

ಹಾನಗಲ್ಲ: ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಸಾತನಹಳ್ಳಿ ಸಮೀಪದ ಕುಂಟನಹೊಸಳ್ಳಿ ಫೀಡರ್ (ಪೂರಕ) ಕಾಲುವೆ ಒಡೆದು 400ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿನ ಗೋವಿನಜೋಳ, ಭತ್ತ ಸೇರಿದಂತೆ ಎಲ್ಲ ಬೆಳೆಗಳು ಜಲಾವೃತವಾಗಿವೆ.
ಮಲೆನಾಡು ಪ್ರದೇಶಾಭಿವೃದ್ಧಿ ಅನುದಾನದಡಿ 15 ಲಕ್ಷ ರೂಪಾಯಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕಳೆದ ಬೇಸಿಗೆಯಲ್ಲಿ ಕುಂಟನಹೊಸಳ್ಳಿ ಫೀಡರ್ ಕಾಲುವೆ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿತ್ತು. ಈ ಕಾಮಗಾರಿ ಇದೀಗ ನೀರು ಪಾಲಾಗಿದೆ. 5 ಕಿ.ಮೀ. ಉದ್ದವಿರುವ ಈ ಕಾಲುವೆಯಲ್ಲಿ ಹೂಳು ತುಂಬಿದ್ದರಿಂದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ನೀರಿನ ರಭಸಕ್ಕೆ ಒಡ್ಡು ಒಡೆದಿದೆ ಎನ್ನಲಾಗಿದೆ. ಈ ಕಾಲುವೆಗೆ ತಾಲೂಕಿನ ಬೊಮ್ಮನಹಳ್ಳಿ, ಬಸಾಪುರ, ಯಳವಟ್ಟಿ, ಯಳ್ಳೂರು ಗ್ರಾಮಗಳ ಕೆರೆ-ಕಟ್ಟೆಗಳು ತುಂಬಿ ಹೆಚ್ಚಾದ ಬೃಹತ್ ಪ್ರಮಾಣದ ನೀರು ಹರಿದು ಬರುತ್ತದೆ. ಕಾಲುವೆ ಮಲ್ಲಿಗ್ಗಾರ ಕಾಲುವೆ ಮೂಲಕ ಕುಂಟನಹೊಸಳ್ಳಿ ಕೆರೆಗೆ ತಲುಪಿ ನಂತರ ಕಂಚಿನೆಗಳೂರು ಒಡ್ಡಿಗೆ ಸೇರುತ್ತದೆ.
ಕಾಟಾಚಾರದ ಕಾಮಗಾರಿ: ಕಾಲುವೆಯಲ್ಲಿನ ಹೂಳು ತೆಗೆಯುವುದು, ಏರಿ ಎತ್ತರಿಸುವುದು, ಹಳ್ಳದ ನೀರು ಕಾಲುವೆಗೆ ಬಾರದಂತೆ ತಡೆಗೋಡೆ ಎತ್ತರಿಸುವುದು ಕಾಮಗಾರಿಯಲ್ಲಿ ಸೇರಿತ್ತು. ಆದರೆ, ಒಂದಷ್ಟು ಕಾಲುವೆ ಹೂಳೆತ್ತಿದ್ದು ಬಿಟ್ಟರೆ ಬೇರೇನನ್ನೂ ಕೆಲಸ ಮಾಡಿಲ್ಲ ಎಂದು ಕಾಲುವೆ ಅಡಿ ಜಮೀನು ಹೊಂದಿರುವ ರೈತರು ಆರೋಪಿಸಿದ್ದಾರೆ.
