

ಬಳ್ಳಾರಿ: ಕರೊನಾ ಸೋಂಕು ಹರಡದಂತೆ ಇಡೀ ದೇಶದಲ್ಲಿ ಲಾಕ್ಡೌನ್ ಜಾರಿಯಲ್ಲಿದೆ. ಹಲವೆಡೆ ಅಲ್ಲಲ್ಲಿ ವನ್ಯಜೀವಿಗಳು ರಸ್ತೆಗೆ ಇಳಿದಿರುವ ಸುದ್ದಿ ನೋಡಿ, ಓದಿ ತಿಳಿದಿದ್ದ ಬಳ್ಳಾರಿ ಜನರಿಗೆ ಗುರುವಾರ ರಾತ್ರಿ ಅಚ್ಚರಿ ನೀಡಿದ್ದು ಈ ಮೊಸಳೆ!
ನಗರದ ಜನನಿಬಿಡ ಪ್ರದೇಶದಲ್ಲಿ ಮಧ್ಯರಾತ್ರಿ ಮೊಸಳೆ ಪ್ರತ್ಯಕ್ಷ. ನಾಗಲಕೆರೆ ಪ್ರದೇಶದಲ್ಲಿ ಕಾಣಿಸಿಕೊಂಡ ಮೊಸಳೆ, ಅಲ್ಲೆಲ್ಲ ಸಂಚರಿಸತೊಡಗಿತ್ತು. ಕೂಡಲೇ ಅರಣ್ಯ ಇಲಾಖೆಗೆ ಅಧಿಕಾರಿಗಳಿಗೆ ಜನ ಮಾಹಿತಿ ನೀಡಿದ್ರು. ತತ್ಕ್ಷಣ ಸ್ಪಂದಿಸಿದ ಅರಣ್ಯ ಅಧಿಕಾರಿಗಳ ತಂಡ ರಾತ್ರಿಯೇ ಕಾರ್ಯಾಚರಣೆ ನಡೆಸಿತು. ಬಳಿಕ ಮೊಸಳೆಯನ್ನು ಸೆರೆಹಿಡಿದು ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ ಬಿಟ್ಟು ಬಂತು.
ನಾಗಲಕೆರೆ ಪ್ರದೇಶದಲ್ಲಿ ಮೊಸಳೆ ಇರುವ ಬಗ್ಗೆ ಮೊದಲೇ ಮಾಹಿತಿ ಇತ್ತು. ನಿನ್ನೆ ಅಲ್ಲಿನ ಜನರು ಮೊಸಳೆ ಹೊರಗೆ ಬಂದಿದೆ ಎಂದು ಹೇಳಿದ ಕೂಡಲೆ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ತೆರಳಿ ಮೊಸಳೆಯನ್ನು ಹಿಡಿದು ತುಂಗಭದ್ರಾ ಅಣೆಕಟ್ಟೆಗೆ ಬಿಟ್ಟು ಬಂದಿದ್ದಾರೆ ಎಂದು ಡಿಸಿಎಫ್ ಡಾ.ರಮೇಶ್ ಕುಮಾರ್ ತಿಳಿಸಿದರು.