ್ಣ ನಷ್ಟವನ್ನು ತಪ್ಪಿಸಿದೆ. ಇದರಿಂದ ಸ್ವಲ್ಪ ಸಮಾ‘ಾನವೂ ಆಗಿದ್ದು, ಕಳೆದ ಬಾರಿ ಆಗಿದ್ದ ನಷ್ಟದ ಪ್ರಮಾಣದಲ್ಲಿ ಆಶಾದಾಯಕ ಪ್ರಮಾಣದಲ್ಲಿ ಪರಿಹಾರ ಸಿಕ್ಕಿದೆ. ಮಹೇಶ್, ಮಾವು ಬೆಳಗಾರ ರಾಮನಗರವಿಮೆ ಮಾಡಿಸುವುದರಿಂದ ರೈತರಿಗೆ ನಷ್ಟ ಕಡಿಮೆ ಆಗುತ್ತದೆ. ಈ ಬಾರಿ 25 ಕೋಟಿ ರೂ. ನಷ್ಟದ ರೂಪದಲ್ಲಿ ಪಾವತಿ ಮಾಡಲಾಗಿದೆ. ಆದರೆ, 2024-25ನೇ ಸಾಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ನೋಂದಣಿ ಆಗಿಲ್ಲ. ಎಂ.ಎಸ್.ರಾಜು, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ ರಾಮನಗರ
ಮಾವು ಬೆಳೆಯುವ ಪ್ರದೇಶ 30067 ಹೆಕ್ಟೇರ್
ಬೆಳೆಗಾರರು 18 ಸಾವಿರ
2023ರಲ್ಲಿ ವಿಮೆ ವ್ಯಾಪ್ತಿ 6162 ಹೆಕ್ಟೇರ್
ತಾಲೂಕು ವಾರು ಮಾಹಿತಿ (2023)
ತಾಲೂಕು ನೋಂದಣಿ ಮೊತ್ತ ಪಾವತಿ
ರಾಮನಗರ 4,539 10.16 ಕೋಟಿ
ಚನ್ನಪಟ್ಟಣ 2,565 5.35 ಕೋಟಿ
ಕನಕಪುರ 2,727 6.75 ಕೋಟಿ
ಮಾಗಡಿ 1,133 2.77 ಕೋಟಿ
ಒಟ್ಟು 10,964 25.05 ಕೋಟಿ