

ಬೆಳ್ತಂಗಡಿ: ಕಲ್ಮಂಜ ಗ್ರಾಮದ ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ಪರಿಸರದಲ್ಲಿ ಮತ್ತೆ ಮೊಸಳೆ ಕಂಡುಬಂದಿದೆ.
ಭಾನುವಾರ ಬೆಳಗ್ಗೆ ಇಲ್ಲಿನ ನೇತ್ರಾವತಿ ನದಿಯಲ್ಲಿ ಕಂಡುಬಂದಿದ್ದ ಮೊಸಳೆ ಮಧ್ಯಾಹ್ನದವರೆಗೂ ಅಲ್ಲೇ ಇದ್ದು ಬಳಿಕ ನದಿಗೆ ಇಳಿದಿತ್ತು. ಸೋಮವಾರ ಹಗಲಿನಲ್ಲಿ ಕಂಡುಬರದ ಮೊಸಳೆ ರಾತ್ರಿ ದೇವಸ್ಥಾನದಿಂದ 100 ಮೀ. ದೂರದಲ್ಲಿರುವ ಕಿರು ಸೇತುವೆ ಪರಿಸರದಲ್ಲಿ ಓಡಾಟ ನಡೆಸುತ್ತಿರುವುದನ್ನು ಸ್ಥಳೀಯರು ಕಂಡಿದ್ದಾರೆ. ಗ್ರಾಮದ ಇನ್ನೊಂದು ಭಾಗಕ್ಕೆ ಸಂಪರ್ಕ ಕಲ್ಪಿಸುವ ಕಿಂಡಿ ಅಣೆಕಟ್ಟು ಸಹಿತ ಕಿರು ಸೇತುವೆಯ ಮೇಲೆ ಓಡಾಟ ನಡೆಸುತ್ತಿದ್ದ ಮೊಸಳೆ ಬಳಿಕ ಕಿಂಡಿ ಅಣೆಕಟ್ಟಿನ ಭಾಗದಲ್ಲಿ ನದಿಗೆ ಇಳಿದಿದೆ. ಮೊಸಳೆ ಕಿರು ಸೇತುವೆ ಮೇಲೆ ಓಡಾಡುತ್ತಿರುವ ದೃಶ್ಯವನ್ನು ಸ್ಥಳೀಯರು ಚಿತ್ರೀಕರಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.