

ಬಿಡದಿ: ಬಾನಂದೂರು ಗ್ರಾಮದಲ್ಲಿ ಜೋಳ ಬೆಳೆದಿದ್ದ ರೈತನ ಜಮೀನಿನ ಮೇಲೆ ಕಾಡು ಹಂದಿಗಳು ದಾಳಿ ಮಾಡಿ ಅಪಾರ ಪ್ರಮಾಣದ ಬೆಳೆಯನ್ನು ನಾಶ ಪಡಿಸಿವೆ.
ಶಿವಲಿಂಗಯ್ಯ ಅವರ 2 ಎಕರೆಯಲ್ಲಿ ಬೆಳೆದಿದ್ದ ಬೇಬಿ ಕಾರ್ನ್ ಜೋಳವನ್ನು ರಾತ್ರಿ ವೇಳೆ ದಾಳಿ ಮಾಡಿ ತಿಂದು ನಾಶ ಪಡಿಸಿವೆ. ವಾರದಲ್ಲಿ ಜೋಳ ಕಟಾವಿಗೆ ಬರುತಿತ್ತು. ಇಂತಹ ಸಮಯದಲ್ಲಿ ಹಂದಿಗಳು ದಾಳಿ ಮಾಡಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ.
1 ಎಕರೆಯಷ್ಟು ಜೋಳವನ್ನು ಮುರಿದು ಹಾಕಿವೆ. ಇದರಿಂದಾಗಿ ಸಾವಿರಾರು ರೂಪಾಯಿ ನಷ್ಟವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕೆಂದು ಶಿವಲಿಂಗಯ್ಯ ಒತ್ತಾಯಿಸಿದ್ದಾರೆ.
ಬಾನಂದೂರು ಗ್ರಾಮದ ಕೂಗಳತೆ ದೂರದಲ್ಲಿ ಹಂದಿಗುಂದಿ ಅರಣ್ಯ ಪ್ರದೇಶದಲ್ಲಿ ನೂರಾರು ಸಂಖ್ಯೆಯಲ್ಲಿ ಹಂದಿಗಳು ಇದ್ದು, ರಾತ್ರಿ ವೇಳೆ ರೈತರ ಜಮೀನುಗಳ ಮೇಲೆ ದಾಳಿ ಮಾಡಿ ಬೆಳಗ್ಗೆ ಆಗುವಷ್ಟರಲ್ಲಿ ಅರಣ್ಯ ಪ್ರದೇಶವನ್ನು ಸೇರಿಕೊಳ್ಳುತ್ತಿವೆ. ಬಾನಂದೂರು ಗ್ರಾಮದಲ್ಲಿನ ರೈತರ ಜಮೀನುಗಳ ಮೇಲೆ ಕಾಡು ಹಂದಿಗಳು ದಾಂಗುಡಿ ಹಿಡುತ್ತಲೆ ಇವೆ. ಪ್ರತಿ ವರ್ಷ ಅಪಾರ ಪ್ರಮಾಣದ ಬೆಳೆ ಕಾಡು ಪ್ರಾಣಿಗಳ ಹಾವಳಿಗೆ ತುತ್ತಾಗುತ್ತಿವೆ.