

ತೀರ್ಥಹಳ್ಳಿ: ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಹಸಿವು ನೀಗಿಸುವ ಕೆಲಸ ಮಾಡಿದೆ. ಶೇ 98 ಫಲಾನುಭವಿಗಳಿಗೆ ಇದರ ಲಾಭ ತಲುಪಿದೆ. ಈ ಆಧಾರದಲ್ಲಿ ರಾಜ್ಯದ ಎಲ್ಲ 28 ಸ್ಥಾನಗಳನ್ನೂ ಗೆಲ್ಲುತ್ತೇವೆ ಎಂದು ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ವಿಶ್ವಾಸ ವ್ಯಕ್ತಪಡಿಸಿದರು.
ನರೇಗಾ ಯೋಜನೆಗೆ ಕಳೆದೆರಡು ವರ್ಷಗಳಿಂದ ಅನುದಾನವನ್ನೇ ಬಿಡುಗಡೆ ಮಾಡದ ಕೇಂದ್ರ ಸರ್ಕಾರ ಬಡವರ ಪರವಾದ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸುತ್ತಿದೆ. ಹಸಿವಿಗೆ ಜಾತಿ, ಧರ್ಮದ ವ್ಯತ್ಯಾಸವಿಲ್ಲ. ಶ್ರೀಮಂತರ ಪರವಾಗಿ ಆದಾಯ ತೆರಿಗೆಯನ್ನು ಶೇ.28ರಿಂದ ಶೇ.20ಕ್ಕೆ ಇಳಿಕೆ ಮಾಡಿ, ಬಡವರ ಪರವಾಗಿರುವ ಗ್ಯಾರಂಟಿಗಳನ್ನು ಟೀಕಿಸುವ ಬಿಜೆಪಿ ಆಡಳಿತವನ್ನೇ ಕೊನೆಗಾಣಿಸಬೇಕಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯುಪಿಎ ಆಡಳಿತದಲ್ಲಿ ಗ್ರಾಮೀಣ ಭಾಗದ ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಸಲುವಾಗಿ 76 ಸಾವಿರ ಕೋಟಿ ರೂ. ಮೊತ್ತದ ನರೇಗಾ ಯೋಜನೆ ಜಾರಿಗೆ ಬಂದಿತ್ತು. ಬಿಜೆಪಿ ಈ ಯೋಜನೆಯನ್ನು 25 ಸಾವಿರ ಕೋಟಿ ರೂ.ಗೆ ಇಳಿಕೆ ಮಾಡಿದೆ. ಕಳೆದ ಎರಡು ವರ್ಷಗಳಿಂದ ಈ ಯೋಜನೆಗೆ ಹಣವನ್ನೇ ಕೊಡುತ್ತಿಲ್ಲ. ದೇಶದಲ್ಲಿ 5200 ಅಣೆಕಟ್ಟೆಗಳನ್ನು ಕಟ್ಟಿದ್ದು ಕಾಂಗ್ರೆಸ್. 10 ವರ್ಷಗಳಲ್ಲಿ ಒಂದೇ ಒಂದು ಸುದ್ದಿಗೋಷ್ಠಿಯನ್ನೂ ಕರೆಯದ ವಿಶ್ವದ ಏಕೈಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಂದು ಟೀಕಿಸಿದರು.
114 ಕೋಟಿ ಹಿಂದುಗಳಿದ್ದು ಶೇ. 80 ಜನ ತಮ್ಮ ಪರವಾಗಿ ಮತ ಚಲಾಯಿಸಿದರೆ ನಮ್ಮನ್ನು ಹಿಡಿಯುವವರೇ ಇಲ್ಲ ಎಂಬ ಭಾವನೆ ಬಿಜೆಪಿಗಿದೆ. ಮೀಸಲಾತಿ ರದ್ದು ಮಾಡುವ ಉದ್ದೇಶ ಬಿಜೆಪಿ ಹೊಂದಿದೆ. ಜನವಿರೋಧಿ ಸಿದ್ಧಾಂತವನ್ನೇ ಅರಿಯದ ಬಹಳ ಮಂದಿ ತಮ್ಮ ಲಾಭಕ್ಕಾಗಿ ವಿದ್ಯೆ ಎಂಬ ಜ್ಞಾನವನ್ನು ಮಾರಿಕೊಂಡು ಆ ಪಕ್ಷದಲ್ಲಿರುವುದು ಬೇಸರದ ಸಂಗತಿ ಎಂದರು.
