ಬೆಂಗಳೂರು | ಮಹಿಳೆ-ಮಕ್ಕಳಿಗೆ ಸುರಕ್ಷಿತ ಮಹಾನಗರ: ಸಿಲಿಕಾನ್ ಸಿಟಿಯಲ್ಲಿ ಕಳೆದ 2 ವರ್ಷಗಳಿಗೆ ತಗ್ಗಿದ ಅಪರಾಧ

Kamal pant
Published on

ಬೆಂಗಳೂರು: ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ 2021ರಲ್ಲಿ ಸಿಲಿಕಾನ್ ಸಿಟಿಯಲ್ಲಿ ಅಪರಾಧ ಪ್ರಕರಣಗಳು ಇಳಿಮುಖವಾಗಿವೆ. ಕೊಲೆ, ಸುಲಿಗೆ, ಕಳ್ಳತನ, ಮಾದಕ ದ್ರವ್ಯ ಪ್ರಕರಣಗಳು ನಿಯಂತ್ರಣದಲ್ಲಿವೆ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಮಾಹಿತಿ ನೀಡಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಲ್ ಪಂತ್, ದೇಶದ ಇತರ ಬೃಹತ್ ನಗರಗಳಲ್ಲಿನ ಅಪರಾಧ ಪ್ರಕರಣಗಳಿಗೆ ಹೋಲಿಸಿದರೆ ಬೆಂಗಳೂರು ಸುರಕ್ಷಿತ ನಗರವಾಗಿದೆ ಎಂದರು. 2021ರಲ್ಲಿ ಕೆಲ ಅಹಿತಕರ ಘಟನೆ ಬಿಟ್ಟರೆ ಉಳಿದಂತೆ ಗಂಭೀರ ಅಪರಾಧ ಪ್ರಕರಣ ನಡೆದಿಲ್ಲ. ನಟ ಪುನೀತ್ ರಾಜ್‌ಕುಮಾರ್ ಅಂತ್ಯ ಸಂಸ್ಕಾರದ ವೇಳೆ ಲಕ್ಷಾಂತರ ಅಭಿಮಾನಿಗಳನ್ನು ನಿಯಂತ್ರಿಸಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸಮರ್ಥವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ರಾಜ್‌ಕುಮಾರ್ ಕುಟುಂಬ ಮತ್ತು ಅಭಿಮಾನಿಗಳ ಸಹಕಾರದಿಂದ ಯಶಸ್ವಿಯಾಗಿದೆ ಎಂದರು.

ಕಳೆದ ವರ್ಷ 145 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಪರಿಚಯಸ್ಥರಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ. ನಗರದಲ್ಲಿ ಯಾವುದೇ ರೌಡಿ ಗುಂಪುಗಳಿಲ್ಲ. ರೌಡಿಗಳ ಮೇಲೆ ನಿಗಾವಹಿಸಲು ಪ್ರತಿ ಠಾಣೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ತಲೆಮರೆಸಿಕೊಂಡಿರುವ ರೌಡಿಗಳ ಪತ್ತೆ ಕಾರ್ಯ, ನೋಟಿಸ್ ನೀಡುವುದು, ಕೋರ್ಟ್‌ಗೆ ಹಾಜರುಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

2021ರಲ್ಲಿ 28 ರೌಡಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಜೈಲಿನಿಂದಲೇ ಅಪರಾಧ ಚಟುವಟಿಕೆಯಲ್ಲಿ ತೊಡಗಿದ್ದ 40 ರೌಡಿಗಳನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಕಮಲ್ ಪಂತ್ ತಿಳಿಸಿದರು.

ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್, ಸುಬ್ರಮಣ್ಯೇಶ್ವರ ರಾವ್, ಜಂಟಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ, ಡಿಸಿಪಿಗಳಾದ ಸಂತೋಷ ಬಾಬು, ಬಿ.ಎಸ್.ಅಂಗಡಿ ಭಾಗವಹಿಸಿದ್ದರು.

375 ಪೋಕ್ಸೋ ಪ್ರಕರಣ: ಪೋಕ್ಸೋ ಕಾಯ್ದೆಯಡಿ 375 ಪ್ರಕರಣ ದಾಖಲಾಗಿವೆ. ಬಾಲ ಕಾರ್ಮಿಕ ಕಾಯ್ದೆಡಿ 10 ಪ್ರಕರಣ, ಬಾಲ್ಯ ವಿವಾಹ ತಡೆ ಕಾಯ್ದೆಯಡಿ 13 ಪ್ರಕರಣ ಸೇರಿ ಮಕ್ಕಳ ಸಂಬಂಧ 450 ಪ್ರಕರಣಗಳು ದಾಖಲಾಗಿವೆ.

6,423 ಸೈಬರ್ ಪ್ರಕರಣ: 2021ರಲ್ಲಿ 6,423 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 787 ಪ್ರಕರಣ ಪತ್ತೆ ಹಚ್ಚಲಾಗಿದೆ. 5,479 ಪ್ರಕರಣಗಳು ತನಿಖೆಯ ವಿವಿಧ ಹಂತಗಳಲ್ಲಿವೆ. 2019ನೇ ಸಾಲಿನಲ್ಲಿ 10,553 ಹಾಗೂ 2020ನೇ ಸಾಲಿನಲ್ಲಿ 8,892 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಇದಕ್ಕೆ ಹೋಲಿಕೆ ಮಾಡಿದರೆ, ಕಳೆದ ವರ್ಷ ಸೈಬರ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ.

ಅಪರಾಧ ಪ್ರಕರಣಗಳ ಅಂಕಿ-ಅಂಶ ಇಲ್ಲಿದೆ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net