

ಸುಂಟಿಕೊಪ್ಪ: ಚರ್ಚ್ ಆಫ್ ಸೌತ್ ಇಂಡಿಯಾದ ದಕ್ಷಿಣ ಪ್ರಾಂತ್ಯದ ಸುಂಟಿಕೊಪ್ಪದಲ್ಲಿರುವ ಇಮ್ಯಾನುಯೆಲ್ ದೇವಾಲಯದಲ್ಲಿ ಭಾನುವಾರ ವಾರ್ಷಿಕ ಬೆಳೆ ಹಬ್ಬ ಶ್ರದ್ಧಾಭಕ್ತಿಯಿಂದ ನೆರವೇರಿತು.
ದೇವಾಲಯ ಹಾಗೂ ಆವರಣವನ್ನು ಕಬ್ಬು, ಭತ್ತದ ಪೈರು, ಬಾಳೆಗೊನೆ, ಹೂ-ಹಣ್ಣುಗಳಿಂದ ಸಿಂಗರಿಸಲಾಗಿತ್ತು. ಮೈಸೂರು ವಲಯದ ದೇವಾಲಯ ಸಭಾಪಾಲಕ ರೆ.ಫಾ.ಡೆನ್ನಿಯಲ್ ಕೌಡಿನ್ಯ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.
ಚರ್ಚ್ ಆಫ್ ಸೌತ್ ಇಂಡಿಯಾದ ದಕ್ಷಿಣ ಪ್ರಾಂತ್ಯದ ದೇವಾಲಯಗಳ ಕೊಡಗು ವಲಯಾಧ್ಯಕ್ಷ ಹಾಗೂ ಸಭಾಪಾಲಕ ರೆ.ಫಾ.ಜೈಸನ್‌ಗೌಡರ್ ಮಾತನಾಡಿ, ಸತ್ಯವೇದ ಅಥವಾ ಬೈಬಲಿನ ಪ್ರಕಾರ ಭಕ್ತರು ತಾವು ಬೆಳೆದ ಕೃಷಿ ಉತ್ಪನ್ನ ಹಾಗೂ ಫಲಗಳನ್ನು ಮೊದಲ ಕಾಣಿಕೆಯಾಗಿ ದೇವರಿಗೆ ಸರ್ಮಪಿಸುವುದು ಪದ್ಧತಿ, ನಂಬಿಕೆಯಾಗಿದೆ. ಅದರ ಮೂಲಕ ನಮ್ಮನ್ನು ನಾವು ದೇವರಿಗೆ ಪುನಾರಾವರ್ತಿ ಕಾಣಿಕೆಯಾಗಿ ಸರ್ಮಪಿಸಿಕೊಳ್ಳುವುದಾಗಿದೆ ಎಂದರು.
ಪೂಜಾ ವಿಧಿ ವಿಧಾನಗಳು, ವಿವಿಧ ಫಲಗಳ ಹರಾಜು ಪ್ರಕ್ರಿಯೆ ನಡೆದ ನಂತರ ಸಾಮೂಹಿಕ ಭೋಜನ ಆಯೋಜಿಸಲಾಗಿತ್ತು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸುಂಟಿಕೊಪ್ಪ ಸಭಾಪಾಲಕ ಜೋನಿಯಲ್ ಸುಹಾಸ್ ಇತರರಿದ್ದರು.