ಆರ್‌ಎಸ್‌ಎಸ್‌ನ ಚಿಂತನಗಂಗಾದ ಆಶಯ ಪಾಲಿಸುವ ಅಜೆಂಡಾವನ್ನು ಬಿಜೆಪಿ ಹೊಂದಿದ್ದು ಅದರಂತೆ ಸಿದ್ಧತೆಯೂ ನಡೆದಿದೆ. ನೆಹರು ಅವರನ್ನು ರಾಜಕೀಯವಾಗಿ ಮುಗಿಸುವ ಸಲುವಾಗಿಯೇ ಪ್ರಾಂತ್ಯವಾರು ಪ್ರದೇಶದ ರಚನೆಗೆ ಕಾರಣರಾಗಿದ್ದ ಕಾಂಗ್ರೆಸ್‌ನ ಸರ್ದಾರ್ ವಲ್ಲಭಭಾಯ್ ಪಟೇಲ್‌ರ ಪ್ರತಿಮೆ ಸ್ಥಾಪನೆ ಮಾಡಿ ನಿಲ್ಲಿಸಿದೆ. ದೇಶದಲ್ಲಿ ರಾಜ್ಯ ಸರ್ಕಾರಗಳ ಅಸ್ತಿತ್ವವನ್ನೇ ನಾಶ ಮಾಡಲು ಹವಣಿಸುತ್ತಿರುವ ಬಿಜೆಪಿಯನ್ನು ಈ ದೇಶದಿಂದಲೇ ತೊಲಗಿಸಬೇಕಿದೆ ಎಂದು ಹೇಳಿದರು.
ಚುನಾವಣಾ ಬಾಂಡ್ ವಿಚಾರಕ್ಕೆ ಸಂಬಂಧಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧವೂ ಪ್ರಕರಣ ದಾಖಲಾಗಬೇಕು. ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡದಿದ್ದಲ್ಲಿ ಖರ್ಗೆ, ಸೋನಿಯಾ ಗಾಂಧಿ ವಿಮಾನದಲ್ಲಿ ಪ್ರಯಣ ಮಾಡಲೂ ಸಾಧ್ಯವಾಗುತ್ತಿರಲಿಲ್ಲ. ಏ.5ರಂದು ನಮ್ಮ ಅಭ್ಯರ್ಥಿ ಗಾಜನೂರಿನಿಂದ ಹಣಗೆರೆವರೆಗೆ ಪ್ರಚಾರ ಮಾಡಲಿದ್ದಾರೆ ಎಂದರು.
ಸೈದ್ಧಾಂತಿಕವಾಗಿ ಈ ಮೊದಲು ಕಾಂಗ್ರೆಸ್-ಜೆಡಿಎಸ್ ಒಂದೇ ಎಂಬ ಭಾವನೆ ಇತ್ತು. ಬಿಜೆಪಿ ಜತೆ ಸೇರುವ ಮೂಲಕ ಜೆಡಿಎಸ್ ಜಾತ್ಯತೀತ ಮನೋಭಾವದವರ ಮತ್ತು ಅಲ್ಪಸಂಖ್ಯಾತರ ವಿಶ್ವಾಸವನ್ನೇ ಕಳೆದುಕೊಂಡಿದೆ. ಈ ದೇಶದಲ್ಲಿ ಕಾಂಗ್ರೆಸ್ ಯಾವತ್ತೂ ಬಿಜೆಪಿ ಜತೆ ಸಖ್ಯ ಬೆಳೆಸಿಲ್ಲ. ನಮ್ಮ ವಿರೋಧ ಬಿಜೆಪಿ ಸಿದ್ಧಾಂತದ ವಿರುದ್ಧವೇ ಹೊರತು ವ್ಯಕ್ತಿಗತವಲ್ಲ ಎಂದರು.
ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಎರಡು ಘಟಕಗಳ ಅಧ್ಯಕ್ಷರಾದ ಕೆಸ್ತೂರು ಮಂಜುನಾಥ್, ಮುಡುಬಾ ರಾಘವೇಂದ್ರ, ಕ್ಷೇತ್ರದ ಚುನಾವಣಾ ವೀಕ್ಷಕ ರಮೇಶ್ ಶೆಟ್ಟಿ, ಜಿ.ಎಸ್.ನಾರಾಯಣರಾವ್, ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ, ಪಪಂ ಅಧ್ಯಕ್ಷೆ ಗೀತಾ ರಮೇಶ್, ಎಚ್.ಬಿ.ಪದ್ಮನಾಭ್, ಸುಶ್ಮಾ ಸಂಜಯ್, ಸುಮಾ ಸುಬ್ರಮಣ್ಯ ಇದ್ದರು.