

ಬೆಂಗಳೂರು: ನಗರದಾದ್ಯಂತ ಕ್ರಿಸ್‌ಮಸ್ ಆಚರಣೆಯ ಸಂಭ್ರಮ ಮನೆ ಮಾಡಿದ್ದು, ಚರ್ಚ್‌ಗಳು ವಿದ್ಯುತ್ ದೀಪಗಳೊಂದಿಗೆ ಕಂಗೊಳಿಸುತ್ತ ವಿಶೇಷ ಪ್ರಾರ್ಥನೆಗೆ ಸಜ್ಜಾಗುತ್ತಿವೆ. ಮತ್ತೊಂದೆಡೆ ಹಬ್ಬದ ಆಚರಣೆಗಾಗಿ ಕ್ರೈಸ್ತ ಬಾಂಧವರು ಮನೆಗಳನ್ನು ಕ್ರಿಸ್‌ಮಸ್ ಟ್ರೀ ಹಾಗೂ ದೀಪಗಳೊಂದಿಗೆ ಅಲಂಕರಿಸಿ, ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಶಿವಾಜಿ ನಗರದ ಸೆಂಟ್ ಮೇರಿಸ್ ಬೆಸಿಲಿಕಾ, ಚಾಮರಾಜಪೇಟೆ ಸೆಂಟ್ ಜೋಸೆಫ್ ಚರ್ಚ್, ಫ್ರೇಝರ್ ಟೌನ್ ಸೆಂಟ್ ಫ್ರಾನ್ಸಿಸ್ ಕ್ಸೇವಿಯರ್ ಕೆಥೆಡ್ರಲ್ ಚರ್ಚ್, ಎಂ.ಜಿ.ರಸ್ತೆಯ ಈಸ್ಟ್ ಪರೇಡ್, ಸೆಂಟ್ ಜಾನ್ಸ್ ಚರ್ಚ್, ಬ್ರಿಗೇಡ್ ರಸ್ತೆಯ ಸೆಂಟ್ ಪ್ಯಾಟ್ರಿಕ್ಸ್ ಚರ್ಚ್, ಟಸ್ಕರ್ ಟೌನ್‌ನ ಸೆಂಟ್ ಆ್ಯಂಡ್ರೂಸ್ ಸೇರಿ ನಗರದಾದ್ಯಂತ ಚರ್ಚ್‌ಗಳು ಕ್ರಿಸ್ಮಸ್ ಆಚರಣೆಗೆ ಸಕಲ ರೀತಿಯಲ್ಲಿ ಸಜ್ಜಾಗಿವೆ.
ಚರ್ಚ್‌ಗಳಲ್ಲಿ ಯೇಸುವಿನ ಜನನದ ಮಹತ್ವ ಸಾರುವ ಗೋದಲಿ, ಕ್ರಿಸ್ಮಸ್ ವೃಕ್ಷ, ಸಾಂತ ಕ್ಲಾಸ್ ಪ್ರತಿಮೆ, ಆಕರ್ಷಕ ನಕ್ಷತ್ರಗಳು, ಆಕಾಶಬುಟ್ಟಿಗಳು, ಅಲಂಕೃತ ಶುಭಫಲಕಗಳನ್ನು ಅಳವಡಿಸಲಾಗುತ್ತಿದೆ. ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿವೆ. ನಗರದ ಖಾಸಗಿ ಕಂಪನಿ, ಕಚೇರಿ, ಮಾಲ್ ಹಾಗೂ ಮಳಿಗೆಗಳಲ್ಲಿ ಬೃಹತ್ ಕ್ರಿಸ್ಮಸ್ ಟ್ರೀ ಹಾಗೂ ಸಾಂತಾ ಕ್ಲಾಸ್‌ಗಳನ್ನು ಇಟ್ಟು ಗ್ರಾಹಕರನ್ನು ಸೆಳೆಯುತ್ತಿವೆ. ನಗರದ ಕೆಲ ಬಡಾವಣೆಗಳಲ್ಲಿ ಸಾಂತ ಕ್ಲಾಸ್ ಅಜ್ಜಂದಿರು ಮಕ್ಕಳಿಗೆ ಉಡುಗೊರೆ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಖಾದ್ಯಗಳ ತಯಾರಿ:
ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, ಎಂ.ಜಿ. ರಸ್ತೆ, ಗಾಂಧಿ ಬಜಾರ್ ಸೇರಿ ವಿವಿಧೆಡೆ ಮಾರುಕಟ್ಟೆಗಳಲ್ಲಿ ಕ್ರಿಸ್ಮಸ್ ಉಡುಗೊರೆ, ಕ್ರಿಸ್ಮಸ್ ಟೋಪಿಗಳು ಸೇರಿ ಅಲಂಕಾರಿಕ ವಸ್ತುಗಳು, ಜೊತೆಗೆ ಯೇಸುವಿನ ತಂದೆ ಜೋಸೆಫ್‌ದೆ ತಾಯಿ ಮರಿಯ, ಬಾಲ ಯೇಸು, ಕುರಿಗಾಹಿಗಳು, ಆಡು-ಕುರಿಗಳು,ದೇವದೂತರ ವಿಗ್ರಹಗಳು ಹೆಚ್ಚಾಗಿ ಮಾರಾಟ ಆಗುತ್ತಿದೆ. ಸೋಮವಾರ ಖರೀದಿಯೂ ಬಿರುಸುಗೊಂಡಿತ್ತು. ಅದೇ ರೀತಿ ಹಬ್ಬಕ್ಕೆ ಬೇಕರಿ, ಹೋಟೆಲ್‌ಗಳು ಕೇಕ್, ಚಾಕಲೇಟ್ ಸೇರಿ ವೈವಿಧ್ಯಮಯ ಖಾದ್ಯಗಳ ತಯಾರಿಕೆಯಲ್ಲಿ ನಿರತವಾಗಿದ್ದವು.
25 ಅಡಿ ಎತ್ತರದ ಸಾಂತ ಕ್ಲಾಸ್:
ಕ್ರಿಸ್‌ಮಸ್ ಹಬ್ಬದ ಅಂಗವಾಗಿ ನಗರದ ಕೋರಮಂಗಲದ ನೆಕ್ಸ್‌ಸ್ ಮಾಲ್ ನಲ್ಲಿ 25 ಅಡಿ ಎತ್ತರದ ಆಕರ್ಷಕ ನೀಲಿ ಬಣ್ಣದ ಸಂತಾ ಕ್ಲಾಸ್ ಪ್ರತಿಕೃತಿ ಎಲ್ಲರನ್ನು ಆಕರ್ಷಿಸುತ್ತಿದ್ದು, ಜೇಡಿ ಮಣ್ಣು, ಫೈಬರ್ ಮೌಲ್ಡ್, ಆಕ್ರಿಲಿಕ್ ಬಣ್ಣ ಬಳಸಿ ಈ ಬೃಹತ್ ಪ್ರತಿಕೃತಿ ನಿರ್ಮಿಸಲಾಗಿದೆ. ಮಕ್ಕಳಿಂದ ಹಿರಿಯರವರೆಗೂ ಎಲ್ಲರ ಗಮನ ಸೆಳೆಯುತ್ತಿದೆ.