ತಡೆಗೋಡೆ ಹಾಗೂ ಕಾಲುವೆ ಏರಿ ಎತ್ತರಿಸಿದ್ದರೆ ಇಂಥ ಮಳೆಯಿಂದ ಕಾಲುವೆ ಒಡೆಯುತ್ತಿರಲಿಲ್ಲ. ಗಿಡಗಂಟಿಗಳು ಎತ್ತರಕ್ಕೆ ಬೆಳೆದು ನಿಂತಿದ್ದರೂ ತೆರವುಗೊಳಿಸದಿರುವುದು ಅನಾಹುತಕ್ಕೆ ಕಾರಣವಾಗಿದೆ. ಈ ಕಾಲುವೆ ಗ್ರಾಮದಿಂದ ತೀರಾ ಒಳಗೆ ಇರುವುದರಿಂದ ಕಾಮಗಾರಿ ಗುಣಮಟ್ಟ ನೋಡುವವರೇ ಇಲ್ಲದಂತಾಗಿದೆ ಎನ್ನುತ್ತಾರೆ ರೈತರಾದ ಪುಟ್ಟಪ್ಪ ಹಾವೇರಿ ಹಾಗೂ ಎಂ.ಎಸ್.ದಾನಪ್ಪನವರ.
ಕಾಲುವೆಯಡಿಯಲ್ಲಿನ ಫಲಾನುಭವಿಗಳಾದ ಗದಿಗೆಪ್ಪ ಗೊಂದಿ, ಮಹೇಶ ಗೊಂದಿ, ಗಣಪತಿ ಗೊಂದಿ, ಗುರುಶಾಂತಪ್ಪ ಕಾಡಪ್ಪನವರ, ಪುಟ್ಟಪ್ಪ ಹಾವೇರಿ, ಎಂ.ಎಸ್.ದಾನಪ್ಪನವರ, ಗಿರಿಜವ್ವ ಹಾವೇರಿ, ರಾಮಚಂದ್ರ ಲಮಾಣಿ, ಡಿಗ್ಗಪ್ಪ ಲಮಾಣಿ, ಮಲ್ಲಪ್ಪ ಹಾವೇರಿ, ಲಕ್ಷ್ಮಣ ಹಾವೇರಿ, ರಾಮು ಲಮಾಣಿ, ಸಹದೇವಪ್ಪ ಕೋಟಿ, ಸೋಮಣ್ಣ ಲಮಾಣಿ ಅವರಿಗೆ ಸೇರಿದ ಒಟ್ಟು 500ಕ್ಕೂ ಅಧಿಕ ಜಮೀನುಗಳಿಗೆ ಈ ಫೀಡರ್ ಕಾಲುವೆ ಒಡೆದು ನೀರು ನುಗ್ಗಿ ಫಸಲನ್ನು ಹಾಳು ಮಾಡಿದೆ. ಇದರೊಂದಿಗೆ ಜಮೀನಿನಲ್ಲಿನ ಫಲವತ್ತಾದ ಮಣ್ಣು ಕೂಡ ಕೊಚ್ಚಿ ಹೋಗಿದೆ.
ಇಡೀ 5 ಕಿ.ಮೀ.ವರೆಗೆ ಕಾಲುವೆಯಲ್ಲಿ ಹೂಳು ತುಂಬಿಕೊಂಡಿದೆ. ಹೂಳನ್ನು ತೆರವುಗೊಳಿಸಬೇಕಿದೆ. 15 ಲಕ್ಷ ರೂಪಾಯಿಯಲ್ಲಿ ಕಾಮಗಾರಿ ನಿರ್ವಹಿಸಲಾಗಿದೆ. ಆದರೆ, ಈ ಅನುದಾನ ಸಾಲದಾಗಿದೆ. ಈ ಬಾರಿಯ ಅತಿವೃಷ್ಟಿ ಹಾನಿಯಲ್ಲಿ ಕಾಲುವೆ ಒಡೆದಿರುವ ಕುರಿತು ಸಲ್ಲಿಸಿರುವ ವರದಿಯಲ್ಲಿ ಹೂಳಿನ ಸಮಸ್ಯೆ ತಿಳಿಸಿದ್ದೇವೆ. ಕಾಲುವೆಗೆ ಕಾಂಕ್ರೀಟ್ ಲೈನಿಂಗ್ ಮಾಡಬೇಕಿದೆ.
| ಜಿ.ಎಸ್. ಪಟ್ಟಣಶೆಟ್ಟಿ, ಎಇಇ, ಸಣ್ಣ ನೀರಾವರಿ ಇಲಾಖೆ ಹಾನಗಲ್ಲ